ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 30 ಜನರ ಬಂಧನ

Published : 21 ಸೆಪ್ಟೆಂಬರ್ 2024, 0:18 IST
Last Updated : 21 ಸೆಪ್ಟೆಂಬರ್ 2024, 0:18 IST
ಫಾಲೋ ಮಾಡಿ
Comments

ದಾವಣಗೆರೆ: ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಬೆಳಗಿನ ಜಾವದವರೆಗೆ ಒಟ್ಟು 30 ಜನರನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಆರೋಪಿಗಳ ಮನೆಗೆ ತೆರಳಿ ಬಂಧಿಸಲಾಗಿದೆ.

ಇಲ್ಲಿನ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಲ್ಲಿ ಗುರುವಾರ ರಾತ್ರಿ ಕಲ್ಲು ತೂರಾಟ ನಡೆದ ಬಳಿಕ 40ರಿಂದ 50 ಮಂದಿಯಿದ್ದ ದುಷ್ಕರ್ಮಿಗಳ ಗುಂಪು ಸಮೀಪದ ಆನೆಕೊಂಡ ಹಾಗೂ ಮಟ್ಟಿಕಲ್ಲು ಪ್ರದೇಶದಲ್ಲಿನ ಕೆಲವು ಗಲ್ಲಿಗಳಿಗೆ ನುಗ್ಗಿ ದಾಂದಲೆ ನಡೆಸಿದೆ. ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿಗಳ ಗಾಜು ಪುಡಿಯಾಗಿವೆ. ಬೈಕ್‌, ಕಾರ್‌ ಸೇರಿದಂತೆ ಹತ್ತಾರು ವಾಹನಗಳು ಜಖಂಗೊಂಡಿವೆ.

ಈ ಕುರಿತು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ‌. ನಗರದಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸದ್ಯ ವಾತಾವರಣ ಸಹಜ ಸ್ಥಿತಿಗೆ ಬಂದಿದೆ. ವ್ಯಾಪಾರ– ವಹಿವಾಟು ಎಂದಿನಂತೆ ನಡೆಯಿತು. ಶಾಂತಿ ಸುವ್ಯವಸ್ಥೆಗಾಗಿ ಹಳೆ ದಾವಣಗೆರೆಯ ಸೂಕ್ಷ್ಮ ಪ್ರದೇಶದ ಪ್ರಮುಖ ಮಾರ್ಗಗಳಲ್ಲಿ ಪೊಲೀಸರು ಸಂಜೆ ಪಥ ಸಂಚಲನ ನಡೆಸಿದರು.

ರಾಜ್ಯ ಕಾನೂನು, ಸುವ್ಯವಸ್ಥೆ ಎಡಿಜಿಪಿ ಆರ್‌.ಹಿತೇಂದ್ರ ಅವರು ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪೂರ್ವ ವಲಯ ಡಿಐಜಿ ರಮೇಶ್ ಬಾನೋತ್‌ ಹಾಗೂ ಎಸ್‌ಪಿ ಉಮಾ ಪ್ರಶಾಂತ್‌ ಅವರಿಂದ ಮಾಹಿತಿ ಪಡೆದರು.

‘ತಲ್ವಾರ್ ಮಚ್ಚು ಬಳಸೋದು ಗೊತ್ತು’

‘ಹಿಂದೂಗಳ ವಿರುದ್ಧ ಬೇಕಾಬಿಟ್ಟಿ ಪ್ರಕರಣ ದಾಖಲಿಸಿ ಬಂಧಿಸುತ್ತಿರುವ ರಾಜ್ಯ ಸರ್ಕಾರವೇ ಈ ಘಟನೆಗೆ ಹೊಣೆ. ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಹಿಂದೂಗಳನ್ನು ಬಂಧಿಸಿದರೆ ಹಳ್ಳಿಹಳ್ಳಿಗಳಿಂದ ಬರುತ್ತೇವೆ. ಸಂದರ್ಭ ಬಂದರೆ ತಲ್ವಾರ್ ಮಚ್ಚು ಬಳಸೋದೂ ನಮಗೆ ಗೊತ್ತು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ದಾಂದಲೆ ನಡೆದ ಮಟ್ಟಿಕಲ್ಲು ಆನೆಕೊಂಡ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ  ಮಾತನಾಡಿದರು. ‘ಬೇರೆ ರಾಷ್ಟ್ರದ ಧ್ವಜ ಹಾರಿಸಿದವರನ್ನು ಗುಂಡಿಕ್ಕಿ ಕೊಲ್ಲಬೇಕು. ಹಿಂದೂ‌ ದೇವರ ವಿರೋಧಿ ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಭಾರತ್ ಮಾತಾಕಿ‌ ಜೈ ಎಂದರೆ ಗುಂಡು ಹೊಡೆಯುತ್ತೀರಿ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲ್ಲ. ಇಂತಹ ವಿಚಾರಗಳಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಮುಂದೆಯೂ  ಇಂಥ ಘಟನೆ ನಡೆದರೆ ಹಿಂದೂಗಳ ರಕ್ಷಣೆಗೆ ಬೀದಿಗೆ ಇಳಿಯಬೇಕಾಗುತ್ತದೆ. ಬುಲ್ಡೋಜರ್ ಸಂಸ್ಕೃತಿ ಬಂದರೆ ಎಲ್ಲರೂ ಸುಮ್ಮನಾಗುತ್ತಾರೆ’ ಎಂದರು.

‘ಪೊಲೀಸರ ಮೇಲೇ ಹಲ್ಲೆಯಾಗುತ್ತಿದ್ದರೂ ರಕ್ಷಣೆ ಮಾಡಿಕೊಳ್ಳಲು ಆಗಿಲ್ಲ. ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ದೂರಿದರು.  ‘ದಾವಣಗೆರೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದ್ದು ಕೆಣಕುವ ಕೆಲಸ ಮಾಡಬೇಡಿ. ಮುಖ್ಯಮಂತ್ರಿಯಾಗುವ ಕನಸಿನಲ್ಲಿ ಗೃಹ ಸಚಿವರಿದ್ದು ಅವರಿಗೆ ಏನು ಮಾತನಾಡುತ್ತೇನೆ ಎಂಬ ಅರಿವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT