ಸೋಮವಾರ, ಏಪ್ರಿಲ್ 6, 2020
19 °C

ಅನುದಾನಿತ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಕ್ರಮ: ಸಂಸದ ಸಿದ್ದೇಶ್ವರ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಸೇರಿ ಇನ್ನಿತರೆ ಬೇಡಿಕೆಗಳ ಈಡೇರಿಸುವ ಸಂಬಂಧ ಮುಖ್ಯಮಂತ್ರಿ ಜತೆ ಸಮಾಲೋಚಿಸುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಭಾನುವಾರ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಂಘದ ಸರ್ವ ಸದಸ್ಯರ ರಾಜ್ಯಮಟ್ಟದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಶಿಕ್ಷಕರು ಹಾಗೂ ಅನುದಾನಿತ ಶಿಕ್ಷಕರ ನಡುವಿನ ವೇತನದಲ್ಲಿ ತಾರತಮ್ಯವಾಗಿದೆ. ಇದರ ನಿವಾರಣೆಗೆ ₹309 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಬಸವರಾಜ ಹೊರಟ್ಟಿ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ನಾನೂ ಸಹ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

‘ಅನುದಾನಿತ ಶಾಲೆಗಳಲ್ಲಿ 40 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ಇಲ್ಲಿಯೂ ಸರ್ಕಾರಿ ಶಾಲೆಗಳಂತೆ 30:1ರ ಅನುಪಾತ ಕಾಯ್ದುಕೊಳ್ಳಬೇಕು. ಎನ್‌ಪಿಎಸ್ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸರ್ಕಾರಿ ನೌಕರರಂತೆ ಆರೋಗ್ಯ ಭಾಗ್ಯ ಸೌಲಭ್ಯ ವಿಸ್ತರಿಸಬೇಕು ಎಂಬ ಬೇಡಿಕೆಗಳ ಬಗ್ಗೆಯೂ ಗಮನ ಹರಿಸಲಾಗುವುದು’ ಎಂದು ತಿಳಿಸಿದರು.

ಶಿಕ್ಷಕ ವೃತ್ತಿ ಗೌರವಯುತವಾದುದು. ಗುರು ಸ್ಥಾನಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರಿಲ್ಲದೆ ಯಾವುದೇ ವೃತ್ತಿ ಇಲ್ಲ. ಬೇಡಿಕೆಗಳಿಗೆ ಒತ್ತಾಯಿಸುವ ಜತೆಯಲ್ಲೇ ನಿಮ್ಮ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸಬೇಕು ಎಂದೂ ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ. ಕೆ. ಹನುಮಂತಪ್ಪ, ಅನುದಾನಿತ ಶಿಕ್ಷಕರಿಗೆ ಎಲ್ಲಾ ಸರ್ಕಾರಗಳು ಬೆಣ್ಣೆಯ  ಮಾತುಗಳನ್ನಾಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2009ರ ಆರ್.ಟಿ.ಇ. ಕಾಯ್ದೆ ಅನ್ವಯ ಶಿಕ್ಷಕರು ಹಾಗೂ ಮಕ್ಕಳ ಅನುಪಾತ 1:30 ಇರಬೇಕು. ಆದರೆ ಸರ್ಕಾರ ಸರ್ಕಾರಿ ಶಾಲೆ ಶಿಕ್ಷಕರಿಗೆ ಇದೇ ಅನುಪಾತ ಇಟ್ಟು, ಅನುದಾನಿತ ಶಿಕ್ಷಕರಿಗೆ 1:40 ಅನುಪಾತ ನಿಗದಿ ಪಡಿಸಿದೆ. ಈ ವಿಷಯದಲ್ಲಿ ಕೋರ್ಟ್‌ ನಮ್ಮ ಪರವಾಗಿ ತೀರ್ಪು ನೀಡಿದ್ದರೂ ಈ ಪ್ರಮಾಣದ ನಿಗದಿಗೆ ಪ್ರಯತ್ನ ನಡೆಸಲಾಗುತ್ತಿದೆ. ಇದನ್ನು ಸಂಘ ಒಪ್ಪುವುದಿಲ್ಲ. ಈ ಬಗ್ಗೆ ಶಿಕ್ಷಕರು ಆತಂಕ ಪಡಬೇಕಿಲ್ಲ. ಜೂನ್ ವೇಳೆಗೆ ಈ ಸಮಸ್ಯೆ ಬಗೆಹರಿಯುತ್ತವೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್, ‘ಅನುದಾನಿತ ಶಿಕ್ಷಕರನ್ನು ಹೆಚ್ಚುವರಿ ಎಂದು ಕೆಲಸದಿಂದ ಹೊರ ತೆಗೆಯಲು ಈ ಹಿಂದೆ ಪ್ರಯತ್ನ ನಡೆಸಲಾಗಿತ್ತು. ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಕಾರಣದಿಂದ ಆ ಪ್ರಯತ್ನ ಕೈಬಿಡಲಾಯಿತು. ಆದರೆ, ಕೆಲವರು ಪರಿಷತ್ ಸದಸ್ಯರು ಹಾಗೂ ಸಚಿವರಿಂದಲೇ ಅನುದಾನಿತ ಶಿಕ್ಷಕರನ್ನು ಉಳಿಸಲಾಯಿತು ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅನುಪಾತದಲ್ಲಿನ ವ್ಯತ್ಯಾಸ ಹಾಗೂ ಕಾಲ್ಪನಿಕ ವೇತನ ಸಮಸ್ಯೆಗಳು ನಮ್ಮನ್ನು ಭೂತದಂತೆ ಕಾಡುತ್ತಿವೆ. ಕಾಲ್ಪನಿಕ ವೇತನ ಬಗೆಹರಿಸಲು ಈಗಾಗಲೇ ಮೂರು ಹೋರಾಟ ಮಾಡಿದ್ದೇವೆ. ಬಜೆಟ್‌ನಲ್ಲಿ ಈ ವಿಷಯ ಬಗೆಹರಿಸದಿದ್ದರೆ ಮತ್ತೊಂದು ಹೋರಾಟಕ್ಕೆ ಸಿದ್ಧವಾಗಬೇಕಿದೆ’ ಎಂದು ಕರೆ ನೀಡಿದರು.

ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಸಂಘದ ಪದಾಧಿಕಾರಿಗಳಾದ ಎನ್. ರಾಜಗೋಪಾಲ್, ಸಿ. ಮುತ್ತಯ್ಯ, ಗೋಪಾಲ್ ಹೂಗಾರ್, ಸಿ.ಎನ್. ಬೆಟ್ಟೇಗೌಡ, ಬಸವರಾಜ ಮಡಿವಾಳರ್, ಸುರಾನಾಯಕ, ಶಕುಂತಲ, ಜಾರ್ಜ್ ರಾಯಪ್ಪ, ಸಂಘದ ದಾವಣಗೆರೆ ಜಿಲ್ಲಾ ಅಧ್ಯಕ್ಷ ಎಸ್.ಎಂ. ಮಡಿವಾಳರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು