ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಾಪಟ್ಟಣ: ಕಪ್ಪು ಅರಿಶಿನ ಬೆಳೆದು ನಷ್ಟ ಅನುಭವಿಸಿದ ರೈತರು

ರಾಜಸ್ಥಾನ ಮೂಲದ ಏಜೆಂಟ್‌ನಿಂದ ವಂಚನೆಗೊಳಗಾದ ರೈತರು
Published 5 ಆಗಸ್ಟ್ 2024, 15:41 IST
Last Updated 5 ಆಗಸ್ಟ್ 2024, 15:41 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಕಾರಿಗನೂರಿನಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯಿಂದ 4 ವರ್ಷಗಳ ಹಿಂದೆ ಕಪ್ಪು ಅರಿಶಿನದ ಬಿತ್ತನೆ ಬೀಜಗಳನ್ನು ಖರೀದಿಸಿದ ರೈತರು ಕಪ್ಪು ಅರಿಶಿನ ಬೆಳೆದಿದ್ದು, ಮಾರುಕಟ್ಟೆ ಇಲ್ಲದೇ ಬೆಳೆಯನ್ನು ನಾಶಪಡಿಸುತ್ತಿದ್ದಾರೆ.

ಕಪ್ಪು ಅರಿಶಿನವನ್ನು ಆಯುರ್ವೇದಿಕ್‌ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು, ಇದಕ್ಕೆ ಭಾರಿ ಬೇಡಿಕೆ ಇದೆ ಎಂದು ನಂಬಿಸಿ, ಔಷಧ ಕಂಪನಿಯ ಏಜೆಂಟ್‌ ಎಂದು ಹೇಳಿಕೊಂಡು ರೈತರಿಗೆ ಬಿತ್ತನೆ ಬೀಜ ನೀಡಿದ್ದ ರಾಜಸ್ಥಾನದ ಮೂಲದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದು ಗೊತ್ತಾಗಿ ರೈತರು ಬೆಳೆಯನ್ನು ಅಳಿಸುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

‘ಎಕೆರೆಗೆ 50 ಕ್ವಿಂಟಲ್‌ ಇಳುವರಿ ಬರುತ್ತದೆ. ನಾವು ಕೆ.ಜಿಗೆ ₹ 200 ನಂತೆ ಖರೀದಿಸುತ್ತೇವೆ ಎಂದು ವ್ಯಕ್ತಿ ನಂಬಿಸಿದ್ದ. ಇದನ್ನು ನಂಬಿದ ನಮ್ಮೂರಿನ 7 ರೈತರು ಕೆ.ಜಿ.ಗೆ ₹ 800ರಂತೆ ಖರೀದಿಸಿ ಬಿತ್ತನೆ ಮಾಡಿದ್ದೆವು. ನಾನು ಒಂದು ಎಕರೆಯಲ್ಲಿ ಬೆಳೆಯಲು ₹ 3 ಲಕ್ಷ ಮೌಲ‌್ಯದ ಬಿತ್ತನೆ ಬೀಜ ಖರೀದಿಸಿದ್ದೆ. ಆದರೆ ಬೆಳೆ ಕಟಾವು ಮಾಡಿ ಸಂಸ್ಕರಿಸಿ ಮಾರಾಟ ಮಾಡಲು ಯತ್ನಿಸಿ ಆ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ’ ಎಂದು ಪ್ರಗತಿಪರ ರೈತ ಟಿ.ವಿ. ರುದ್ರೇಶ್‌ ಅಳಲು ತೋಡಿಕೊಂಡರು.

‌‘ನಾವು ಮೋಸ ಹೋಗಿರವುದು ತಿಳಿಯಿತು. ಆದರೂ ಇತರ ಕಂಪನಿಗೆ ಮಾರಬಹುದು ಎಂದು ಬೆಳೆದ ಕಪ್ಪು ಅರಿಶಿನವನ್ನು ಎರಡು ವರ್ಷಗಳಲ್ಲಿ ಮತ್ತೆ ಬೆಳೆದೆವು. ಆದರೂ ಫಸಲನ್ನು ಖರೀದಿಸಲು ಯಾರೂ ಬರಲಿಲ್ಲ. ಫಸಲನ್ನು ನಂಬಿಕೊಂಡು ₹ 10 ಲಕ್ಷ ನಷ್ಟ ಮಾಡಿಕೊಂಡಿದ್ದೇನೆ. ವಿಧಿಯಿಲ್ಲದೇ ಬೆಳೆಯನ್ನು ಅಳಿಸುತ್ತಿದ್ದೇನೆ’ ಎಂದು ಅವರು ‍‘ಪ್ರಜಾವಾಣಿ’ ಎದುರು ನೊಂದು ನುಡಿದರು.

‘ಈ ರೀತಿಯ ಹೊಸ ಹೊಸ ಫಸಲನ್ನು ಬೆಳೆದು ಲಾಭ ಗಳಿಸಬಹುದು ಎಂದು ರೈತರನ್ನು ನಂಬಿಸುವ ಮೋಸಗಾರ ಏಜೆಂಟರಿಂದ ರೈತರು ಜಾಗೃತರಾಗಿರಬೇಕು. ಅವರ ಮಾತನ್ನು ಒಂದೇ ಬಾರಿಗೆ ನಂಬದೇ, ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳೆಯುವ ಕ್ರಮ, ಮಾರಾಟದ ಬಗ್ಗೆ ವಿವರ ಪಡೆಯಬೇಕು. ನಮ್ಮಂತೆ ಯಾರೂ ಮೋಸ ಹೋಗಬಾರದು’ ಎಂದು ಕಪ್ಪು ಅರಿಶಿನ ಬೆಳೆದು ಮೋಸ ಹೋಗಿರುವ ಕಾರಿಗನೂರಿನ ರೈತರಾದ ಅರುಣಕುಮಾರ್‌, ಅಲ್ಲಮಪ್ರಭು, ವೀರೇಶ್‌ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT