ಗುರುವಾರ , ಜನವರಿ 30, 2020
19 °C

‘ಕ್ಷತ್ರಿಯ ಸಮಾಜದವರಿಗೆ ಡಿಸಿಎಂ ಸ್ಥಾನ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕ್ಷತ್ರಿಯ ಸಮಾಜದ ಶಾಸಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್‌ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್‌ ಸಿಂಗ್‌ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷತ್ರಿಯ ಸಮಾಜದವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಿದ್ದಾರೆ. ಜಿಲ್ಲೆಯಲ್ಲಿ 6 ಬಿಜೆಪಿ ಶಾಸಕರ ಗೆಲುವಿಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಪ್ರಥಮ ಹೆಜ್ಜೆ ಇಟ್ಟವರು ಸಮುದಾಯದ ಶಾಸಕರು. ಹೀಗಾಗಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಯಶವಂತರಾವ್‌ ಜಾಧವ್‌ ಕಾರಣರಾಗಿದ್ದಾರೆ. ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಬೇಕು. ಅಲ್ಲದೇ ಸಮುದಾಯದ ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಒಕ್ಕೂಟದ ಅಡಿಯಲ್ಲಿ ಕ್ಷತ್ರಿಯ ಸಮುದಾಯಗಳನ್ನು ಒಂದುಗೂಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಒಕ್ಕೂಟ ರಚಿಸಲಾಗುವುದು ಎಂದು ಹೇಳಿದರು.

ಮುಖಂಡರಾದ ಬಾಡದ ಆನಂದರಾಜ್‌, ಪರಶುರಾಂ, ನರಸಿಂಗ್‌ ಗೋಸಾಯಿ, ಚಂದ್ರನಾಯ್ಕ, ಪ್ರವೀಣ್‌ಕುಮಾರ್‌, ಜ್ಞಾನೇಶ್‌, ಗೋಪಿನಾಥ್‌, ಮಹಾಂತೇಶ್‌ ಕಲಾಲ್‌ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು