ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರದರ್ಶನ: ಈದ್‌ ಉಲ್‌ ಫಿತ್ರ್‌ಗೆ ಸಜ್ಜು

Last Updated 3 ಮೇ 2022, 4:34 IST
ಅಕ್ಷರ ಗಾತ್ರ

ದಾವಣಗೆರೆ: ಸೋಮವಾರ ಚಂದ್ರದರ್ಶನ ಆಗಿರುವುದರಿಂದ ಮಂಗಳವಾರ ಈದ್ ಉಲ್‌ ಫಿತ್ರ್‌ ಹಬ್ಬ ಆಚರಿಸಲು ಮುಸ್ಲಿಂ ಸಮುದಾಯದವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಡತನದ ಅರಿವು, ಹಸಿವಿನ ಅರಿವು ಮೂಡಿಸಿ ಮನುಷ್ಯನಿಗೆ ತಾಳ್ಮೆ, ಸಹನೆ ಕಲಿಸಿಕೊಡುವ ಉಪವಾಸದ ಆಚರಣೆಯ ತಿಂಗಳು ರಂಜಾನ್‌ ಕೊನೇ ಹಂತಕ್ಕೆ ಬಂದಿದೆ. ಬಡವರಿಗೆ, ಅನಾಥರಿಗೆ ಸಹಾಯ ಮಾಡಿ, ಸಂತೋಷದಲ್ಲಿ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಿಸಲಾಗುತ್ತದೆ ಎಂದು ಸಮಾಜ ಸೇವಕ ಅನ್ವರ್‌ಖಾನ್‌ ತಿಳಿಸಿದ್ದಾರೆ.

ಒಂದು ತಿಂಗಳು ಉಪವಾಸ ಮಾಡಿದ ಬಳಿಕ ಚಂದ್ರ ಕಾಣಿಸಿದ ನಂತರ ಈದ್‌ ಉಲ್‌ ಫಿತರ್‌ ಹಬ್ಬ ಆಚರಿಸಲಾಗುತ್ತದೆ. ಇದು ಹಸಿವಿನ, ಬಡತನದ ಅರಿವನ್ನು ನೀಡಿದ ದೇವರಿಗೆ ಧನ್ಯವಾದ ಅರ್ಪಿಸುವ ಹಬ್ಬವಾಗಿದೆ. ಹಿಂದೆ ಯಾವುದೋ ಕಾರಣಕ್ಕೆ ವೈಮನಸ್ಸು ಕಟ್ಟಿಕೊಂಡಿದ್ದರೂ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡು ವೈಮನಸ್ಸು, ದ್ವೇಷ ಹೋಗಲಾಡಿಸಿ ಹೃದಯ ಸ್ವಚ್ಛಗೊಳಿಸುವ ದಿನ ಎನ್ನುತ್ತಾರೆ ಬಾಷಾನಗರದ ಜಬೀವುಲ್ಲಾಖಾನ್‌.

ಹೊಸಬಟ್ಟೆ ಧರಿಸಿ ಮಂಗಳವಾರ ಬೆಳಿಗ್ಗೆಯೇ ಎಲ್ಲರೂ ಹಬ್ಬಕ್ಕೆ ತಯಾರಾಗುತ್ತಾರೆ. ಬೆಳಿಗ್ಗೆ ಶ್ಯಾವಿಗೆ ಮಾಡಲಾಗುತ್ತದೆ. ಬಿರಿಯಾನಿ ಈ ಹಬ್ಬಕ್ಕೆ ಇನ್ನೊಂದು ವಿಶೇಷ ತಿನಿಸು. ಅದಕ್ಕೆ ಎಲ್ಲ ತಯಾರಿಗಳು ನಡೆದಿವೆ. ಎಲ್ಲರೂ ಪರಸ್ಪರ ಸಿಹಿ ತಿನಿಸುಗಳನ್ನು ಹಂಚಿಕೊಂಡು ಆಲಿಂಗಿಸಿಕೊಳ್ಳಲಿದ್ದಾರೆ. ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗಿ ಶುಭ ಹಾರೈಸಲಿದ್ದಾರೆ ಎಂದು ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್‌ ಮಾಹಿತಿ ನೀಡಿದರು.

ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡಿದ ಬಳಿಕ ಈ ಶುಭಾಶಯಗಳ ವಿನಿಮಯಗಳು ನಡೆಯುತ್ತವೆ. ಹಿಂದಿನ ಎಲ್ಲ ಕೆಟ್ಟ ಘಟನೆ, ಕೆಟ್ಟ ಸಮಯಗಳನ್ನು ಮರೆತು ಮತ್ತೆ ಹೊಸತನದಿಂದ ಹೊಸಮನುಷ್ಯರಾಗಿ ಬದುಕಲು ಈ ಹಬ್ಬ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT