ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಕೊಂಡ: ದೇಸೀ ರಾಸುಗಳ ತಳಿ ಅಭಿವೃದ್ಧಿಗೆ ಪಣ

ಮಲ್ಲಿಗೇನಹಳ್ಳಿಯ ರೈತ ಕುಮಾರ್ ಕಾಳಜಿ
ಮಂಜುನಾಥ್‌ ಎಸ್‌.ಎಂ.
Published 28 ಮಾರ್ಚ್ 2024, 5:00 IST
Last Updated 28 ಮಾರ್ಚ್ 2024, 5:00 IST
ಅಕ್ಷರ ಗಾತ್ರ

ಮಾಯಕೊಂಡ: ಹಸುಗಳ ದೇಸಿ ತಳಿಗಳು ನಶಿಸುತ್ತಿರುವುದನ್ನು ಮನಗಂಡಿರುವ ಸಮೀಪದ ಮಲ್ಲಿಗೇನಹಳ್ಳಿ ಗ್ರಾಮದ ರೈತ ಕುಮಾರ್ ದೇಸಿ ಹಸುಗಳ ತಳಿ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ.

ಹೋರಿ ಬೆದರಿಸುವ ಹವ್ಯಾಸ ಹೊಂದಿರುವ ಕುಮಾರ್ ಹಲವಾರು ಜಾತ್ರೆಗಳಲ್ಲಿ ಹೋರಿ ಬೆದರಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಅವರು ಉತ್ತಮ ನಾಟಿ ಹೋರಿಗಳ ಹುಡುಕಾಟ ಪ್ರಾರಂಭಿಸಿದಾಗ, ದೇಸಿ ತಳಿಗಳು ನಶಿಸುತ್ತಿರುವುದು ಗಮನಕ್ಕೆ ಬಂದಿತು. ಅದನ್ನು ಮನಗಂಡು ತಳಿ ಉಳಿಸುವ ನಿರ್ಧಾರ ಮಾಡಿದರು.

ಅಂತೆಯೇ ಈಗ ಅಂದಾಜು 20 ಬಗೆಯ ನಾಟಿ ಹಸು ಹಾಗೂ ಹೋರಿಗಳನ್ನು ಸಾಕುತ್ತಿದ್ದು, ಲಕ್ಷಾಂತರ ಖರ್ಚು ಮಾಡಿ ನಿತ್ಯ ಅವುಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ.

₹ 4.80 ಲಕ್ಷ ಖರ್ಚು ಮಾಡಿ, ಶೆಡ್ ನಿರ್ಮಿಸಿದ್ದು, ಫಾರಂನಲ್ಲಿ ದೇಸಿ ಹಸುಗಳಾದ ಹಳ್ಳಿಕಾರ್, ಅಮೃತ ಮಹಲ್, ಮಲ್ನಾಡ್ ಗಿಡ್ಡ, ಗಿರ್, ಸಾಹಿವಾಲ, ಎರಡು ಎಮ್ಮೆಗಳ ಜೊತೆಯಲ್ಲಿ‌ ಎರಡು ಮಿಶ್ರ ತಳಿ ಹಸುಗಳನ್ನು ಸಾಕಿ ಅವುಗಳಿಂದ ತಳಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ.

‘ಜವಾರಿ ಹಸುಗಳ ಹಾಲು ಅಮೃತಕ್ಕೆ ಸಮ. ಎಷ್ಟೇ ಹಣ ಕೊಟ್ಟರೂ ಉತ್ತಮ ಗುಣಮಟ್ಟದ ಹಾಲು ದೊರೆಯದು. ಹಾಗಾಗಿ ಹಾಲನ್ನು ಕರುಗಳಿಗೆ ಬಿಟ್ಟು ಉಳಿದದ್ದನ್ನು ಮನೆಗೆ ಬಳಸುತ್ತೇವೆ. ತಳಿ ಅಭಿವೃದ್ಧಿ ಕಾರ್ಯವನ್ನು ಈಗ ಚಿಕ್ಕದಾಗಿ ಪ್ರಾರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ತಳಿ ಸಂವರ್ಧನೆ ಕಾರ್ಯ ಮಾಡುವ ಇಚ್ಛೆ ಇದೆ’ ಎನ್ನುತ್ತಾರೆ ಕುಮಾರ್.

‘ನಮ್ಮ ಕಾಲಕ್ಕೇ ದೇಸಿ ಹಸುಗಳ ಹಲವು ತಳಿಗಳು ನಶಿಸುವ ಹಂತ ತಲುಪಿವೆ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೆ ದೇಸಿ ಹಸುಗಳನ್ನು ಚಿತ್ರದಲ್ಲಿ ತೋರಿಸುವ ಕಾಲ ಬರಬಹುದು. ಈಗಲಾದರೂ ನಾವು ಎಚ್ಚೆತ್ತು ತಳಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅವುಗಳ ಸಂತತಿ ಹಾಗೂ ದೇಸಿ ಹಸುಗಳನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಲಾಭ ಅಪೇಕ್ಷಿಸದೇ ದೇಸಿ ಹಸು ತಳಿ ರಕ್ಷಿಸಿ, ತಳಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಈ ಫಾರಂ ತೆರೆದಿದ್ದೇನೆ’ ಎನ್ನುತ್ತಾರೆ ಮಲ್ಲಿಗೇನಹಳ್ಳಿ ಕುಮಾರ್.

ಮಾಯಕೊಂಡ ಸಮೀಪದ ಕೊಡಗನೂರು ಬಳಿ ಇರುವ ಕುಮಾರ್‌ ಅವರ ದೇಸಿ ಹಸುಗಳ ಫಾರಂನಲ್ಲಿ ಇರುವ ಹೋರಿ ಕರುಗಳು
ಮಾಯಕೊಂಡ ಸಮೀಪದ ಕೊಡಗನೂರು ಬಳಿ ಇರುವ ಕುಮಾರ್‌ ಅವರ ದೇಸಿ ಹಸುಗಳ ಫಾರಂನಲ್ಲಿ ಇರುವ ಹೋರಿ ಕರುಗಳು

ಕಾರ್ಕಳಕ್ಕೆ ದೇಸಿ ಹಸುಗಳ ಬೆರಣಿ

‘ದೇಸಿ ಹಸುಗಳ ಸಗಣಿಗೆ ಪೂಜ್ಯ ಸ್ಥಾನವಿದೆ. ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಅಗ್ನಿಹೋತ್ರಕ್ಕೆ ಬಳಸಲಾಗುತ್ತದೆ. ಕಾರ್ಕಳದ ದಯಾನಂದ ಅವರು ಆಯುಷ್ಯ ಮಂಡಲಂ ಎಂಬ ಆಯುರ್ವೇದ ಸಂಸ್ಥೆ ನಡೆಸುತ್ತಿದ್ದು ಅವರಿಂದ ನಾಟಿ ಹಸುಗಳ ಬೆರಣಿಗೆ ಬೇಡಿಕೆ ಇದೆ. ಗುಣಮಟ್ಟ ಪರೀಕ್ಷಿಸಿ ಬೆರಣಿ ಪೂರೈಸುವಂತೆ ತಿಳಿಸಿದ್ದಾರೆ. ಇದರಿಂದಲೂ ಆದಾಯ ನಿರೀಕ್ಷೆ ಇದೆ’ ಎಂದು  ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT