ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಸೊಳ್ಳೆ ನಿಯಂತ್ರಣಕ್ಕಿಲ್ಲ ‘ಫಾಗಿಂಗ್‌’ ಕಾರ್ಯಾಚರಣೆ

ಆರೋಗ್ಯ ಇಲಾಖೆ– ಸ್ಥಳೀಯ ಸಂಸ್ಥೆಯ ಸಮನ್ವಯತೆಯ ಕೊರತೆ
Published 7 ಜುಲೈ 2024, 7:32 IST
Last Updated 7 ಜುಲೈ 2024, 7:32 IST
ಅಕ್ಷರ ಗಾತ್ರ

ದಾವಣಗೆರೆ: ಡೆಂಗಿ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವ ‘ಫಾಗಿಂಗ್‌’ ವ್ಯವಸ್ಥೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಸಮನ್ವಯತೆಯ ಕೊರತೆಯಿಂದ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಲಾರ್ವ ಹಂತದಲ್ಲಿಯೇ ಸೊಳ್ಳೆ ನಾಶಪಡಿಸುವ ಪ್ರಯತ್ನಕ್ಕಷ್ಟೇ ಡೆಂಗಿ ನಿಯಂತ್ರಣ ಕಾರ್ಯಾಚರಣೆ ಸೀಮಿತವಾಗಿದೆ.

ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಸಾಂಕ್ರಾಮಿಕ ರೋಗಗಳು ಪ್ರಸಕ್ತ ವರ್ಷ ತುಸು ಹೆಚ್ಚಾಗಿ ಬಾಧಿಸುತ್ತಿವೆ. ಏರುತ್ತಿರುವ ಡೆಂಗಿ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆರೋಗ್ಯ ಇಲಾಖೆಯ ಕಾರ್ಯಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹೆಗಲಾಗಿವೆ. ಸೊಳ್ಳೆ ನಿಯಂತ್ರಣಕ್ಕೆ ಕೊನೆಯ ಅಸ್ತ್ರವಾದ ‘ಫಾಗಿಂಗ್‌’ ಹೆಚ್ಚಿಸಲು ನಿರ್ದೇಶನ ಸಿಕ್ಕಿದೆ. ಆದರೆ, ಈ ಪ್ರಯತ್ನಕ್ಕೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸ್ಪಂದಿಸುತ್ತಿಲ್ಲ.

ಸೊಳ್ಳೆ ನಿಯಂತ್ರಣವು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಒಗ್ಗಟ್ಟಿನ ಪ್ರಯತ್ನ ಬೇಡುತ್ತಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಪ್ರದೇಶ, ಸೊಳ್ಳೆ ಸೃಷ್ಟಿಯಾಗುವ ಸ್ಥಳಗಳನ್ನು ಪತ್ತೆ ಹಚ್ಚಿ ‘ಫಾಗಿಂಗ್‌’ ಮಾಡುವ ಅಗತ್ಯವಿದೆ. ಆರೋಗ್ಯ ಇಲಾಖೆ ನೀಡುವ ನಿರ್ದೇಶನಗಳನ್ನು ಸ್ಥಳೀಯ ಸಂಸ್ಥೆಗಳು ಉಪೇಕ್ಷಿಸುತ್ತಿವೆ. ಪ್ರತಿ ನಿತ್ಯ ‘ಫಾಗಿಂಗ್‌’ ನಡೆಸುತ್ತಿರುವುದಾಗಿ ಸ್ಥಳೀಯ ಸಂಸ್ಥೆಗಳು ಸಮರ್ಥನೆ ನೀಡುತ್ತಿವೆಯಾದರೂ ಸೊಳ್ಳೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಆರೋಗ್ಯ ಇಲಾಖೆಯ ಕಳವಳ.

ಡೆಂಗಿ ಹರಡುವ ‘ಈಡೀಸ್‌ ಈಜಿಪ್ಟಿ’ ಹಗಲು ಹೊತ್ತಿನಲ್ಲಿ ಹೆಚ್ಚು ಸಕ್ರಿಯ. ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆ, ಕೆಲವೇ ದಿನಗಳಲ್ಲಿ ನೀರಿನಿಂದ ಹೊರಬರುತ್ತದೆ. ಲಾರ್ವ, ಮೊಟ್ಟೆಯ ಹಂತದಲ್ಲಿಯೇ ನಾಶಪಡಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ವಾರಕ್ಕೊಮ್ಮೆ ಲಾರ್ವಾ ಸಮೀಕ್ಷೆ ನಡೆಸಿ ರಾಸಾಯನಿಕಗಳನ್ನು ಬಳಸಿ ನಾಶಪಡಿಸುತ್ತಿದೆ. ಲಾರ್ವಾ ರೂಪಾಂತರಗೊಂಡು ಸೊಳ್ಳೆಯಾದ ಬಳಿಕ ‘ಫಾಗಿಂಗ್‌’ ಮೂಲಕವೇ ನಾಶಪಡಿಸಬೇಕು. ಇದನ್ನು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿಲ್ಲ.

‘ಲಾರ್ವಾ ಹಂತದಲ್ಲಿಯೇ ಸೊಳ್ಳೆ ನಿಯಂತ್ರಿಸಬೇಕು ಎಂಬುದು ಆರೋಗ್ಯ ಇಲಾಖೆಯ ಆಶಯ. ಪ್ರಕರಣ ಹೆಚ್ಚುತ್ತಿರುವುದರಿಂದ ‘ಫಾಗಿಂಗ್‌’ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ತರಬೇತಿ ನೀಡಲಾಗಿದೆ’ ಎನ್ನುತ್ತಾರೆ ಡೆಂಗಿ ನಿಯಂತ್ರಣಕ್ಕೆ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿ ಡಾ.ಕೆ.ಎಚ್‌.ಗಂಗಾಧರ್‌.

ಮುಂಜಾವು ಅಥವಾ ಇಳಿಸಂಜೆಯ ಹೊತ್ತಿನಲ್ಲಿ ‘ಫಾಗಿಂಗ್‌’ ಮಾಡಿದರೆ ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯ. ಸ್ಥಳೀಯರ ಕೋರಿಕೆ, ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ಪಾಲಿಕೆ ಸದಸ್ಯರ ಒತ್ತಡ ಇರುವಲ್ಲಿ ಮಾತ್ರ ‘ಫಾಗಿಂಗ್‌’ ನಡೆಯುತ್ತಿದೆ. ನಗರದ ಅಲ್ಲಲ್ಲಿ ಈ ಪ್ರಯತ್ನ ಕಣ್ಣಿಗೆ ಬೀಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆ ನಿಯಂತ್ರಣ ಕಾರ್ಯ ಅಪರೂಪವಾಗಿದೆ.

‘ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ಫಾಗಿಂಗ್‌’ಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಯಂತ್ರ ಕೊಂಡೊಯ್ದು ವಾರ್ಡ್‌ವಾರು ಈ ಕಾರ್ಯ ನಡೆಸಲಾಗುತ್ತಿದೆ. ಸೊಳ್ಳೆ ನಿಯಂತ್ರಣ ದ್ರಾವಣಗಳನ್ನು ಚರಂಡಿ, ನೀರು ನಿಲ್ಲುವ ಸ್ಥಳಗಳಲ್ಲಿ ಸಿಂಪಡಣೆ ಮಾಡುತ್ತಿದ್ದೇವೆ. ಲಾರ್ವಾ ಸೊಳ್ಳೆಯಾಗಿ ರೂಪುಗೊಳ್ಳುವ ಅವಧಿಯನ್ನು ಆಧರಿಸಿ ಪ್ರತಿ 12ರಿಂದ 15 ದಿನಕ್ಕೊಮ್ಮೆ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜಗದೀಶ್‌.

‘ಫಾಗಿಂಗ್’ಗೆ ವೈದ್ಯರ ಅಸಮ್ಮತಿ
‘ಫಾಗಿಂಗ್’ ಮೂಲಕ ಸೊಳ್ಳೆ ನಿಯಂತ್ರಿಸುವುದು ಆರೋಗ್ಯ ಇಲಾಖೆಯ ಕೊನೆಯ ಆಯ್ಕೆ. ಸೊಳ್ಳೆ ನಿಯಂತ್ರಿಸುವ ‘ಫಾಗಿಂಗ್‌’ ಮಾನವನ ಆರೋಗ್ಯಕ್ಕೂ ಹಾನಿಯುಂಟು ಮಾಡಬಹುದು ಎಂಬುದು ವೈದ್ಯರ ಕಳವಳ. ‘ಡೆಂಗಿ ಹರಡುವ ಏಡಿಸ್‌ ಸೊಳ್ಳೆಗಳು ಸಾಮಾನ್ಯವಾಗಿ ಮನೆಯ ಒಳಗೆ ಅಥವಾ ಆವರಣದಲ್ಲೇ ಉತ್ಪತ್ತಿಯಾಗುತ್ತವೆ. ಮನೆಯ ಸುತ್ತ ಫಾಗಿಂಗ್ ಮಾಡುವುದರಿಂದ ಈ ಸೊಳ್ಳೆಗಳು ನಾಶವಾಗುವುದು ಕಡಿಮೆ. ಲಾರ್ವಾ, ಮೊಟ್ಟೆಯ ಹಂತದಲ್ಲಿರುವ ಸೊಳ್ಳೆಗಳನ್ನು ಕೂಡ ಈ ಪ್ರಯತ್ನದಿಂದ ನಾಶಪಡಿಸಲು ಸಾಧ್ಯವಿಲ್ಲ. ಫಾಗಿಂಗ್‌ನಿಂದ ಹೊರಹೊಮ್ಮುವ ಹೊಗೆ ಉಸಿರಾಟದ ತೊಂದರೆ ಇರುವವರು ಹಾಗೂ ಆಸ್ತಮಾ ರೋಗಿಗಳಿಗೆ ತೊಂದರೆ ಉಂಟು ಮಾಡುತ್ತದೆ’ ಎಂಬುದು ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT