ಶುಕ್ರವಾರ, ಫೆಬ್ರವರಿ 3, 2023
25 °C
ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ₹ 5,000ರಿಂದ ₹ 6,000 ಬೆಲೆ

ಜಗಳೂರು | ಸಮೃದ್ಧ ತೇವಾಂಶ: ಕಡಲೆಯ ಬಂಪರ್ ಇಳುವರಿ ನಿರೀಕ್ಷೆ

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆಯನ್ನು ಜಗಳೂರು ತಾಲ್ಲೂಕಿನಲ್ಲಿ ಜಿಲ್ಲೆಯಲ್ಲೇ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಈ ವರ್ಷದ ಮುಂಗಾರಿನಲ್ಲಿ ಸಮೃದ್ಧ ಮಳೆಯಾಗಿರುವ ಪರಿಣಾಮವಾಗಿ ಕಡಲೆ ಬೆಳೆಗಾರರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಮಳೆಯನ್ನು ಬೇಡದೆ, ಇಬ್ಬನಿಗೆ ಅತ್ಯುತ್ತಮ ಇಳುವರಿ ನೀಡುವ ಕಡಲೆ ಬೆಳೆ ಹೆಚ್ಚು ಖರ್ಚಿಲ್ಲದ, ರೈತರಿಗೆ ಲಾಭದಾಯಕವಾದ ಬೆಳೆಯಾಗಿದೆ. ಎರೆ ಭೂಮಿಯಲ್ಲಿ, ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯ ತೇವಾಂಶದಿಂದ ನೆರವಿನಿಂದಲೇ ಸಮೃದ್ಧವಾಗಿ ಬೆಳೆಯುವ ಕಡಲೆ ಮಳೆಯಾಶ್ರಿತ ಭೂಮಿಯಲ್ಲಿ ಎರಡನೇ ಬೆಳೆಯಾಗಿ ರೈತರಿಗೆ ಲಾಭ ತರುತ್ತದೆ. ಇದು ದ್ವಿದಳ ಧಾನ್ಯ ಬೆಳೆಯಾಗಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಹಾಗೂ ಸೊಕ್ಕೆ ಹೋಬಳಿ ವ್ಯಾಪ್ತಿಯ 20,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಬಾರಿ ಕಡಲೆ ಬೆಳೆಯಲಾಗಿದೆ. 90 ದಿನಗಳ ಬೆಳೆಯಾಗಿರುವ ಇದರಲ್ಲಿ ಪ್ರತಿ ಎಕರೆಗೆ 10 ಕ್ವಿಂಟಲ್‌ದಿಂದ 15 ಕ್ವಿಂಟಲ್‌ವರೆಗೆ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 5,000ರಿಂದ ₹ 6,000 ಬೆಲೆ ಇದೆ. ಕಡಿಮೆ ಖರ್ಚು ಹೆಚ್ಚು ಲಾಭದಾಯಕವಾಗಿದೆ.

‘ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದು, ಭೂಮಿಯಲ್ಲಿ ತೇವಾಂಶ ಹದವಾಗಿದೆ. ಇಬ್ಬನಿ ಸಹ ನಿತ್ಯ ದಟ್ಟವಾಗಿ ಬೀಳುತ್ತಿದೆ. ಉತ್ತಮ ಇಳುವರಿಗೆ ಪ್ರಸ್ತುತ ಹಿಂಗಾರಿನಲ್ಲಿ ಪೂರಕ ವಾತಾವರಣ ಇದೆ. ಮಳೆಯಾಶ್ರಿತ 35 ಎಕರೆಯಲ್ಲಿ ನಾನು ಕಡಲೆ ಬೆಳೆದಿದ್ದೇನೆ. ಮುಂಗಾರಿನಲ್ಲಿ ಮೆಕ್ಕೆಜೋಳ ಬೆಳೆ ತೆಗೆದಿದ್ದೇನೆ. ಈಗ ಅದೇ ಭೂಮಿಯಲ್ಲಿ ಕಡಲೆ ಎರಡನೇ ಬೆಳೆಯಾಗಿದ್ದು, ಉತ್ತಮ ಇಳುವರಿಯ ನಿರೀಕ್ಷೆ ಇದೆ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ರೈತ ತಿಪ್ಪೇಸ್ವಾಮಿ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂಗಾರು ಹಂಗಾಮಿನ ಕಡಲೆ ಬಿತ್ತನೆಗಾಗಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ತಾಲ್ಲೂಕಿನಲ್ಲಿ 4,400 ಕ್ವಿಂಟಲ್ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗಿದೆ. 90 ದಿನಗಳ ಅವಧಿಯ ಕಡಲೆಯು ಭೂಮಿಯಲ್ಲಿ ಸಾರಜನಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ರೈತರಿಗೆ ಲಾಭದಾಯಕವೂ ಆಗಿದೆ. ಪ್ರಸ್ತುತ ಕಡಲೆ ಹೂ ಹಂತದ ಒಳಗಿದ್ದು, 19 ಆಲ್ ಟಾನಿಕ್ ಮತ್ತು ಲಘು ಪೋಷಕಾಂಶಗಳನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು. ಕೀಟ ಬಾಧೆ ಕಾಣಿಸಿಕೊಂಡಲ್ಲಿ ಕೀಟ ನಾಶಕವನ್ನು ಸಿಂಪಡಿಸಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ರೈತರಿಗೆ ಸಲಹೆ
ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು