ಶನಿವಾರ, ಫೆಬ್ರವರಿ 27, 2021
28 °C
ಖುದ್ದು ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ದಾವಣಗೆರೆ | ಕಂಟೈನ್‌ಮೆಂಟ್‌ ವಲಯಗಳಲ್ಲಿ ಡ್ರೋನ್‌ ಅವಲೋಕನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಕಂಟೈನ್‌ಮೆಂಟ್‌ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡ್ರೋನ್‌ ಕ್ಯಾಮೆರಾ ಮೂಲಕ ಪರಿಸ್ಥಿತಿ ಅವಲೋಕಿಸಿದರು.‌

ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ ಅವರಿಗೆ ಎಚ್ಚರಿಸಲು ಡ್ರೋನ್ ಬಳಕೆ ಮಾಡಲಾಗಿದೆ. ಜನರು ತಮ್ಮ ಮನೆಗಳಲ್ಲಿ ಇದ್ದಾರಾ? ರಸ್ತೆಯಲ್ಲಿ ಅನವಶ್ಯಕವಾಗಿ ಸಂಚರಿಸುತ್ತಿದ್ದಾರಾ? ಅಂತರ ಕಾಯ್ದುಕೊಳ್ಳುತ್ತಿದ್ದಾರಾ? ಎಂಬುದನ್ನು ಡ್ರೋನ್‌ ಮೂಲಕ ತಿಳಿಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಅತಿ ಹೆಚ್ಚು ಪ್ರಕರಣಗಳಿರುವ ಜಾಲಿನಗರವನ್ನು ಸಂಪೂರ್ಣ ಸ್ವಚ್ಛ ಮಾಡಬೇಕಾಗಿದೆ. ಇಲ್ಲಿ ಇರುವಂತಹ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕೆಂಬ ಉದ್ದೇಶದಿಂದ ಎಸ್‌ಪಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಿಎಚ್‌ಒ, ಎಡಿಸಿ ಎಲ್ಲರೂ ಸೇರಿ ಒಂದು ಯೋಜನೆ ತಯಾರಿಸಿದ್ದಾರೆ. ಸೋಂಕು ಹೆಚ್ಚು ಹರಡಿದ ಜಾಲಿನಗರ, ಇಮಾಂ ನಗರದ ಎರಡು ಸಾವಿರಗಳಲ್ಲಿ ವಾಸವಿದ್ದ ಜನರ ಆರೋಗ್ಯ ಪರೀಕ್ಷೆಗೆ ಚಾಲನೆ ನೀಡಲಾಗಿದೆ ಎಂದರು.

20 ತಂಡಗಳು ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಪ್ರತಿ ತಂಡಕ್ಕೆ ಒಬ್ಬರಂತೆ ವೈದ್ಯರನ್ನು ನೇಮಕ ಮಾಡಲಾಗಿದೆ. ಪಿಪಿಇ ಕಿಟ್ ಧರಿಸಿ ಎಲ್ಲ ಮನೆಗಳ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ಮಾಡುತ್ತಾರೆ. ಆರೋಗ್ಯಾಧಿಕಾರಿಗೆ ಅವರ ಆರೋಗ್ಯದ ಕುರಿತು ಖಚಿತ ಮಾಹಿತಿ ತಿಳಿಯುತ್ತದೆ. ಆರೋಗ್ಯದ ಸಮಸ್ಯೆ ಇರುವವರನ್ನು ಕರೆದುಕೊಂಡು ಬರಲು ಆಂಬುಲೆನ್ಸ್, ಬಸ್ ಜೊತೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಕಾಯಿಲೆಯಿಂದ ಬಳಲುತ್ತಿರುವ ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದು ಅಧಿಕಾರಿಗಳಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ಅದಕ್ಕಾಗಿಯೇ ಎಲ್ಲರ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬಹಳಷ್ಟು ದೂರ ಹೋಗುವ ಅವಶ್ಯಕತೆ ಇಲ್ಲ. ಎಸ್.ಎಂ.ಕೃಷ್ಣ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಾಗರಿಕರ ಸಲಹೆ ಮೇರೆಗೆ ಸಮಯದ ಮಿತಿ: ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗಿನ ಅವಧಿಯಲ್ಲಿ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಬೇಕು ಎಂದು ನಾಗರಿಕರೇ ಸಲಹೆ ನೀಡಿದ್ದರು. ಹಾಗಾಗಿ ಸಮಯ ನಿಗದಿ ಪಡಿಸಲಾಗಿದೆ. ಈ ಸಮಯದಲ್ಲಿ ಕೂಡ ಅನಗತ್ಯವಾಗಿ ಓಡಾಡಬಾರದು. ಅಗತ್ಯ ವಸ್ತುಗಳನ್ನು ಖರೀದಿಸಿ ಕೂಡಲೇ ಮನೆ ಸೇರಬೇಕು. 20 ದಿನಗಳ ಕಾಲ ಜನರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಮನೆಮನೆಗೆ ತೆರಳಿ ಪರೀಕ್ಷೆ

ಜಿಲ್ಲಾಧಿಕಾರಿಗಳ ಸೂಚನೆಯಂತೆ ಸರ್ವೇಕ್ಷಣಾಧಿಕಾರಿ ಮನೆ ಮನೆಗೆ ಹೋಗಿ ಉಸಿರಾಟದ ಸಮಸ್ಯೆ (ಸಾರಿ) ಹಾಗೂ ಐಎಲ್‌ಐ ಲಕ್ಷಣ ಇರುವವರನ್ನು ಪತ್ತೆ ಮಾಡಿ ಅವರ ಗಂಟಲು ದ್ರವ ಸಂಗ್ರಹಿಸಿ ಚಿಕಿತ್ಸೆ ಹಾಗೂ ಐಸೋಲೇಟ್ ಮಾಡಲಾಗುತ್ತಿದೆ.

ಇನ್ಸಿಡೆಂಟ್‌ ಕಮಾಂಡರ್‌ಗಳಾಗಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌(ಬಾಷಾನಗರ), ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ(ಜಾಲಿನಗರ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌(ಇಮಾಂ ನಗರ, ಬೇತೂರು), ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ (ಕೆಟಿಜೆ ನಗರ) ಕಾರ್ಯನಿರ್ವಹಿಸುತ್ತಿದ್ದಾರೆ.

ವೈದ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಗಳಿಗೆ ತೆರಳಿದ್ದಾರೆ. ಅಲ್ಲೇ ಪರೀಕ್ಷೆ ನಡೆಸಿದ್ದಾರೆ.

5 ಕಂಟೈನ್‌ಮೆಂಟ್‌ ಝೋನ್‌ ಲಾಕ್‌: ಎಸ್‌ಪಿ

ಬಾಷಾನಗರ, ಜಾಲಿನಗರ, ಇಮಾಂ ನಗರ, ಬೇತೂರು, ಕೆಟಿಜೆ ನಗರಗಳನ್ನು ಕಂಟೈನ್‌ಮೆಂಟ್ ಜೋನ್‌ ಎಂದು ಗುರುತಿಸಿ ಸೀಲ್‌ಡೌನ್ ಮಾಡಲಾಗಿದೆ. ಎಲ್ಲ ಕಡೆಯಲ್ಲಿಯೂ ಸ್ಟೀಲ್ ಬ್ಯಾರಿಕೇಡ್ ಬಳಸಿ ನಿಯಂತ್ರಣ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಕಂಟೈನ್‌ಮೆಂಟ್‌ ಝೋನ್‌ಗೆ ತಲಾ ಒಬ್ಬರು ಕಮಾಂಡರ್ ಇರುತ್ತಾರೆ. ತಲಾ ಒಬ್ಬರಂತೆ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ. ಅವರು ಆ ಪ್ರದೇಶಗಳಲ್ಲಿ ಬಿಗಿ ಬಂದೊಬಸ್ತ್ ಮಾಡಿಕೊಳ್ಳುತ್ತಾರೆ. ಅಲ್ಲಿ ಹೋಗಲು ಮತ್ತು ಬರಲು ಒಂದೇ ಗೇಟ್ ತೆರೆಯಲಾಗಿದ್ದು, ಅಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಜನರಿಗೆ ಬೇಕಾದಂತಹ ಎಲ್ಲಾ ಅಗತ್ಯ ವಸ್ತು ಹಾಗೂ ಔಷಧಗಳನ್ನು ಅಲ್ಲಿಯೇ ಸರಬರಾಜು ಮಾಡುವಂತೆ ನೋಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು