ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತರೂ ಕ್ಷೇತ್ರ ಸುತ್ತಾಡುತ್ತಿರುವ ರೇಣುಕಾಚಾರ್ಯ! ಲೋಕಸಭೆ ಟಿಕೆಟ್‌ ಮೇಲೆ ಕಣ್ಣು?

ಲೋಕಸಭೆ ಚುನಾವಣೆ ಟಿಕೆಟ್‌ ಮೇಲೆ ದೃಷ್ಟಿ ನೆಟ್ಟಿರುವ ಮಾಜಿ ಶಾಸಕ
Published 7 ಜೂನ್ 2023, 16:06 IST
Last Updated 7 ಜೂನ್ 2023, 16:06 IST
ಅಕ್ಷರ ಗಾತ್ರ

ದಾವಣಗೆರೆ: ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ವಿರುದ್ಧ ಸೋತ ನಂತರವೂ ತಮ್ಮ ಅವಧಿಯಲ್ಲಿ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

‘ನನ್ನ ಸೋಲಿಗೆ ಪಕ್ಷದ ವರಿಷ್ಠರ ತಪ್ಪು ನಿರ್ಧಾರಗಳು ಹಾಗೂ ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿ ಯೋಜನೆಗಳೇ ಕಾರಣ’ ಎಂದು ಟೀಕಿಸಿದ್ದ ರೇಣುಕಾಚಾರ್ಯ, ‘ಕ್ಷೇತ್ರದಾದ್ಯಂತ ಎಷ್ಟೆಲ್ಲ ಅಭಿವೃದ್ಧಿ ಮಾಡಿದ್ದರೂ ಮತದಾರರು ನನ್ನ ಕೈಹಿಡಿಯಲಿಲ್ಲ’ ಎಂಬ ಕಾರಣ ಮುಂದಿರಿಸಿ, ಹತಾಶೆಯಿಂದ ಚುನಾವಣಾ ರಾಜಕೀಯದಿಂದಲೇ ನಿವೃತ್ತರಾಗುವುದಾಗಿ ಘೋಷಿಸಿದ್ದರು.

‘ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರವನ್ನು ಹಿಂಪ‍ಡೆಯಿರಿ’ ಎಂದು ನೂರಾರು ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಅವರ ಮನೆಗೆ ತೆರಳಿ ಮನವಿ ಮಾಡಿದ್ದರು. ನಿರ್ಧಾರದ ಕುರಿತು ಪುನರ್‌ ಪರಿಶೀಲನೆ ನಡೆಸುವುದಾಗಿ ಹೇಳಿರುವ ಅವರು, ಈವರೆಗೆ ತಮ್ಮ ನಿಲುವನ್ನು ಪ್ರಕಟಿಸಿಲ್ಲ.

ಆದರೆ, ನಿತ್ಯವೂ ಕೆಲವು ಬೆಂಬಲಿಗರೊಂದಿಗೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳುತ್ತ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲಿಸುತ್ತಿದ್ದಾರೆ. ‘ಹಾಲಿ ಶಾಸಕ ಡಿ.ಜಿ.ಶಾಂತನಗೌಡ ಅವರು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಬೇಕು. ಆದರೆ ಸೋತಿರುವ ರೇಣುಕಾಚಾರ್ಯ ಈ ಬಗ್ಗೆ ಗಮನ ಹರಿಸುತ್ತಿರುವುದು ಏಕೆ?’ ಎಂಬ ಪ್ರಶ್ನೆ ಕ್ಷೇತ್ರದಾದ್ಯಂತ ಹುಟ್ಟಿಕೊಂಡಿದೆ.

ಇವರ ಓಡಾಟಕ್ಕೆ ಶಾಸಕ ಶಾಂತನಗೌಡ ಮತ್ತು ಕಾಂಗ್ರೆಸ್‌ ವಲಯದಿಂದ ಟೀಕೆ ವ್ಯಕ್ತವಾಗಿದ್ದು, ‘ಸೋತವರು ಶಿಷ್ಟಾಚಾರ ಉಲ್ಲಂಘಿಸಿ ಕಾಮಗಾರಿ ಪರಿಶೀಲನೆ ನಡೆಸುವುದು ಏಕೆ’ ಎಂದು ಸಾರ್ವಜನಿಕರು ಮತ್ತು ಕಾಂಗ್ರೆಸ್‌ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಕೆಲವು ಮುಖಂಡರು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. 

‘ನಾನು ಸುಮ್ಮನೆ ಕುಳಿತುಕೊಳ್ಳುವವನಲ್ಲ. ಅಧಿಕಾರದಲ್ಲಿದ್ದಾಗಲೂ ನಿತ್ಯ ಕ್ಷೇತ್ರದ ಒಂದಿಲ್ಲೊಂದು ಗ್ರಾಮಕ್ಕೆ ಭೇಟಿ ನೀಡಿ ಅಹವಾಲು ಸ್ವೀಕಾರ ಅಥವಾ ಜನರ ಸಮಸ್ಯೆಗಳ ಅವಲೋಕನದಂತಹ ಕೆಲಸದಲ್ಲಿ ನಿರತನಾಗಿರುತ್ತಿದ್ದೆ. ಅಧಿಕಾರಿಗಳನ್ನು ಕರೆದೊಯ್ಯದ್ದರಿಂದ ಇಲ್ಲಿ ಶಿಷ್ಟಾಚಾರದ ಪ್ರಶ್ನೆ ಉದ್ಭವಿಸುವುದಿಲ್ಲ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳು ಎಂಬ ಉದ್ದೇಶದಿಂದ ಅಲ್ಲ. ಬದಲಿಗೆ, ಜನರಿಗೆ ಅಭಿವೃದ್ಧಿ ಕಾಮಗಾರಿಯ ಸೌಲಭ್ಯ ಬೇಗ ಸಿಗಲಿ ಎಂಬ ಉದ್ದೇಶದಿಂದ ಪರಿಶೀಲನೆ ನಡೆಸುತ್ತಿದ್ದೇನೆ’ ಎಂದು ರೇಣುಕಾಚಾರ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಸ್ಫರ್ಧೆಗೆ ಒತ್ತಡ

‘ನಾನು ಚುನಾವಣೆ ರಾಜಕೀಯದಿಂದ ದೂರವಿರಬೇಕೆಂದು ಬಯಸಿದ್ದೇನೆ. ಆದರೆ, ಬೆಂಬಲಿಗರು ಆ ನಿರ್ಧಾರ ಕೈಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆಯೂ ಕೋರುತ್ತಿದ್ದಾರೆ. ಪಕ್ಷದ ವರಿಷ್ಠರು ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಟಿಕೆಟ್‌ ನೀಡದಿದ್ದರೆ ಈ ಬಗ್ಗೆ ಚಿಂತನೆ ನಡೆಸುವೆ. ಜನರ ಒತ್ತಾಯಕ್ಕೆ ಈಗಲೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಕ್ಷ ಬಯಸಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಎಂ.ಪಿ.ಆಗುವ ಬಗ್ಗೆ ಆಲೋಚಿಸಬಹುದು’ ಎಂದೂ ರೇಣುಕಾಚಾರ್ಯ ಹೇಳಿದರು.

ಎಚ್‌.ಬಿ. ಮಂಜಪ್ಪ
ಎಚ್‌.ಬಿ. ಮಂಜಪ್ಪ
ಡಿ.ಜಿ.ಶಾಂತನಗೌಡ  
ಡಿ.ಜಿ.ಶಾಂತನಗೌಡ  

ಬುದ್ಧಿಭ್ರಮಣೆ ಆದವರಂತೆ ವರ್ತಿಸಬಾರದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಅವಳಿ ತಾಲೂಕಿನಲ್ಲಿ ಕಾಮಗಾರಿಗಳ ವೀಕ್ಷಣೆಗೆ ಹೋಗಬೇಡ ಎನ್ನುವುದಕ್ಕೆ ನಾನ್ಯಾರು ಎಂದು ಪ್ರಶ್ನಿಸಿರುವ ನೂತನ ಶಾಸಕ ಡಿ.ಜಿ.ಶಾಂತನಗೌಡ  ಎಲ್ಲರಿಗೂ ಸ್ವಾತಂತ್ರ್ಯ ಇದೆ. ಕ್ಷೇತ್ರದಲ್ಲಿ ಯಾರು ಬೇಕಾದ್ರೂ ಅಡ್ಡಾಡಬಹುದು ಎಂದಿದ್ದಾರೆ. ಆದರೆ ಅವರವರ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿರುವ ಕೆಲಸದ ಟೆಂಡರ್ ಆಗಿ ಒಪ್ಪಂದ ಆಗಿದ್ದರೆ ಅದನ್ನು ಈಗ ಅಧಿಕಾರದಲ್ಲಿ ಇರುವವರು ತಡೆ ಹಿಡಿಯಲು ಬರುವುದಿಲ್ಲ. ಟೆಂಡರ್ ಆಗದೇ ಇದ್ದರೆ ಅನುಮತಿ ಸಿಗದೇ ಇದ್ದರೇ ಆ ಕುರಿತು ಪರಿಶೀಲಿಸಬಹುದಷ್ಟೇ ಎಂದು ಹೇಳಿರುವ ಅವರು 2018ರಲ್ಲಿ ನಾನು ಸೋತಿದ್ದೆ. ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಹೋಗಲಾಗಿದೆ. ಅದೇ ರೀತಿ ಈಗಲೂ ನಾನು ಅದನ್ನು ಪಾಲಿಸುತ್ತೇನೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಆದರೆ ಯಾರೂ ಬುದ್ಧಿಭ್ರಮಣೆ ಆದವರಂತೆ ವರ್ತಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸೋತವರು ಜನರ ತೀರ್ಪು ಗೌರವಿಸಲಿ ‘ರೇಣುಕಾಚಾರ್ಯ ಅವರನ್ನು ಜನ ತಿರಸ್ಕರಿಸಿದ್ದಾರೆ. ಸರ್ಕಾರವೂ ಬದಲಾಗಿದೆ. ಕಾಮಗಾರಿಗಳ ಪರಿಶೀಲನೆ ನೆಪದಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ‘ಅವರ ಅಧಿಕಾರ ಮುಗಿದಿದೆ. ನಮ್ಮ ಪಕ್ಷದ ಶಾಂತನಗೌಡರಿಗೆ ಕೆಲಸ ಮುಂದುವರೆಸಿಕೊಂಡು ಹೋಗಲು ಬಿಡಬೇಕು. ಅದನ್ನು ಬಿಟ್ಟು ನಾನು ಮಾಡಿದ್ದೆ ನಾನು ತಂದಿದ್ದೆ ಎಂದು ಪ್ರತಿ ಬಾರಿಯೂ ಹೇಳುತ್ತಾ ಹೋದರೆ ಹೇಗೆ’ ಎಂದು ಪ್ರಶ್ನಿಸಿರುವ ಅವರು ಜನರ ತೆರಿಗೆ ಹಣದಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಚಾರ ಪಡೆಯಬೇಕು ಆದರೆ ಅದು ಅತಿಯಾಗಬಾರದು. ಜನರ ತೀರ್ಪನ್ನು ಗೌರವಿಸಬೇಕು ಎಂದು ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT