ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲ್ ಜಯಂತಿಗೆ ಸಂಭ್ರಮದ ಚಾಲನೆ

ಗಮನ ಸೆಳೆದ ಕಾಟಿ ಮೆರವಣಿಗೆ, ವಿವಿಧೆಡೆಯಿಂದ ಪಾದಯಾತ್ರೆಯಲ್ಲಿ ಬಂದ ಮಾಲಾಧಾರಿಗಳು
Last Updated 14 ಫೆಬ್ರುವರಿ 2021, 3:21 IST
ಅಕ್ಷರ ಗಾತ್ರ

ಸೂರಗೊಂಡನಕೊಪ್ಪ (ನ್ಯಾಮತಿ): ಇಲ್ಲಿನ ಭಾಯಾಗಡ್‌ದ ಸೇವಾಲಾಲ್ ಜನ್ಮಸ್ಥಳದಲ್ಲಿ ಸಂತ ಸೇವಾಲಾಲ್ ಮತ್ತು ಮರಿಯಮ್ಮ ಅವರ 282ನೇ ಜಯಂತ್ಯುತ್ಸವಕ್ಕೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ಚಾಲನೆ ನೀಡಲಾಯಿತು.

ಸೂರಗೊಂಡನಕೊಪ್ಪ ತಾಂಡಾದಿಂದ ಕುಂಭಮೇಳ, ವಾಝಾ–ಭಜನೆ, ಕಾಟಿಯೊಂದಿಗೆ ಸಾಧು–ಸಂತರ ಮೆರವಣಿಗೆ ನಡೆಯಿತು. ಕಾಟಿ ಆರೋಹಣ ಮಾಡಿದ ನಂತರ ಸಾಮೂಹಿಕ ದಾಸೋಹ ಆರಂಭವಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು ನೃತ್ಯ ಮಾಡಿ ಸಂಭ್ರಮಿಸಿ‌ದರು. ರಾಜ್ಯದ ವಿವಿಧ ಭಾಗಗಳಿಂದ ಮಾಲಾಧಾರಿಗಳು, ಭಕ್ತರು ಪಾದ ಯಾತ್ರೆಯಲ್ಲಿಸೂರಗೊಂಡನಕೊಪ್ಪಕ್ಕೆ ಬಂದರು.

ಸಂಜೆ ಬಂಜಾರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ನೃತ್ಯ, ಯುವಗೋಷ್ಠಿ, ಕವಿಗೋಷ್ಠಿ ನಡೆಯಿತು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ತಾಂಡಾ ಅಭಿವೃದ್ಧಿ‌ ನಿಗಮದ ಅಧ್ಯಕ್ಷ ಪಿ. ರಾಜೀವ್, ಸೇವಾಲಾಲ್‌ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ, ಕಾರ್ಯದರ್ಶಿ ರಾಘವೇಂದ್ರನಾಯ್ಕ, ಶಾಸಕ ಅಶೋಕ ನಾಯ್ಕ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಗಳ ಸದಸ್ಯರು ಜಯಂತ್ಯುತ್ಸವದ ನೇತೃತ್ವ ವಹಿಸಿದ್ದರು.

ಭಾನುವಾರ ನಡೆಯುವ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿವಿಧ ಧಾರ್ಮಿಕ ಆಚರಣೆ: ಬೆಳಿಗ್ಗೆ ಸೂರಗೊಂಡನಕೊಪ್ಪ ತಾಂಡಾದಿಂದ ವಾಝಾ-ಭಜನೆಯೊಂದಿಗೆ ಸಾಧು-ಸಂತರ ನೇತೃತ್ವದಲ್ಲಿ ಕುಂಬ ಹೊತ್ತ ಮಹಿಳೆಯರ ಮೆರವಣಿಗೆಯೊಂದಿಗೆ ಭಾಯಾಗಡ್ ತಲುಪಿ, ಕಾಟಿ ಆರೋಹಣ ನಡೆಯಿತು. ನಂತರ ಸೇವಾಲಾಲ್ ಮತ್ತು ಮರಿಯಮ್ಮ ವಿಗ್ರಹಗಳಿಗೆ ಪೂಜೆ ನೆರವೇರಿಸಿ, ದಾಸೋಹ ಕೇಂದ್ರದಲ್ಲಿ ಅನ್ನಪೂರ್ಣೇಶ್ವರಿ ಪೂಜೆ ನೆರವೇರಿಸಿ ದಾಸೋಹಕ್ಕೆ ಚಾಲನೆ ನೀಡಲಾಯಿತು.

ಜಯಂತ್ಯುತ್ಸವ ನಿಮಿತ್ತ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ, ಸೇವಾಲಾಲ್‌ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಅಶೋಕನಾಯ್ಕ, ಬಾಲರಾಜನಾಯ್ಕ, ಕ್ರೀಡಾ ವ್ಯವಸ್ಥಾಪಕ ಶಿವರಾಮನಾಯ್ಕ, ಪೀರ್‍ಯಾನಾಯ್ಕ ಚಾಲನೆ ನೀಡಿದರು.

ಸಂಜೆ ನಡೆದ ಯುವ ಸಮಾವೇಶವನ್ನು ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ. ರಾಜೀವ ಉದ್ಘಾಟಿಸಿದರು. ನಿರ್ವಹಣಾ ಸಮಿತಿ ಅಧ್ಯಕ್ಷ ಡಾ. ಈಶ್ವರನಾಯ್ಕ ಅಧ್ಯಕ್ಷತೆ ವಹಿಸಿದ್ದರು.

‘ಶಿಕ್ಷಣ ಉದ್ಯೋಗ ಮತ್ತು ಸ್ಪರ್ಧಾತ್ಮಕ ಸ್ಪರ್ಧೆ’ ಕುರಿತು ಪ್ರೊ. ಹರೀಶ ಲಂಬಾಣಿ, ‘ತಾಂಡಾ ಮತ್ತು ಯುವ ಸಬಲೀಕರಣ’ ಕುರಿತು ಡಾ. ಆರ್.ಎನ್. ರಾಜಾನಾಯ್ಕ, ‘ಬಲವಂತದ ಮತಾಂತರ ಮತ್ತು ಬಂಜಾರರು’ ಕುರಿತು ಭೋಜರಾಜನಾಯ್ಕ ಹಾಗೂ ‘ಬಂಜಾರ ಮಹಿಳೆಯರ ಸ್ಥಿತಿಗತಿ ಮತ್ತು ಪರಿಹಾರಗಳ’ ಬಗ್ಗೆ ಪ್ರಾಧ್ಯಾಪಕಿ ಡಾ. ನಾಗವೇಣಿ ಮಾತನಾಡಿದರು.

ಕವಿಗೋಷ್ಠಿ: ಎಚ್. ರಾಥೋಡ್ ಅಧ್ಯಕ್ಷತೆಯಲ್ಲಿ ಲಂಬಾಣಿ ಸಮುದಾಯದ ಕವಿಗಳ ಕವಿಗೋಷ್ಠಿ ನಡೆಯಿತು. ರಾಜ್ಯದ ವಿವಿದ ಭಾಗಗಳಿಂದ ಬಂದ ಕವಿಗಳು ಕವನ ವಾಚಿಸಿದರು. ಮಧುನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT