ಬುಧವಾರ, ನವೆಂಬರ್ 30, 2022
17 °C
ಒಬ್ಬನ ಬಂಧನ, ಮತ್ತೊಬ್ಬನಿಗೆ ನಡೆದಿದೆ ಶೋಧ ಕಾರ್ಯಾಚರಣೆ

ನಕಲಿ ಚಿನ್ನದ ನಾಣ್ಯ: ₹ 30 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇರಳದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯ ನೀಡಿ ₹ 30 ಲಕ್ಷ ವಂಚಿಸಿದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಿರುವ ಪೊಲೀಸರು, ₹ 22 ಲಕ್ಷ ವಶಪಡಿಸಿಕೊಂಡಿದ್ದಾರೆ. ‍

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಆರ್‌. ಗಿರೀಶ್‌ ರಂಗಪ್ಪ ಬಂಧಿತ ಆರೋಪಿ. ಇನ್ನೊಬ್ಬ ಆರೋಪಿ ‍ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ. ಕೇರಳದ ವಯನಾಡಿನ ಮುರುಳೀಧರ ಎಂಬುವವರಿಗೆ ಚಿನ್ನದ ನಾಣ್ಯ ಸಿಕ್ಕಿದೆ ಎಂದು ಇಲ್ಲಿನ ಪಿ.ಬಿ. ರಸ್ತೆಯ ಟೊಯೊಟಾ ಶೋ ರೂಂ ಬಳಿ ಕರೆಸಿಕೊಂಡು ಒಂದು ಚಿನ್ನದ ನಾಣ್ಯ ನೀಡಿದ್ದ ಆರೋಪಿಗಳು ಅವರನ್ನು ನಂಬಿಸಿದ್ದರು. ಬಳಿಕ ಅವರಿಗೆ ನಕಲಿ ನಾಣ್ಯಗಳನ್ನು ನೀಡಿ ₹ 30 ಲಕ್ಷ ವಂಚಿಸಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಸಂಬಂಧ 2022ರ ಮಾರ್ಚ್‌ನಲ್ಲಿ ಇಲ್ಲಿನ ಗಾಂಧಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿತ್ತು. ಪ್ರಕರಣ ಸಂಬಂಧ ನಕಲಿ ಚಿನ್ನದ ನಾಣ್ಯಗಳು ಹಾಗೂ ₹ 22 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತ ಸಿಕ್ಕಿದರೆ ಉಳಿದ ಹಣ ಪತ್ತೆಯಾಗಲಿದೆ. ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುವ ಕಳ್ಳರ ದೊಡ್ಡ ಜಾಲವೇ ಇದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ವಿವರಿಸಿದರು.

‘ನಮ್ಮ ರಾಜ್ಯದ ಜನರು ಈಗೀಗ ಎಚ್ಚೆತ್ತುಕೊಂಡಿರುವ ಕಾರಣ ಆರೋಪಿಗಳು ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ಜನರನ್ನು ವಂಚನೆ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದಾರೆ. ಈ ಜಾಲ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಹರಪನಹಳ್ಳಿ ಭಾಗದಲ್ಲೂ ಸಕ್ರಿಯವಾಗಿದೆ. ಈ ಭಾಗಕ್ಕೆ ದಾವಣಗೆರೆ ಕೇಂದ್ರ ಸ್ಥಾನ ಆದ ಕಾರಣ ಇಲ್ಲಿಗೆ ಕರೆಸಿಕೊಂಡು ಮೋಸ ಮಾಡುತ್ತಿದ್ದಾರೆ. ಜನರು ಅರಿವು ಮೂಡಿಸಿಕೊಳ್ಳಬೇಕು. ಇಂತಹ ವಂಚನೆಗೆ ಬಲಿಯಾಗಬಾರದು’ ಎಂದು ಅವರು ಮನವಿ
ಮಾಡಿದರು.

ಕಾರ್ಯಾಚರಣೆಯಲ್ಲಿ ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್‌. ಬಸವರಾಜ್‌, ಸಿಬ್ಬಂದಿ ಕೆ.ಸಿ. ಮಜೀದ್‌, ಕೆ.ಟಿ. ಆಂಜನೇಯ, ಡಿ. ರಾಘವೇಂದ್ರ, ಯು. ಮಾರುತಿ, ಪಿ. ಸುರೇಶ್‌, ಜೆ.ಎಚ್‌. ಆರ್‌. ನಟರಾಜ್‌, ಈ.ಬಿ. ಆಶೋಕ, ಆರ್‌. ರಮೇಶನಾಯ್ಕ್, ಸಿ.ಎಸ್‌. ಬಾಲರಾಜ್‌, ಸಿ. ಮಲ್ಲಿಕಾರ್ಜುನ್‌, ಹಾಗೂ ಕೆ. ರಂಗಪ್ಪ ಭಾಗವಹಿಸಿದ್ದರು.  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಇದ್ದರು.

ವಿಮೆ ಪಾಲಿಸಿ: ಹಲವರು ಭಾಗಿ ಶಂಕೆ

ರೋಗಿಗಳ ಹೆಸರಿನಲ್ಲಿ ವಿಮೆ ಪಾಲಿಸಿ ಮಾಡಿಸಿ ಹಣ ಲಪಟಾಯಿಸುವ ಗುಂಪು ಈ ಭಾಗದಲ್ಲಿ ಸಕ್ರಿಯವಾಗಿದೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ವಿಮೆ ಕಂಪನಿ ಏಜೆಂಟ್‌, ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಮಾಹಿತಿ ಇದೆ. ಆಸ್ಪತ್ರೆಗೆ ದಾಖಲಾದ ಕ್ಯಾನ್ಸರ್‌ ಆಥವಾ ಗಂಭೀರ ಕಾಯಿಲೆ ಇರುವವರ ಮಾಹಿತಿಯನ್ನು ಈ ಗುಂಪಿಗೆ ನೀಡಲಾಗುತ್ತದೆ. ಈ ಗುಂಪು ಅವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಹಣ ದೋಚುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾಹಿತಿ ನೀಡಿದರು.

ಈ ಗುಂಪು ರೋಗಿಯ ಹೆಸರನ್ನು ಮಾತ್ರ ಬಳಸಿಕೊಳ್ಳುತ್ತದೆ. ಹಣ ವರ್ಗಾವಣೆ ಮಾಡುವ ಹಾಗೂ ಪಡೆಯುವ ಸೌಲಭ್ಯ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತದೆ. ವಿಮೆಯ ಹಣ ವರ್ಗಾವಣೆ ಮಾಡಿಕೊಳ್ಳಲು ಒಟಿಪಿಯೂ ತಮಗೆ ಬರುವಂತೆ ಮಾಡಿಕೊಳ್ಳುತ್ತದೆ. ರೋಗಿಗೆ ಸ್ವಲ್ಪ ಹಣವನ್ನು ಮಾತ್ರ ನೀಡಿ ವಂಚಿಸುತ್ತಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಅಡಿಕೆ ಕಳವು ಪ್ರಕರಣ: ಗಸ್ತು ಹೆಚ್ಚಳ

ಜಿಲ್ಲೆಯಲ್ಲಿ ನಡೆಯುತ್ತಿರುವ ಅಡಿಕೆ ಕಳವು ಪ್ರಕರಣ ಸಂಬಂಧ ಕಳವು ನಡೆಯುತ್ತಿರುವ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಅಲ್ಲದೇ ಮುಖ್ಯರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸಂಬಂಧ‍ಪಟ್ಟ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ. ಅಡಿಕೆ ಕೊಯ್ಲು ಸಂದರ್ಭದಲ್ಲಿ ಕಾವಲಿಗೆ ಒಬ್ಬರನ್ನು ನೇಮಿಸಿಕೊಳ್ಳುವಂತೆ ಬೆಳೆಗಾರರಿಗೆ ಸೂಚಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಅಡಿಕೆ ಖರೀದಿಗೆ ಸೈಕಲ್‌ ಅಥವಾ ಬೈಕ್‌ನಲ್ಲಿ ಬರುವವರ ಮೇಲೆ ನಿಗಾ ವಹಿಸಬೇಕು. ಇಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ರೈತರಿಗೆ ತಿಳಿಸಲಾಗಿದೆ ಎಂದು ರಿಷ್ಯಂತ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು