ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ತಿಂಗಳಲ್ಲಿ ಗ್ರಾಮದ ಕೆರೆಗಳನ್ನು ಅಭಿವೃದ್ಧಿಪಡಿಸಿ

ತರಬೇತಿ ಕಾರ್ಯಾಗಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ
Last Updated 24 ಜುಲೈ 2021, 5:04 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ಮುಂದಿನ ಜನವರಿ ವೇಳೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳಿಗೆ ಇಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿ
ಸಿದ್ದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕೆರೆಗಳ ನಿರ್ವಹಣೆಯ ಹೊಣೆಯನ್ನು ಇದೀಗ ಆಯಾ ಗ್ರಾಮ ಪಂಚಾಯಿತಿಗಳಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಕೆರೆಗಳ ಒತ್ತುವರಿ ಆಗಿದ್ದಲ್ಲಿ ಎಷ್ಟೇ ಶ್ರೀಮಂತರಾಗಿದ್ದರೂ ಡಿಸಿ ಮತ್ತು ಸಿಇಒ ಅವರ ಗಮನಕ್ಕೆ ತಂದು ಒತ್ತುವರಿ ತೆರವುಗೊಳಿಸಿ’ ಎಂದು ಸೂಚಿಸಿದರು.

‘ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಊರಿಗೊಂದು ಕೆರೆ, ಇಲ್ಲವೇ ಎರಡು ಊರಿಗೊಂದು ಕೆರೆ ಅಭಿವೃದ್ಧಿಪಡಿಸಬೇಕು. ಕಲ್ಯಾಣಿಗಳಲ್ಲಿ ಕಸ ತುಂಬಿಕೊಂಡಿದ್ದು, ಅವುಗಳನ್ನು ಶುಚಿಗೊಳಿಸಬೇಕು.ಕೆರೆಗಳ ಸಮಗ್ರ ನಿರ್ವಹಣೆಗೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

‘ಮುಂದಿನ 5 ವರ್ಷಗಳ ಅವಧಿಗೆ ಗ್ರಾಮಗಳ ಅಭಿವೃದ್ಧಿಗೆ ಗುರಿ ನಿಗದಿಪಡಿಸಿಕೊಂಡು, ಪ್ರತಿ ವರ್ಷ ಅದನ್ನು ಸಾಧಿಸುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಬೇಕು. ಜನರ ಏಳಿಗೆಗೆ ಶ್ರಮಪಟ್ಟ ಬಗ್ಗೆ ಆತ್ಮತೃಪ್ತಿಯಾಗುವಂತೆ ಕೆಲಸ ಮಾಡಬೇಕು’ ಎಂದು ಸಚಿವರು ಮನವಿ ಮಾಡಿದರು.

‘ಕೋವಿಡ್ ಸಂಕಷ್ಟ ಕಾಲದಲ್ಲಿ ನಗರ
ಗಳಿಂದ ಗ್ರಾಮಗಳಿಗೆ ಮರಳಿದ ಎಂಜಿನಿಯರ್‌ಗಳು ಹಾಗೂ ಪದವೀಧರ
ರಿಗೆ ಉದ್ಯೋಗಖಾತ್ರಿ ಯೋಜನೆ ಕೆಲಸ ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ಕಲಿಸಿಕೊಟ್ಟಿದೆ. ಕಳೆದ ವರ್ಷ ನರೇಗಾದಡಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್ ನಲ್ಲಿಯೇ ಗುರಿ ಮೀರಿ ಸಾಧನೆ ಮಾಡಲಾಯಿತು. ಇದರಿಂದಾಗಿ ಕೇಂದ್ರದಿಂದ ಶಹಬ್ಬಾಸ್‍ಗಿರಿ ನೀಡಿದೆ’ ಎಂದರು.

ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುರಿಗಳನ್ನು ಹಾಕಿಕೊಳ್ಳಬೇಕು. ಕೋವಿಡ್ 3ನೇ ಅಲೆ ಬಂದರೂ ಇದೇ ಉತ್ಸಾಹದಿಂದ ಕೆಲಸ ಮಾಡಿ’ ಎಂದು ಸೂಚಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಗಾಯತ್ರಿ, ಪರಿಸರವಾದಿ ಶಿವಾನಂದ ಕಳವೆ, ಜಯರಾಂ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಇದ್ದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಫಾಲಾಕ್ಷಿ ಸ್ವಾಗತಿಸಿದರು.

ಪಿಡಿಒಗಳ ಲೆಕ್ಕ ಹಾಕಿಸಿದ ಈಶ್ವರಪ್ಪ

ತರಬೇತಿ ಕಾರ್ಯಾಗಾರದಲ್ಲಿ ಪಿಡಿಒಗಳನ್ನು ಲೆಕ್ಕ ಹಾಕಿಸಿದ ಈಶ್ವರಪ್ಪ ಗೈರು ಹಾಜರಾದ ಪಿಡಿಒಗಳ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು.

‘ಪಿಡಿಒಗಳು ಇಲ್ಲಿಂದ ಹೋಗುವಾಗ ಹಾಜರಾತಿಗೆ ಸಹಿ ಹಾಕಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗೈರು ಹಾಜರಾದ ಪಿಡಿಒಗಳ ಹೆಸರನ್ನು ಹೇಳಿ ಹೋಗಬೇಕು’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ ವಾಟರ್ ಮನ್, ಸ್ವಚ್ಛತಾ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಬೂಬು ಹೇಳದೆ ಅವರಿಗೆ ಸಂಬಳ ನೀಡಿ’ ಎಂದು ಸೂಚಿಸಿದರು.

ಯೋಜನೆಗಳ ಮಾಹಿತಿ ಗೊತ್ತಿಲ್ಲ: ಪಂಚಾಯತ್ ರಾಜ್ ಿಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಲವು ಹೊಸ ಯೋಜನೆಗಳ ಬಗ್ಗೆ ಕೇಳಿದರು. ಈ ಬಗ್ಗೆ ಪಿಡಿಒ ಸೇರಿದಂತೆ ಯಾರೊಬ್ಬರು ಉತ್ತರಿಸಲಿಲ್ಲ.

ಸಚಿವ ಈಶ್ವರಪ್ಪ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ– ಉಪಾಧ್ಯಕ್ಷರು ಅನಕ್ಷರಸ್ಥರು ಅವರಿಗೆ ಗೊತ್ತಿಲ್ಲ. ಪಿಡಿಒಗಳಿಗೂ ಗೊತ್ತಿಲ್ಲ ಎಂದರೆ ಏನು ಎಂದು ಪ್ರಶ್ನಿಸಿದರು.

‘ಗ್ರಾ.ಪಂ: ಪಕ್ಷ ರಾಜಕೀಯ ಬೇಡ’

‘ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತವಾಗಿ ನಡೆದಿದ್ದು, ಸದಸ್ಯರೂ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬೇಡಿ. ರಾಜಕೀಯ ಏನಿದ್ದರೂ ಲೋಕಸಭೆ, ವಿಧಾನಸಭೆ ಚುನಾವಣೆಗೆ ಮಾತ್ರ ಇರಲಿ. ಗೆದ್ದವರು ಯಾವುದೇ ಕೆಲಸ ಮಾಡಲಿಲ್ಲ ಎಂಬ ಆಪಾದನೆ ಬಾರದಂತೆ ಕೆಲಸ ನಿರ್ವಹಿಸಿ’ ಎಂದು ಸೂಚಿಸಿದರು.

‘6 ತಿಂಗಳೊಳಗೆ ಎಲ್ಲಾ ಗ್ರಾ.ಪಂ.ಗೆ ಸೋಲಾರ್ ದೀಪ ಅಳವಡಿಸಿ’

ಮುಂದಿನ ಆರು ತಿಂಗಳೊಳಗೆ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಸೋಲಾರ್ ದೀಪ ಅಳವಡಿಸಬೇಕು ಎಂದು ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

‘ರೈತರು ಕೆಲಸಕ್ಕಾಗಿ ಬಂದರೆ ವಿದ್ಯುತ್ ಇಲ್ಲ ಎಂದು ಹೇಳಬಾರದು. ಜಿಲ್ಲೆಯಲ್ಲಿ 25 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಅಳವಡಿಸಿದ್ದು, ಮುಂದಿನ 6 ತಿಂಗಳು ಬಿಟ್ಟು ಬರುತ್ತೇನೆ. ಆ ವೇಳೆಗೆ ಎಲ್ಲ ಪಂಚಾಯತಿಗಳಲ್ಲೂ ಸೋಲಾರ್ ದೀಪ ಇರಬೇಕು’ ಎಂದು ಸೂಚಿಸಿದರು.

ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ಮಹಿಳಾ ಚಾಲಕಿಯರು ಇರಲಿ

‘ಗ್ರಾಮಗಳಲ್ಲಿ ಯಾವುದೇ ಕುಟುಂಬ ಶೌಚಾಲಯ ರಹಿತವಾಗಿರಬಾರದು. ಮಹಿಳೆಯರು ಯಾರೂ ರಸ್ತೆ ಬದಿಯಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಇರಬಾರದು. ಪ್ರತಿಯೊಂದು ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕ ಆಗಬೇಕು’ ಎಂದು ಸಚಿವ ಈಶ್ವರಪ್ಪ ಸೂಚಿಸಿದರು.

‘ಸ್ವಸಹಾಯ ಸಂಘದ ಒಕ್ಕೂಟದವರಿಗೆ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ನೀಡಲು ಈಗಾಗಲೇ ಸೂಚಿಸಿದ್ದು, ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿ ಚಾಲಕರನ್ನಾಗಿ ನೇಮಕ ಮಾಡಬೇಕು ಜಿಲ್ಲೆಯ 195 ಗ್ರಾ.ಪಂ.ಗಳ ಪೈಕಿ 13ರಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕಗಳು ಇವೆ. ಎಲ್ಲಾ ಪಂಚಾಯಿತಿಗಳಲ್ಲೂ ಇರಬೇಕು’ ಎಂದು ಅಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT