ಮಂಗಳವಾರ, ಸೆಪ್ಟೆಂಬರ್ 27, 2022
27 °C
4 ತಿಂಗಳಲ್ಲಿ ಕೈಗೆಟುಕುವ ಬೆಳೆ; ಲಾಭ ಗಳಿಸಲು ವಿನೂತನ ಮಾರ್ಗ

ಜಗಳೂರು: ಚೆಂಡು ಹೂ ಬೆಳೆಯತ್ತ ಜಗಳೂರು ರೈತರ ಚಿತ್ತ

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ತಾಲ್ಲೂಕಿನ ರೈತರು ಈಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ತೊರೆದು, ವಾಣಿಜ್ಯ ಬೆಳೆಗಳತ್ತ ಆಸಕ್ತಿ ತೋರುತ್ತಿದ್ದಾರೆ.

54,000 ಹೆಕ್ಟೇರ್ ಒಟ್ಟು ಬಿತ್ತನೆ ಪ್ರದೇಶ ಹೊಂದಿರುವ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ, ಹತ್ತಿ, ರಾಗಿ, ಜೋಳ ಬೆಳೆಯಲಾಗುತ್ತಿತ್ತು. ಬೀಜ, ಗೊಬ್ಬರ, ಒಕ್ಕಲು ಕಾರ್ಯದ ಖರ್ಚು ಹೆಚ್ಚುತ್ತಿರುವುದೇ ರೈತರು ವಾಣಿಜ್ಯ ಬೆಳೆಗಳತ್ತ ವಾಲಲು ಕಾರಣವಾಗಿದೆ.

ಅಂತೆಯೇ, 4 ತಿಂಗಳ ಅವಧಿಯ ಚೆಂಡು ಹೂ ಬೆಳೆಯನ್ನು ಈ ವರ್ಷ ತಾಲ್ಲೂಕಿನಲ್ಲಿ 4,000 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗಿದೆ. ಕೇರಳ, ರಾಜಸ್ಥಾನ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಖ್ಯ ಕಚೇರಿ ಹೊಂದಿರುವ ವಿವಿಧ ಕಂಪನಿಗಳು ತಾಲ್ಲೂಕಿನ ರೈತರೊಂದಿಗಚೆಂಡು ಹೂ ಪೂರೈಕೆಯ ಒಪ್ಪಂದ ಮಾಡಿಕೊಂಡಿವೆ.

‘ಇಷ್ಟು ವರ್ಷ ರಾಗಿ, ಮೆಕ್ಕೆಜೋಳ, ತರಕಾರಿ ಬೆಳೆದರೂ ರೋಗ ಬಾಧೆ, ಬೆಲೆ ಕುಸಿತದಿಂದ ಕೈಸುಟ್ಟುಕೊಂಡಿದ್ದೆವು. ಇದೀಗ ಚೆಂಡು ಹೂ ಖರೀದಿಸಲು ಕಂಪನಿಗಳು ನಮ್ಮ ಬಳಿ ಬಂದು ಬೀಜ, ಗೊಬ್ಬರ ಕೊಟ್ಟು, ಕಟಾವಿನ ವೇಳೆ ಹೂವನ್ನು ಹೊಲದಿಂದಲೇ ನೇರವಾಗಿ ಪಡೆಯುತ್ತಿವೆ. ಇದರಿಂದ ಹೂ ಬೆಳೆದು ಲಾಭ ಮಾಡಿಕೊಳ್ಳುವ ಅವಕಾಶ ದೊರೆತಿದೆ’ ಎಂದು ಮರೇನಹಳ್ಳಿ ಗ್ರಾಮದಲ್ಲಿ 2 ಎಕರೆಯಲ್ಲಿ ಚೆಂಡು ಹೂ ಬೆಳೆದ ಗಿಡ್ಡಯ್ಯಗಳ ಪಾಪಲಿಂಗಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನಲ್ಲಿ ಐದಾರು ಕಂಪನಿಗಳು ಬೈಬ್ಯಾಕ್ ಒಪ್ಪಂದದ ಅನ್ವಯ ಚೆಂಡು ಹೂ ಬೆಳೆಯಲು ರೈತರನ್ನು ಪ್ರೇರೇಪಿಸುತ್ತಿವೆ. ಅಂದಾಜು 4 ತಿಂಗಳ ಅವಧಿಯಲ್ಲಿ ಕೈಗೆ ಸಿಗುವ ಈ ಬೆಳೆಯ ಇಳುವರಿಯು ಪ್ರತಿ ಎಕರೆಗೆ 12 ಟನ್‌ವರೆಗೆ ಬರುತ್ತದೆ. ಬಹುತೇಕ ಕಂಪನಿಗಳು ಪ್ರತಿ ಕೆ.ಜಿ.ಗೆ ₹ 7ರ ದರಕ್ಕೆ ಹೂ ಖರೀದಿಸುತ್ತಿವೆ. ಎಕರೆಗೆ ₹ 75 ಸಾವಿರ ಆದಾಯವಿದೆ. ಖರ್ಚು ತೆಗೆದು ಕನಿಷ್ಠ ₹ 60ರಿಂದ 65,000 ಲಾಭವಾಗುತ್ತದೆ. ವಿವಿಧ ಬೆಳೆಗಳ ನಡುವೆ ಅಂತರ ಬೆಳೆಯಾಗಿ ಅಥವಾ ಇಡೀ ಹೊಲದಲ್ಲಿ ಚೆಂಡು ಹೂ ಕೃಷಿ ಕೈಗೊಳ್ಳುವುದು ಲಾಭದಾಯಕ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಮಾಹಿತಿ ನೀಡಿದರು.

‘ತಾಲ್ಲೂಕಿನ ರೈತರಿಂದ ಖರೀದಿಸುವ ಚೆಂಡು ಹೂವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಬಣ್ಣ, ಪಶು ಆಹಾರ ಹಾಗೂ ಔಷಧೀಯ ಉಪಯೋಗಕ್ಕೆ ಈ ಹೂ ಬಳಸಲಾಗುತ್ತದೆ’ ಎಂದು ಹೂ ಖರೀದಿಸುತ್ತಿರುವ ಕಂಪನಿಯೊಂದರ ಕ್ಷೇತ್ರ ವಿಸ್ತರಣಾಧಿಕಾರಿ ಹನುಮಂತ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು