ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮಹಾನಗರ ಪಾಲಿಕೆ: ₹ 17.65 ಕೋಟಿ ಉಳಿತಾಯ ಬಜೆಟ್ ಮಂಡನೆ

ಆಡಳಿತಾರೂಢ ಕಾಂಗ್ರೆಸ್‌ನಿಂದ 2024–25ನೇ ಸಾಲಿನ ಆರ್ಥಿಕ ವರ್ಷಕ್ಕೆ ₹ 563.80 ಕೋಟಿ ಗಾತ್ರದ ಬಜೆಟ್‌
Published 28 ಫೆಬ್ರುವರಿ 2024, 7:43 IST
Last Updated 28 ಫೆಬ್ರುವರಿ 2024, 7:43 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಆಡಳಿತಾರೂಢ ಕಾಂಗ್ರೆಸ್‌ 2024–25ನೇ ಸಾಲಿನ ಆರ್ಥಿಕ ವರ್ಷಕ್ಕೆ ₹ 563.80 ಕೋಟಿ ಗಾತ್ರದ ಬಜೆಟ್‌ನ್ನು ಮಂಗಳವಾರ ನಗರದ ಪಾಲಿಕೆ ಸಭಾಭವನದಲ್ಲಿ ಮಂಡಿಸಿತು. 

ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಅವರು ₹ 17.65 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.

ಬಜೆಟ್‌ನಲ್ಲಿ ಕೆಲವು ಹೊಸ ಯೋಜನೆ, ಕಾಮಗಾರಿಗಳಿಗೆ ಅನುದಾನ ಘೋಷಿಸಿದ್ದರೂ, ಈ ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ. 

ಮಾಲಿನ್ಯ ನಿಯಂತ್ರಣ: ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಮ್ ಅಡಿಯಲ್ಲಿ 2023-24ನೇ ಸಾಲಿಗೆ ಬಿಡುಗಡೆಯಾದ ₹ 7 ಕೋಟಿ ಹಾಗೂ 2024-25ನೇ ಸಾಲಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಅಂದಾಜು ₹ 10 ಕೋಟಿ ಮೊತ್ತದಲ್ಲಿ ಪ್ರಮುಖ ರಸ್ತೆಗಳಲ್ಲಿ ಪೇವರ್ಸ್‌ಗಳ ಅಳವಡಿಕೆಗೆ ನಿರ್ಧರಿಸಲಾಗಿದೆ.

ಶುದ್ಧೀಕರಣ ಘಟಕ: ಎನ್.ಜಿ.ಟಿ ಪರಿಸರ ಪರಿಹಾರ ನಿಧಿಯಡಿ ನಗರದ ಕುಂದುವಾಡ ಗ್ರಾಮದ ಹಿಂಭಾಗದಲ್ಲಿ ಹಾಲಿ ಇರುವ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ಉನ್ನತೀಕರಿಸಲು / ಪುನರ್ ನಿರ್ಮಿಸಲು ₹ 25 ಕೋಟಿ ಅನುದಾನ ಘೋಷಿಸಲಾಗಿದೆ.

ಶಾಪಿಂಗ್‌ ಮಾಲ್‌: ಪಾಲಿಕೆ ಒಡೆತನದ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಶಾಪಿಂಗ್ ಮಾಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಸೈ-ವಾಕ್ ನಿರ್ಮಾಣ: ಪಾಲಿಕೆ, ರೈಲ್ವೆ ನಿಲ್ದಾಣದ ಮುಂಭಾಗ ಅಧಿಕ ವಾಹನ ದಟ್ಟಣೆಯಿದ್ದು, ಪಾದಚಾರಿಗಳ ಸುಗಮ ಓಡಾಟಕ್ಕೆ ಸೈ-ವಾಕ್ ನಿರ್ಮಾಣ ಮಾಡಲು ಪ್ರಾಥಮಿಕವಾಗಿ ಅಂದಾಜು ₹ 1 ಕೋಟಿ ಮೀಸಲಿಡಲಾಗಿದೆ.

ಉದ್ಯಾನಗಳ ಅಭಿವೃದ್ಧಿ: ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಆಯ್ದ ಉದ್ಯಾನಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿದ್ದು, ಒಟ್ಟು ₹ 5 ಕೋಟಿ ಅನುದಾನ ನೀಡಲಾಗಿದೆ.

ಫ್ಲೈಓವರ್‌: ಈರುಳ್ಳಿ ಮಾರ್ಕೆಟ್‌ನಿಂದ ವಿನೋಬ ನಗರದ 4ನೇ ಮುಖ್ಯ ರಸ್ತೆವರೆಗೆ ಫ್ಲೈಓವರ್‌ ನಿರ್ಮಿಸಲು ಉದ್ದೇಶಿಸಿದ್ದು ಕಾರ್ಯಸಾಧ್ಯತಾ ವರದಿ, ಡಿಪಿಆರ್‌ ತಯಾರಾದ ಬಳಿಕ ವೆಚ್ಚದ ಅಂದಾಜು ಸಿಗಲಿದ್ದು, ಈ ವರ್ಷವೇ ಯೋಜನೆ ಕಾರ್ಯಾರಂಭ ಮಾಡುವುದಾಗಿ ತಿಳಿಸಲಾಗಿದೆ.

ಕೆರೆಗಳ ಅಭಿವೃದ್ಧಿ: ನಗರ ವ್ಯಾಪ್ತಿಯ ಆವರಗೆರೆ ಕೆರೆ ಹಾಗೂ ಬಾತಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ತಿಳಿಸಲಾಗಿದ್ದರೂ, ಇದಕ್ಕಾಗಿ ನಿರ್ದಿಷ್ಟ ಅನುದಾನವನ್ನು ಘೋಷಿಸಿಲ್ಲ.

ವಿದ್ಯುತ್ ದೀಪ: ನಗರದ ಬಹುತೇಕ ಕಡೆಗಳಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಪಿ.ಪಿ.ಪಿ ಮಾದರಿಯಲ್ಲಿ ಅಳವಡಿಸಿದ್ದು, ಬಾಕಿ ಉಳಿದ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ₹ 2.5 ಕೋಟಿ ಕಾಯ್ದಿಡಲಾಗಿದೆ.

ರಸ್ತೆ, ಚರಂಡಿ, ಯುಜಿಡಿ, ಉದ್ಯಾನ ಇತ್ಯಾದಿ ಮೂಲ ಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಒಟ್ಟು ₹ 133.4 ಕೋಟಿ ವೆಚ್ಚ ಘೋಷಿಸಲಾಗಿದೆ.

ಮೇಯರ್ ವಿನಾಯಕ ಪೈಲ್ವಾನ್‌, ಉಪಮೇಯರ್ ಯಶೋಧಾ ಯಗ್ಗಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಕೆ., ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಉದಯಕುಮಾರ್ ಎಚ್‌., ಅಬ್ದುಲ್ ಲತೀಫ್‌ ಅವರು ಬಜೆಟ್‌ ಪ್ರತಿ ಬಿಡುಗಡೆಗೊಳಿಸಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನಕುಮಾರ್ ಹಾಗೂ ಬಿಜೆಪಿ ಸದಸ್ಯರು ಖಾಲಿ ಡಬ್ಬ ಪ್ರದರ್ಶಿಸಿ ‘ಬಜೆಟ್‌ನಲ್ಲಿ ಏನೂ ಇಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನಕುಮಾರ್ ಹಾಗೂ ಬಿಜೆಪಿ ಸದಸ್ಯರು ಖಾಲಿ ಡಬ್ಬ ಪ್ರದರ್ಶಿಸಿ ‘ಬಜೆಟ್‌ನಲ್ಲಿ ಏನೂ ಇಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು

ಬಜೆಟ್‌ನಲ್ಲಿ ಘೋಷಿಸಿದ ಅಂಶಗಳು

* ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕೆಲವು ವಾರ್ಡ್‌ಗಳಲ್ಲಿ ವಾಚನಾಲಯ / ಕಿರು ಗ್ರಂಥಾಲಯಗಳ ಸ್ಥಾಪನೆ

* ನಗರದಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ₹ 50 ಲಕ್ಷ ಅನುದಾನ ಮೀಸಲು

* ನಗರದ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಉಬ್ಬುಗಳನ್ನು ಹಾಳಾಗಿರುವ ಪೇವರ್ಸ್‌ಗಳನ್ನ ಸರಿಪಡಿಸಲು ₹ 2 ಕೋಟಿ ಮೀಸಲು

* ಅಂತರ್ಜಲ ವೃದ್ಧಿಸಲು ₹ 50 ಲಕ್ಷ ವೆಚ್ಚದಲ್ಲಿ ಇಂಗುಗುಂಡಿಗಳ ನಿರ್ಮಾಣ

* ಘನ ತ್ಯಾಜ್ಯ ವಿಲೇವಾರಿಗೆ ವಾಹನಗಳ ಖರೀದಿ ಲ್ಯಾಂಡ್‌ ಫಿಲ್‌ ಸೈಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ₹ 16.85 ಕೋಟಿ

* ಹಸಿ ಕಸ ಒಣ ಕಸ ವಿಂಗಡಿಸಲು ಪ್ಲಾಸ್ಟಿಕ್ ಬಕೆಟ್‌ಗಳ ವಿತರಣೆ

* ವೈಜ್ಞಾನಿಕವಾಗಿ ಪ್ರಾಣಿಗಳ ವಧೆ ಮಾಡಲು ಕೆಯುಐಡಿಎಫ್‌ಸಿ ಸಹಯೋಗದಲ್ಲಿ ₹ 6 ಕೋಟಿ ವೆಚ್ಚದಲ್ಲಿ ವಧಾಗಾರ ನಿರ್ಮಾಣ

* ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ₹ 50 ಲಕ್ಷ ಅನುದಾನ

* ‘ಮೇಯರ್ ಕಪ್‌’ ಕ್ರೀಡಾಕೂಟ ಆಯೋಜನೆಗೆ ₹ 10 ಲಕ್ಷ ಪಾಲಿಕೆ ನೌಕರರ ಕ್ರೀಡಾಕೂಟಕ್ಕೆ ₹ 25 ಲಕ್ಷ ಅನುದಾನ

* ಶಿಥಿಲಗೊಂಡಿರುವ ಗರಡಿ ಮನೆಗಳ ನವೀಕರಣಕ್ಕೆ ₹ 50 ಲಕ್ಷ

* ನಗರದ 3 ಜಾಗಗಳಲ್ಲಿ ₹ 2.30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ

* ಡೇ ನಲ್ಮ್‌ ಯೋಜನೆಯಡಿ 4 ಜಾಗಗಳಲ್ಲಿ ವೆಂಡಿಂಗ್‌ ಝೋನ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೂ 3 ಜಾಗಗಳಲ್ಲಿ ₹ 1.76 ಕೋಟಿ ವೆಚ್ಚದಲ್ಲಿ ವೆಂಡಿಂಗ್ ಝೋನ್‌ಗಳ ನಿರ್ಮಾಣ

* ಪಾಲಿಕೆಯ ಅಧಿಕಾರಿ/ ನೌಕರರ ವಸತಿ ಗೃಹಗಳು ಶಿಥಿಲಗೊಂಡಿದ್ದು ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಲು ಪ್ರಾರಂಭಿಕವಾಗಿ ₹ 1 ಕೋಟಿ ಒದಗಿಸುವುದು

* ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ಅಂದಾಜು ₹ 65 ಲಕ್ಷ ಮೀಸಲು

* ಬೇಸಿಗೆಯಲ್ಲಿ ನೀರಿನ ಅಭಾವದಿಂದ ಪಕ್ಷಿಗಳು ಪರಿತಪಿಸುವುದನ್ನು ತಪ್ಪಿಸಲು ಉದ್ಯಾನಗಳಲ್ಲಿ ಕುಡಿಯುವ ನೀರಿನ ಕಿರು ತೊಟ್ಟಿ ಬಟ್ಟಲುಗಳ ವ್ಯವಸ್ಥೆ ಮಾಡಲು ₹ 5 ಲಕ್ಷ ಮೀಸಲು

ಖಾಲಿ ಡಬ್ಬ ಬಜೆಟ್‌: ಬಿಜೆಪಿ

ಕಾಂಗ್ರೆಸ್‌ ಬಜೆಟ್‌ ಮಂಡಿಸುತ್ತಿದ್ದಂತೆ ಖಾಲಿ ಡಬ್ಬ ಹಿಡಿದ ಬಿಜೆಪಿ ಸದಸ್ಯರು ‘ಇದೊಂದು ಖಾಲಿ ಡಬ್ಬ ಬಜೆಟ್‌ ಆಗಿದೆ. ಇದರಲ್ಲಿ ಹೊಸದಾಗಿ ಏನನ್ನೂ ಘೋಷಿಸಿಲ್ಲ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಖಾಲಿ ಡಬ್ಬದಲ್ಲಿ ಹಣ ಹಾಕಿ ‘ಇದೊಂದು ಉತ್ತಮ ಬಜೆಟ್‌’ ಆಗಿದೆ ಎಂದು ತಿರುಗೇಟು ನೀಡಿದರು. ಬಜೆಟ್‌ ಮಂಡನೆಗೂ ಮುನ್ನ ಕಳೆದ ಸಾಲಿನ ಬಜೆಟ್‌ನ ಬಗ್ಗೆ ಮೊದಲು ಚರ್ಚೆಯಾಗಲಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು. ಅವರ ವಿರೋಧದ ನಡುವೆಯೂ ಬಜೆಟ್‌ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT