ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ‘ಹಿಂದೂಗಳ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಬೇಡಿ ಎಂದು ಹೇಳಿಲ್ಲ’

ಮುಸ್ಲಿಂ ಮುಖಂಡರ ಸ್ಪಷ್ಟನೆ
Last Updated 19 ಮೇ 2020, 15:50 IST
ಅಕ್ಷರ ಗಾತ್ರ

ದಾವಣಗೆರೆ:ಹಿಂದೂಗಳ ಅಂಗಡಿಗಳಲ್ಲಿ ಮುಸ್ಲಿಮರು ಬಟ್ಟೆಗಳನ್ನು ಖರೀದಿ ಮಾಡಬಾರದು ಎಂದು ಮಸೀದಿಯಲ್ಲಿ ಆದೇಶಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಯಾವ ಮಸೀದಿಯಲ್ಲೂ ಈ ರೀತಿ ಆದೇಶ ಮಾಡಿಲ್ಲ ಎಂದು ಮುಸ್ಲಿಂ ಸಮಾಜದ ಮುಖಂಡರು ಸ್ಪಷ್ಟಪಡಿಸಿದ್ದಾರೆ.

‘ಯುಗಾದಿ, ಬಸವ ಜಯಂತಿ, ಗುಡ್‌ಫ್ರೈಡೆ, ಮಹಾವೀರ ಜಯಂತಿ ಹಬ್ಬಗಳನ್ನು ಎಲ್ಲರೂ ಸರಳವಾಗಿ ಆಚರಿಸಿದ್ದು, ನಾವೂ ರಂಜಾನ್ ಹಬ್ಬವನ್ನು ಯಾವುದೇ ವಸ್ತುಗಳನ್ನು ಖರೀದಿಸದೆ ಸರಳವಾಗಿ ಆಚರಿಸಬೇಕು ಎಂದು ಮಾತ್ರ ಕರೆ ನೀಡಿದ್ದೇವೆ’ ಎಂದು ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದರು.

‘ತಿಂಗಳುಗಟ್ಟಲೆ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಹಿಂದೂ-ಮುಸ್ಲಿಂ ಬಾಂಧವರಿಗೆ ದಾವಣಗೆರೆಯ ಮುಸ್ಲಿಂ ಸಮುದಾಯದವರು ಸತತವಾಗಿ ಅಗತ್ಯ ವಸ್ತುಗಳನ್ನು ಪೂರೈಸುತ್ತಾ ಕಷ್ಟಗಳಿಗೆ ಸ್ಪಂದಿಸುತ್ತಾ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ’ ಎಂದು ಅಂಜುಮನ್ ಮಾಜಿ ಕಾರ್ಯದರ್ಶಿ ರಜ್ವಿ ಖಾನ್ ಹೇಳಿದರು.

‘ಈಗಾಗಲೇ ಕೊರೊನಾ ವೇಳೆ ಸಮಾಜ ಅನೇಕ ಸುದ್ದಿಗಳಿಂದ ಅಪ ಪ್ರಚಾರಗಳಿಂದ ನೋವುಂಡಿದೆ. ಇಂತಹ ವೇಳೆ ಮತ್ತೆ ಕೆಲವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ’ ಎಂದು ಮಾಜಿ ಸದಸ್ಯ ಅನೀಸ್‌ಪಾಷಾ ಹೇಳಿದರು.

‘ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲೂ ಇಂತಹ ವರದಿಗಳಾಗಿವೆ. ಯಾವುದೇ ವಿಷಯವನ್ನು ಕೂಲಂಕಷವಾಗಿ ಚರ್ಚಿಸದೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಹೋರಾಟವನ್ನೂ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್, ಪಾಲಿಕೆ ಸದಸ್ಯರಾದ ಸೈಯದ್ ಚಾರ್ಲಿ, ಕಬೀರ್ ಖಾನ್, ಮುಸ್ಲಿಂ ಹಾಸ್ಟೆಲ್ ಅಧ್ಯಕ್ಷ ಭಾಷಾ, ರಿಯಾಜ್, ಕೋಳಿ ಇಬ್ರಾಹಿಂ, ಖಾಸಿ ಸಾಬ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT