ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸುಸ್ಥಿರ ಯೋಗ ಕೃಷಿಯಿಂದ ರೈತರ ಸಶಕ್ತೀರಣ

ಅಬು ಪರ್ವತದ ಬ್ರಹ್ಮಕುಮಾರೀಸ್ ಸಂಸ್ಥೆಯ ಗ್ರಾಮ ವಿಕಾಸ ವಿಭಾಗದ ಅಧ್ಯಕ್ಷೆ ಬ್ರಹ್ಮಕುಮಾರಿ ಸರಳಾಜಿ
Published 28 ಫೆಬ್ರುವರಿ 2024, 7:39 IST
Last Updated 28 ಫೆಬ್ರುವರಿ 2024, 7:39 IST
ಅಕ್ಷರ ಗಾತ್ರ

ದಾವಣಗೆರೆ: ‘ಬೆಳೆ ನಷ್ಟದಿಂದಾಗಿ ಇಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆಗೆ ಶರಣಾಗುತ್ತಿದ್ದು, ರೈತರ ಸಶಕ್ತೀರಣವಾಗಬೇಕಾದರೆ ಪ್ರಾಚೀನ ಋಷಿ–ಕೃಷಿ ಸಂಸ್ಕೃತಿಗೆ ಮರಳಬೇಕಿದೆ’ ಎಂದು ಅಬು ಪರ್ವತದ ಬ್ರಹ್ಮಕುಮಾರೀಸ್ ಸಂಸ್ಥೆಯ ಗ್ರಾಮ ವಿಕಾಸ ವಿಭಾಗದ ಅಧ್ಯಕ್ಷೆ ಬ್ರಹ್ಮಕುಮಾರಿ ಸರಳಾಜಿ ಸಲಹೆ ನೀಡಿದರು.

ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗ್ರಾಮ ವಿಕಾಸ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ‘ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ರೈತರಿಗೆ ಭೂಮಿಯ ಬಗ್ಗೆ ಪ್ರೀತಿ, ಪಾವಿತ್ರ್ಯತೆ, ಸೇವಾ ಮನೋಭಾವದಿಂದ ಋಷಿ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರಿಂದ ಭೂಮಿಯಲ್ಲಿ ಉತ್ಪಾದನೆ ಶಕ್ತಿ ವೃದ್ಧಿಸಿ ಶುದ್ಧ, ಸಾತ್ವಿಕ ಅನ್ನ ಉತ್ಪಾದನೆಯಾಗುತ್ತಿತ್ತು. ಪ್ರಸ್ತುತ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದಾಗಿ ಆಹಾರ ಉತ್ಪಾದನೆ ಹೆಚ್ಚಾದರೂ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಲೋಭ, ಸ್ವಾರ್ಥದ ಜೊತೆಗೆ ವೃತ್ತಿಯ ಒತ್ತಡವೂ ಜಾಸ್ತಿಯಾಗುತ್ತಿದ್ದು, ಭೂಮಿಯಲ್ಲಿ ಉತ್ಪಾದನೆ ಕುಸಿತವಾಗಿ ಸಣ್ಣ ಸಮಸ್ಯೆಗೆ ಹೆದರಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವುದರಿಂದ ರೈತರಿಗೆ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಇಂದು ರೈತರ ಸಶಕ್ತೀರಣದ ಅವಶ್ಯಕತೆ ಇದ್ದು, ವಿಷಯಮುಕ್ತ ಆಹಾರ ಉತ್ಪಾದಿಸುವುದರಿಂದ ಮಾಡುವುದರಿಂದ ಮನುಷ್ಯರು ಸಾಲದಿಂದ ಮುಕ್ತರಾಗಬಹುದು. ಅಧ್ಯಾತ್ಮದಿಂದ ಗ್ರಾಮೀಣ ಸಂಸ್ಕೃತಿಯ ಪುನರ್ ನಿರ್ಮಾಣವಾಗಲಿದ್ದು, ರೈತರು ಸುಸ್ಥಿರ, ಯೋಗ ಕೃಷಿಯತ್ತ ಮರಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತನನ್ನು ಚಾರಿತ್ರ್ಯ, ಗುಣವಂತರನ್ನಾಗಿ ಮಾಡಲು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಗ್ರಾಮ ವಿಕಾಸ ವಿಭಾಗದಿಂದ ತರಬೇತಿ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಶುದ್ಧ, ಸಾತ್ವಿಕ ಆಹಾರದ ಬಗ್ಗೆ ತರಬೇತಿ ನೀಡಲು ನಮ್ಮನ್ನು ಆಹ್ವಾನಿಸಿದ್ದಾರೆ’ ಎಂದು ಹೇಳಿದರು.

ಗ್ರಾಮ ವಿಕಾಸ ವಿಭಾಗದ ಸಂಯೋಜಕಿ ಬ್ರಹ್ಮಕುಮಾರಿ ಸುನಂದಾಜಿ ಮಾತನಾಡಿ, ‘ಸರ್ವಾಂಗೀಣ ವಿಕಾಸವೇ ನಿಜವಾದ ಸಮೃದ್ಧಿಯಾಗಿದ್ದು, ರೈತರು ಇಂತಹ ಸಮೃದ್ಧ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಪ್ರೀತಿ, ಶ್ರದ್ಧೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ, ನೂರಕ್ಕೆ ನೂರಷ್ಟು ಫಲ ಸಿಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆತು ‘ಶಾಶ್ವತ್ ಯೋಗಿಕ್ ಖೇಟಿ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಮೀನಿನಲ್ಲಿ ಪರಮಾತ್ಮನ ಧ್ಯಾನ ಮಾಡುವುದರಿಂದ ಬೆಳೆ ಚೆನ್ನಾಗಿ ಬರಲಿದ್ದು, ವಿಷಮುಕ್ತ ಬೆಳೆ ಬೆಳೆಯಲು ಈ ಯೋಜನೆ ಸಹಾಯಕವಾಗಿದೆ’ ಎಂದು ಹೇಳಿದರು.

ಗ್ರಾಮ ವಿಕಾಸ ವಿಭಾಗದ ಉಪಾಧ್ಯಕ್ಷ ಬ್ರಹ್ಮಕುಮಾರ ರಾಜು ಮಾತನಾಡಿದರು. ಹಳಿಯಾಳದ ಬ್ರಹ್ಮಕುಮಾರೀಸ್ ಸಂಚಾಲಕಿ  ಬ್ರಹ್ಮಕುಮಾರಿ ಪದ್ಮಾಜಿ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್, ಕೃಷಿ ಇಲಾಖೆ ಉಪ ನಿರ್ದೇಶಕ ಎಸ್.ಅಶೋಕ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್.ದೇವರಾಜ್, ಕುಕ್ಕವಾಡ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ.ಪಟೇಲ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅರುಣಕುಮಾರ್ ಕುರುಡಿ ಇದ್ದರು. ಬ್ರಹ್ಮಕುಮಾರೀಸ್ ದಾವಣಗೆರೆಯ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ. ಉಮಾದೇವಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT