ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ಪರಿಹಾರ: ಬಿಜೆಪಿಯಿಂದ ಸೇಡಿನ ರಾಜಕಾರಣ

ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪ
Published 27 ಏಪ್ರಿಲ್ 2024, 15:50 IST
Last Updated 27 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯ ಸರ್ಕಾರ ಬರ ಪರಿಹಾರವಾಗಿ ₹18,174 ಕೋಟಿಗೆ ಮನವಿ ಮಾಡಿದರೂ ಕೇವಲ ₹3,454 ಕೋಟಿಗಳನ್ನು ಬಿಡುಗಡೆ ಮಾಡುವ ಮೂಲಕ ಕರ್ನಾಟಕದ ಬಗ್ಗೆ ದ್ವೇಷ, ಹಗೆತನ ಸಾಧಿಸುತ್ತಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದರು.

‘₹14,718 ಕೋಟಿಗಳ ಬರ ಪರಿಹಾರವನ್ನು ಕೇಂದ್ರ ನಿರಾಕರಿಸುವ ಮೂಲಕ ನರೇಂದ್ರ ಮೋದಿ ಅವರು 2023ರ ವಿಧಾನಸಭಾ ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಮೋದಿ ನೇತೃತ್ವದ ಸರ್ಕಾರದ ಡಿಎನ್‌ಎ ಕರ್ನಾಟಕ ಮತ್ತು ಕನ್ನಡ ವಿರೋಧಿ ಎಂಬುದು ಸ್ಪಷ್ಟವಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾದಾಗ 2023ರ ಸೆ.13ರಂದು ರಾಜ್ಯ ಸರ್ಕಾರ ಬರಗಾಲ ಘೋಷಿಸಿತು. 6 ದಿನಗಳೊಳಗೆ ಬರ ಪರಿಹಾರ ನೀಡುವಂತೆ ಸೆ.30ರಂದು ರಾಜ್ಯ ಸರ್ಕಾರ ಮನವಿ ಮಾಡಿತು. ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ 1.14 ಲಕ್ಷ ಎಕರೆ ಕೃಷಿ ಬೆಳೆ ಹಾಗೂ 5 ಲಕ್ಷ ಎಕರೆ ತೋಟಗಾರಿಕೆ ಬೆಳೆ ಸೇರಿ 1.19 ಲಕ್ಷ ಎಕರೆಯಲ್ಲಿ ಬೆಳೆ ನಾಶವಾಗಿದೆ. 713 ಮೇವು ಬ್ಯಾಂಕ್ ಆರಂಭಕ್ಕೆ 180 ದಿನಗಳವರೆಗೆ ಕುಡಿಯುವ ನೀರು ಪೂರೈಸಲು ಹಣದ ಅಗತ್ಯವಿದೆ’ ಎಂದು ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಸರ್ಕಾರ ನೆರವಿಗೆ ಸಕಾಲದಲ್ಲಿ ಮನವಿ ಸಲ್ಲಿಸಿಲ್ಲ’ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

‘2023ರ ಅಕ್ಟೋಬರ್ 4ರಿಂದ 9ರವರೆಗೆ ಕೇಂದ್ರ ತಂಡವು 13 ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ ಬಳಿಕ ನಂತರ ವರದಿ ಸಲ್ಲಿಸಿದ್ದರೂ ಮೋದಿ ನೇತೃತ್ವದ ಸರ್ಕಾರ ತನ್ನ ದ್ವೇಷದ ಧೋರಣೆಯನ್ನು ಮುಂದುವರೆಸಿದೆ. ಆರಂಭದಲ್ಲಿ ರಾಜ್ಯದ ಸಚಿವರು ದೆಹಲಿಗೆ ಹೋದಾಗ ಅವರನ್ನು ಭೇಟಿ ಮಾಡಲು ಅಮಿತ್ ಶಾ ನಿರಾಕರಿಸಿದರು. ಕಂದಾಯ, ಪಶುಸಂಗೋಪನೆ, ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ದೇಲಿಗೆ ತೆರಳಿ ಕಳೆದ ಅ.25ರಂದು ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಕೃಷಿ ಕಾರ್ಯದರ್ಶಿಯನ್ನು ಭೇಟಿ ಮಾಡಿ ಶೀಘ್ರವಾಗಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಆ ಬಳಿಕ ಕಂದಾಯ ಮತ್ತು ಕೃಷಿ ಸಚಿವರು 2023ರ ನ.25ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಬರ ಪರಿಹಾರ ಬಿಡುಗಡೆಗೆ ಕೇಂದ್ರವನ್ನು ಒತ್ತಾಯಿಸಿದರು ಪರಿಹಾರ ನೀಡಲಿಲ್ಲ’ ಎಂದು ಆರೋಪಿಸಿದರು.

‘ಎನ್‌ಡಿಆರ್‌ಎಫ್‌ನ ನಿಯಮದ ಅದನ್ನು 30 ದಿನಗಳಲ್ಲಿ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ಕ್ರಮಕೈಗೊಂಡಿಲ್ಲ. 2023 ಡಿ.23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಬಳಿಕ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಲಿಲ್ಲ. ಕಳೆದ ಫೆ. 7ರಂದು ನವದೆಹಲಿಯಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಸೇರಿದಂತೆ ಹಲವು ಸಚಿವರು, ಶಾಸಕರು ಜಂತರ್‌ ಮಂಥರ್‌ ಬಳಿ ಪ್ರತಿಭಟನೆ ಮಾಡಿದರೂ ಸ್ಪಂದಿಸಿಲ್ಲ. ಹೀಗಾಗಿ ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ಕರ್ನಾಟಕ ಮಾರ್ಚ್ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿತ್ತು’ ಎಂದು ಹೇಳಿದರು.

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಎಲ್ಲಾ 28 ಅಭ್ಯರ್ಥಿಗಳು ಕನ್ನಡಿಗರೊಂದಿಗೆ ನಿಲ್ಲುತ್ತಾರೋ ಅಥವಾ ಮೋದಿ ನೇತೃತ್ವದ ಕರ್ನಾಟಕ ವಿರೋಧಿ ಸರ್ಕಾರದ ಜೊತೆ ನಿಲ್ಲುತ್ತಾರೋ’ ಅವರೇ ಉತ್ತರಿಸಬೇಕು ಎಂದರು.

‘ನಾವು ಅವರಿಗೆ ಭಿಕ್ಷೆ ಬೇಡುತ್ತಿಲ್ಲ. ಕರ್ನಾಟಕದ ರೈತರು ಹಾಗೂ ಜನರಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸಿದ ಹಣ. ಪ್ರಕೃತಿ ವಿಕೋಪ ಸಂಭವಿಸಿದಾಗ ಬೇಡಿಕೆ ಸಲ್ಲಿಸಲು ನಮಗೆ ಎಲ್ಲ ಹಕ್ಕಿದೆ. ಬರ ಪರಿಹಾರ ಹಣವನ್ನು ಬಿಡುಗಡೆ ಮಾಡದೇ ಇದ್ದರೆ ಮತ ಕೇಳಲು ರಾಜ್ಯಕ್ಕೆ ಕಾಲಿಡಬೇಡಿ’ ಎಂದು ಎಚ್ಚರಿಸಿದರು.

‘ಬರ ಪರಿಹಾರದ ಹಣ ನೀಡದೇ ಇದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕರು, ಸೋತ ಅಭ್ಯರ್ಥಿಗಳೆಲ್ಲ ಸೇರಿ ಜನತಾ ನ್ಯಾಯಾಲಯ ಮೊರೆ ಹೋಗುತ್ತೇವ. ಅವರೇ ಅಂತಿಮ ತೀರ್ಪು ನೀಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ. ಚಂದ್ರಶೇಖರ್, ಕರ್ನಾಟಕ ಸರ್ಕಾರದ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ.ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಶಿವಗಂಗಾ ಬಸವರಾಜ್, ದೇವೇಂದ್ರಪ್ಪ, ಲತಾ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮುಖಂಡರಾದ ಡಿ.ಬಸವರಾಜ್, ಮುರುಳೀಧರ ಹಾಲಪ್ಪ, ನಂದಿಗಾವಿ ಶ್ರೀನಿವಾಸ್, ಆಸಗೋಡು ಜಯಸಿಂಹ, ದಿನೇಶ್ ಕೆ.ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT