ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ರೈತರ ಆಗ್ರಹ

ಐದು ವರ್ಷದಿಂದ ನಿರ್ಮಾಣಗೊಳ್ಳುತ್ತಿದೆ ರೈತ ಸಂಪರ್ಕ ಕೇಂದ್ರದ ಕಟ್ಟಡ
Published 2 ಜೂನ್ 2024, 16:15 IST
Last Updated 2 ಜೂನ್ 2024, 16:15 IST
ಅಕ್ಷರ ಗಾತ್ರ

ಬಸವಾಪಟ್ಟಣ: ಇಲ್ಲಿನ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಐದು ವರ್ಷಗಳಿಂದ ಕುಂಟುತ್ತಾ ಸಾಗಿದೆ. 

ರಾಜ್ಯ ಸರ್ಕಾರದ ಸುಸಜ್ಜಿತ ರೈತ ಸಂಪರ್ಕ ಕೇಂದ್ರಗಳ ನಿರ್ಮಾಣ ಯೋಜನೆಯಡಿ ಐದು ವರ್ಷಗಳ ಹಿಂದೆ ಸುಸ್ಥಿತಿಯಲ್ಲಿದ್ದ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಆದರೆ 5 ವರ್ಷಗಳು ಕಳೆದರೂ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ರೈತ ಸಂಪರ್ಕ ಕೇಂದ್ರದ ಕಚೇರಿಯನ್ನು ಸಮೀಪದ ಹರೋಸಾಗರ ಗ್ರಾಮದಲ್ಲಿದ್ದ ಇಲಾಖೆಯ ಉಗ್ರಾಣಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಬಹುತೇಕ ರೈತರಿಗೆ ಈ ಕಚೇರಿ ಎಲ್ಲಿದೆ ಎಂಬುದೇ ತಿಳಿದಿಲ್ಲ.

ಈ ರೈತ ಸಂಪರ್ಕ ಕೇಂದ್ರಕ್ಕೆ 22 ಗ್ರಾಮಗಳು ಒಳಪಟ್ಟಿದ್ದು, ರೈತರಿಗೆ ಕೇಂದ್ರಕ್ಕೆ ಬಂದು ಹೋಗಲು ಅನುಕೂಲವಾಗಿತ್ತು. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡವನ್ನು ತೆರವುಗೊಳಿಸಿದಾಗ ಬಸವಾಪಟ್ಟಣದ ಯಾವುದಾದರೂ ಸಾರ್ವಜನಿಕ ಕಟ್ಟಡಕ್ಕೆ ಕೇಂದ್ರ ಸ್ಥಳಾಂತರಿಸಬಹುದಾಗಿತ್ತು. ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಗಳು ಖಾಲಿ ಇದ್ದವು. ಈ ಬಗ್ಗೆ ಅಧಿಕಾರಿಗಳು ಯಾರೊಂದಿಗೂ ವಿಚಾರ ವಿನಿಮಯ ಮಾಡದೇ ಹರೋಸಾಗರಕ್ಕೆ ಸ್ಥಳಾಂತರಿಸಿರುವುದರಿಂದ ಸುತ್ತಲಿನ ಗ್ರಾಮಗಳ ರೈತರಿಗೆ ತೊಂದರೆಯಾಗಿದೆ ಎಂದು ರೈತರಾದ ಹಾಲೇಶಪ್ಪ, ರುದ್ರಪ್ಪ, ದಾಗಿನಕಟ್ಟೆಯ ತಿಪ್ಪೇಶ್‌, ಬಸವರಾಜಪ್ಪ, ಯಲೋದಹಳ್ಳಿಯ ರವಿಕುಮಾರ್‌ ಹನುಮಂತಪ್ಪ ದೂರಿದ್ದಾರೆ.

ಮಳೆಗಾಲ ಆರಂಭವಾಗಲಿದ್ದು, ರೈತ ಸಂಪರ್ಕ ಕೇಂದ್ರದಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟ ಮತ್ತು ರೋಗ ನಾಶಕಗಳು, ಕೃಷಿ ಸಲಕರಣೆಗಳು, ಅವಶ್ಯವಾಗಿದ್ದು, ಶೀಘ್ರ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿಲೋಗಲ್‌ನ ರೈತರಾದ ಜಿ.ರಂಗನಗೌಡ, ಕಂಚುಗಾರನಹಳ್ಳಿಯ ರುದ್ರಪ್ಪ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT