ಗುರುವಾರ , ಅಕ್ಟೋಬರ್ 29, 2020
26 °C
ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಸಲಹೆ

ಜೀವ ಉಳಿಸಲು ರಕ್ತದಾನ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ದೇಹದಲ್ಲಿ ಉತ್ಪಾದನೆ ಆಗುವ ರಕ್ತವನ್ನು ಮತ್ತೊಬ್ಬರ ಜೀವ ಉಳಿಸಲು ದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತ ಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆಗಳ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ’ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೊಂದಿಲ್ಲ. ರಕ್ತದಾನ ಶಿಬಿರಗಳಲ್ಲಿ ಶೇಖರಿಸಲಾಗಿರುವ ರಕ್ತವನ್ನು ವ್ಯರ್ಥ ಮಾಡುತ್ತಾರೆ. ಇದರಿಂದ ನಮ್ಮ ಆರೋಗ್ಯಕ್ಕೆ ತೊಂದರೆಯಾಗಲಿದೆ ಎಂದು ಪೂರ್ವಗ್ರಹಪೀಡಿತರಾಗಿ ಜನರು ಯೋಚಿಸುತ್ತಾರೆ. ಆದರೆ ರಕ್ತದಾನದಿಂದ ಒಂದು ಜೀವ ಉಳಿಯುತ್ತದೆ ಎಂಬ ಜ್ಞಾನದ ಕೊರತೆಯಿಂದ ಅವರು ಹೀಗೆಲ್ಲಾ ಅಸಡ್ಡೆಯ ಮಾತನಾಡುತ್ತಾರೆ. ರಕ್ತದಾನ ಮಹತ್ವದ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ‘ ಎಂದರು.

‘ನಾನು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವೇಳೆ ಮೂರು ಬಾರಿ ರಕ್ತದಾನ ಮಾಡಿದ್ದು, ಸ್ನೇಹಿತೆಯರೆಲ್ಲಾ ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ನಮ್ಮ ತಾಯಿ ಕ್ಯಾನ್ಸರ್ ಪೀಡಿತರಾಗಿದ್ದರು. ಸ್ನೇಹಿತರು, ಆತ್ಮೀಯರೆಲ್ಲಾ ಬಂದು ರಕ್ತ ನೀಡಿ ಹೋಗಿದ್ದರು. ಆಗ ನಿಜಕ್ಕೂ ರಕ್ತದ ಮಹತ್ವವೇನು ಎಂಬುದು ಅರಿವಿಗೆ ಬಂದಿತು. ಆದ್ದರಿಂದ, ರಕ್ತದಾನ ಮಾಡಲು ಹಿಂದೇಟು ಹಾಕದೆ, ಮತ್ತೊಬ್ಬರ ಪ್ರಾಣ ಉಳಿಸಲು ಮುಂದಾಗಬೇಕು‘ ಎಂದು ಸಲಹೆ ನೀಡಿದರು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಕೆ.ಎಚ್. ಗಂಗಾಧರ ಮಾತನಾಡಿ, ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದರೆ ರೋಗಿಗಳು ಹಾಗೂ ಅಪಘಾತದಲ್ಲಿ ಗಾಯಗೊಂಡವರನ್ನು ಬದುಕಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಕಲ್ಲೇಶಪ್ಪ, ಹನುಮಂತಪ್ಪ, ಎಂ.ಜಿ. ಶ್ರೀಕಾಂತ್, ವೀರೇಂದ್ರ ಪ್ರಸಾದ್, ಸಂತೋಷ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎನ್‌ಸಿಸಿಯ 10 ಮಂದಿ ಜನರು ಇದೇ ವೇಳೆ ರಕ್ತದಾನ ಮಾಡಿದರು.

ಚಿಗಟೇರಿ ಜಿಲ್ಲಾ ಸ್ಪತ್ರೆಯ ಅಧೀಕ್ಷಕ ಡಾ. ಎನ್. ಜಯಪ್ರಕಾಶ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ. ನೀಲಕಂಠ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ವೈ.ಬಿ. ಮಹದೇವ ಪ್ರಾರ್ಥಿಸಿದರು, ಬಿ.ಡಿ. ಮಹೇಂದ್ರ ನಿರೂಪಿಸಿದರು, ಎಚ್. ತಿಪ್ಪೇಸ್ವಾಮಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.