ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವಿ ಸ್ವಚ್ಛತೆ ಎಂದರೆ ಹಾಳು ಮಾಡಿದಂತೆ: ಡಾ. ವೀರೇಶ್

ಕಿವಿ, ಮೂಗು, ಗಂಟಲು ವಿಷಯದಲ್ಲಿ ವಿಶೇಷ ಉಪನ್ಯಾಸ
Last Updated 20 ಸೆಪ್ಟೆಂಬರ್ 2018, 15:54 IST
ಅಕ್ಷರ ಗಾತ್ರ

ದಾವಣಗೆರೆ: ಕಿವಿ ಸ್ವಚ್ಛತೆ ಎನ್ನುವುದು ಒಂದು ಮೋಸ. ಕಿವಿಗೆ ಸ್ವಚ್ಛದ ಅಗತ್ಯ ಇಲ್ಲ. ಸ್ವಚ್ಛ ಮಾಡಲು ಹೋಗುವುದರಿಂದ ಕಿವಿಯನ್ನು ಹಾಳು ಮಾಡಿಕೊಳ್ಳಲಾಗುತ್ತಿದೆ ಎಂದು ವೀರೇಶ್‌ ಮತ್ತು ವಾಗೀಶ ಇಎನ್‌ಟಿ ಆಸ್ಪತ್ರೆಯ ಡಾ. ಎಂ.ಆರ್‌. ವೀರೇಶ್‌ ಹೇಳಿದರು.

ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಳಬಾಳು ವೆಲ್‌ಫೇರ್‌ ಫೌಂಡೇಶನ್‌ ಸಹಯೋಗದಲ್ಲಿ ಯುವರೆಡ್‌ಕ್ರಾಸ್‌ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಕಿವಿ, ಮೂಗು, ಗಂಟಲು ತಪಾಸಣೆ ಶಿಬಿರ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಿವಿಯಲ್ಲಿ ಅಂಟು ದ್ರವ, ಕೂದಲು ಕಿವಿಯ ರಕ್ಷಣೆಗಾಗಿಯೇ ಇರುತ್ತದೆ. ಅಲ್ಲದೆ ನಮ್ಮ ಒಳ ಕಿವಿಯ ಚರ್ಮ ವರ್ಷಕ್ಕೆ 0.5ರಿಂದ 0.7 ಮಿಲಿಮೀಟರ್‌ನಷ್ಟು ಬೆಳೆಯುತ್ತಾ ಇರುತ್ತದೆ. ಅದನ್ನು ಕೂದಲು ಕತ್ತರಿಸಿ ಹೊರ ದಬ್ಬುತ್ತದೆ. ನೀವು ಹೊರ ಕಿವಿಯನ್ನಷ್ಟೇ ಸ್ವಚ್ಛ ಮಾಡಿಕೊಳ್ಳಬೇಕು. ಬಡ್ಸ್‌ ಅಥವಾ ಇನ್ಯಾವುದೇ ಕಡ್ಡಿಗಳನ್ನು ಕಿವಿಯ ಒಳಗೆ ಹಾಕಿ ಸ್ವಚ್ಛ ಮಾಡುವುದು ಸಲ್ಲದು. ಆದರೆ ಬಡ್ಸ್‌ ಹಾಕಿ ಸ್ವಚ್ಛ ಮಾಡದೇ ಇರುವವರು ಇಲ್ವೇ ಇಲ್ಲ ಎನ್ನುಷ್ಟು ಕಡಿಮೆ. ಅವರಿಗೆಲ್ಲ. ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.

ಕಿವಿಯಲ್ಲಿ ನವೆಯಾದರೆ ಒಂದೆರಡು ಸೆಕೆಂಡ್‌ಗಳ ಕಾಲ ತಡೆದುಕೊಳ್ಳಿ ನವೆ ನಿಲ್ಲುತ್ತದೆ. ನವೆಯಾಯಿತು ಎಂದು ಕಿವಿಗೆ ಸಿಕ್ಕಿದ್ದನ್ನೆಲ್ಲ ಹಾಕಲು ಹೋಗಬೇಡಿ ಎಂದು ಸಲಹೆ ನೀಡಿದರು.

ಗರ್ಭಿಣಿಯರು ಆರೋಗ್ಯವಾಗಿ ಇರಬೇಕು. ಅವರ ಆರೋಗ್ಯ ಸರಿ ಇಲ್ಲದೇ ಇದ್ದಾಗ ಅಥವಾ, ಶೀತದಂಥ ಸಣ್ಣಪುಟ್ಟ ಕಾಯಿಲೆಗೆ ಔಷಧ ತೆಗೆದು ಕೊಂಡಾಗ ಅದು ಹೊಟ್ಟೆಯೊಳಗಿರುವ ಮಗುವಿನ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲವು ಬಾರಿ ಕಿವಿ ಕೇಳಿಸದಿರಲು ಅದೂ ಕಾರಣವಾಗುತ್ತದೆ ಎಂದು ವಿವರಿಸಿದರು.

ಮಗು ಹೊಟ್ಟೆಯಲ್ಲಿ ಇರುವಾಗಲೇ 22ನೇ ವಾರಕ್ಕೆ ಕಿವಿ ಬೆಳೆದಿರುತ್ತದೆ. ಹೊರಗೆ ದೊಡ್ಡ ಶಬ್ದವಾದರೆ ಹೊಟ್ಟೆಯ ಒಳಗಿನ ಮಗುವೂ ಬೆಚ್ಚಿಬೀಳುತ್ತದೆ. ಹಾಗಾಗಿ ಕಿವಿಯ ಕಾರ್ಯ ಹುಟ್ಟುವ ಮೊದಲೇ ಆರಂಭವಾಗಿರುತ್ತದೆ ಎಂದರು.

ಮಗುವಿಗೆ ಕಿವಿ ಕೇಳಿಸದೇ ಇರುವುದು ಗೊತ್ತಾದ ಕೂಡಲೇ ವೈದ್ಯರ ಗಮನಕ್ಕೆ ತರಬೇಕು. ಮೂರು ವರ್ಷದ ಒಳಗಿನ ಮಗುವಾದರೆ ಶೇ 100ರಷ್ಟು ಕಿವಿ ಕೇಳಿಸುವಂತೆ ಮಾಡಲು ಸಾಧ್ಯವಾಗುತ್ತದೆ. ಮೂರು ವರ್ಷ ದಾಟಿದರೆ ಸಾಧ್ಯವಾಗುವುದಿಲ್ಲ. ಸಾಧಾರಣವಾಗಿ ಹೆತ್ತವರು ಇದ್ದ ದೇವರಿಗೆಲ್ಲ ಹರಕೆ ಹೇಳಿ ಆನಂತರವೂ ಸರಿಯಾಗದೇ ಇದ್ದಾಗ ವೈದ್ಯರಲ್ಲಿಗೆ ಬರುತ್ತಾರೆ. ಅಷ್ಟು ಹೊತ್ತಿಗೆ ಮೂರು ವರ್ಷ ದಾಟಿರುತ್ತದೆ. ಕೈ ಮೀರಿ ಹೋಗಿರುತ್ತದೆ ಎಂದು ಹೇಳಿದರು.

ಮಗುವಿಗೆ ಕಿವಿ ಕೇಳಿಸುತ್ತದೆಯೇ, ಇಲ್ವೇ ಎಂಬುದನ್ನು ವಿದೇಶಗಳಲ್ಲಿ ಆಸ್ಪತ್ರೆಯಿಂದ ತಾಯಿ, ಮಗು ಬಿಡುಗಡೆಯಾಗುವ ಮೊದಲೇ ಪರೀಕ್ಷೆ ಮಾಡಿಸುತ್ತಾರೆ. ನಮ್ಮಲ್ಲಿ ಮಾಡಿಸುತ್ತಿಲ್ಲ. ಆದರೆ ಕೇಳಿಸುತ್ತಾ ಇಲ್ವ ಎಂಬುದನ್ನು ಉಳಿದವರೂ ಪರೀಕ್ಷೆ ಮಾಡಬಹುದು. ಮಗುವಿನ ಪಕ್ಕದಲ್ಲಿ ಸದ್ದು ಮಾಡಿದರೆ ಅದರ ಕಣ್ಣು ಆ ಕಡೆಗೆ ತಿರುಗಿದರೆ ಅಥವಾ ಬೆಚ್ಚಿ ಬಿದ್ದರೆ ಕಿವಿ ಕೇಳಿಸುತ್ತದೆ ಎಂಬುದಕ್ಕೆ ಯಾವ ಅನುಮಾನವೂ ಬೇಡ ಎಂದು ಸಲಹೆ ನೀಡಿದರು.

ವಿಶ್ರಾಂತ ಪ್ರಾಚಾರ್ಯ ಡಾ. ಎಚ್‌. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಕೆ.ಟಿ. ನಾಗರಾಜ ನಾಯ್ಕ ಉಪಸ್ಥಿತರಿದ್ದರು. ಉಪನ್ಯಾಸಕರಾದ ಜಿ.ಎಸ್‌. ಕಾವ್ಯ ಸ್ವಾಗತಿಸಿದರು. ಎಂ.ಎ. ರುಕ್ಷಾನ ಅಂಜುಂ ವಂದಿಸಿದರು. ಪ್ರಶಿಕ್ಷಣಾರ್ಥಿ ಮನೋಹರ ಕಾರ್ಯಕ್ರಮ ನಿರೂಪಿಸಿದರು.

‘ಕಿವಿ ಕೇಳದವರನ್ನು ಹಿಯಾಳಿಸಿದರಿ’

ಕಣ್ಣು ಕಾಣಿಸದಿದ್ದರೆ, ಬೇರೆ ಅಂಗ ವೈಕಲ್ಯ ಇದ್ದರೆ ಅವರಿಗೆ ಅಯ್ಯೋ ಪಾಪ ಎಂದು ಅನುಕಂಪ ಸೂಚಿಸಿ ನೆರವಾಗುತ್ತಾರೆ. ಆದರೆ ಕಿವಿ ಕೇಳಿಸದವರನ್ನು ಕಂಡರೆ ಹಿಯಾಳಿಸುತ್ತಾರೆ. ಇದು ಸರಿಯಲ್ಲ. ಎಂದು ಡಾ. ವೀರೇಶ್‌ ಹೇಳಿದರು.

ಕಿವಿ ಕೇಳಿಸದಿರುವುದರಿಂದ ಬೇರೆಯವರ ಚಟುವಟಿಕೆಗಳು, ಮಾತುಗಳು, ಅಕ್ಷರಗಳು ಅರ್ಥವಾಗುವುದಿಲ್ಲ. ಅದರಿಂದ ಖಿನ್ನತೆಗೆ ಹೋಗಿರುತ್ತಾರೆ. ನಿಮ್ಮ ಹಿಯಾಳಿಕೆಯು ಅವರ ಖಿನ್ನತೆಯನ್ನು ಮತ್ತಷ್ಟು ಹೆಚ್ಚಳ ಮಾಡುತ್ತದೆ ಎಂದು ಕಿವಿ ಮಾತು ಹೇಳಿದರು.

ಸದ್ದಿನ ಅಂಕಿ ಅಂಶ

30 ಡೆಸಿಬಲ್‌ ಮೆದು ಮಾತು

60 ಡೆಸಿಬಲ್‌ ಮಾಮೂಲಿ ಮಾತು

90 ಡೆಸಿಬಲ್‌ ಜೋರು ಮಾತು

100 ಡೆಸಿಬಲ್‌ ಧ್ವನಿವರ್ಧಕ, ಬೈಕ್‌ ಸದ್ದು

120 ಡೆಸಿಬಲ್‌ ರಾಕ್‌ ಸಂಗೀತದ ಸದ್ದು

150 ಡೆಸಿಬಲ್‌ ಜೆಟ್‌ ವಿಮಾನದ ಸದ್ದು

90 ಡೆಸಿಬಲ್‌ ದಾಟಿದ ಸದ್ದು ಕಿವುಡುತನಕ್ಕೆ ಕಾರಣವಾಗಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT