ಬುಧವಾರ, ಮೇ 18, 2022
27 °C
ಸಾರ್ವಜನಿಕರ ಪರದಾಟ* ಸಾಲುಗಟ್ಟಿ ನಿಂತ ವಾಹನಗಳು

ಎಚ್.ಕಲಪನಹಳ್ಳಿ ಬಳಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಸದಸ್ಯರು ಎಚ್.ಕಲಪನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನಗಳನ್ನು ತಡೆದು ಶನಿವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ, ಕೋಡಿಹಳ್ಳಿ ಚಂದ್ರಶೇಖರ್), ಅಖಿಲ ಭಾರತ ರೈತ ಹೋರಾಟ ಸಂಘರ್ಷ ಸಮಿತಿ, ಎಐಕೆಎಸ್, ಎಐಡಿಎಸ್‍ಒ, ಎಐಕೆಎಂಎಸ್, ಆಮ್ ಆದ್ಮಿ ಪಾರ್ಟಿಗಳು ಬೆಂಬಲ ಸೂಚಿಸಿದವು.

ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಈ ಹೆದ್ದಾರಿ ತಡೆಯಲ್ಲಿ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.‌ ಹೆದ್ದಾರಿ ತಡೆಯಿಂದಾಗಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡಬೇಕಾಯಿತು. ಕೆಲವರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಿಂದ ಸ್ವಲ್ಪ ದೂರ ನಡೆದು ಬಂದು ಖಾಸಗಿ ವಾಹನಗಳಲ್ಲಿ ದಾವಣಗೆರೆಗೆ ತಲುಪಿದರು. ಬಸ್ನಲ್ಲಿದ್ದ ಪ್ರಯಾಣಿಕರು, ವಾಹನ ಚಾಲಕರು ಹಾಗೂ ಕಂಡಕ್ಟರ್‌ಗಳು ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದರು.

ಸರ್ವೀಸ್ ರಸ್ತೆ ಬಂದ್: ಹೆದ್ದಾರಿ ಬಂದ್ ವೇಳೆ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಶುರು ಮಾಡಿದವು. ಇದರಿಂದಾಗಿ ಪ್ರತಿಭಟನಕಾರರು ಸರ್ವೀಸ್ ರಸ್ತೆಯನ್ನೂ ಬಂದ್ ಮಾಡಿದರು.

ರೈತ ಮುಖಂಡ ಬಲ್ಲೂರು ರವಿಕುಮಾರ್ ‘ಕೊರೊನಾ ಸಮಯದಲ್ಲಿ ಸುಗ್ರೀವಾಜ್ಞೆ ತಂದಿದ್ದೀರಿ, ಬೇರೆ ಸಮಯದಲ್ಲಿ ಮಾಡಿದ್ದರೆ ಜನ ದಂಗೆ ಹೇಳುತ್ತಿದ್ದರು’ ಎಂದು ಎಚ್ಚರಿಸಿದರು.

ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ‘ಕೇಂದ್ರ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು. ರೈತರು ಬೆಳೆದ ಬೆಳೆಗಳಿಗೆ ಅವರೇ ಬೆಲೆ ನಿಗದಿ ಮಾಡುವ ಕಾಯ್ದೆ ಜಾರಿಗೆ ತರಬೇಕು. ಈ ಕಾಯ್ದೆಯನ್ನು ಉಲ್ಲಂಘಿಸಿದರೆ ಆರು ತಿಂಗಳು ಜೈಲು, ದಂಡ ಮತ್ತು ಲೈಸನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಎಐಎಂಎಸ್‌ಎಸ್ ರಾಜ್ಯ ಅಧ್ಯಕ್ಷೆ ಅಪರ್ಣಾ ಬಿ.ಆರ್. ಮಾತನಾಡಿ, ‘ಬಿಜೆಪಿ ಸರ್ಕಾರ ಹೇಳುವಂತೆ ಬರೀ ಪಂಜಾಬ್ ಹರಿಯಾಣ ರೈತರು ಮಾತ್ರವಲ್ಲ. ಇಡೀ ದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಅವರ ಸಮಸ್ಯೆ ಏನು ಎಂದು ಕೇಳುತ್ತಿಲ್ಲ ರೈತರ ಕೈಯಿಂದ ಭೂಮಿಯನ್ನು ಕಿತ್ತುಕೊಂಡು ಅಂಬಾನಿ, ಅದಾನಿ ಕೈಗೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

 ಹೆದ್ದಾರಿ ಚಳವಳಿಯಲ್ಲಿ ರೈತ ಮುಖಂಡರಾದ ನಾಗೇಶ್ವರರಾವ್, ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಶೇಖರ ನಾಯ್ಕ, ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತ, ನೀರ್ಥಡಿ ತಿಪ್ಪೇಶ್, ಹುಚ್ಚವ್ವನಹಳ್ಳಿ ಪ್ರಕಾಶ್, ಹುಚ್ಚವ್ವನಹಳ್ಳಿ ಗಣೇಶ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಚ್.ಜಿ. ಉಮೇಶ್, ಡಾ. ಸುನೀತ್ ಕುಮಾರ್, ಅಪರ್ಣಾ ಬಿ.ಆರ್. ಶಶಿಧರ್, ಮಂಜುನಾಥ ಕೈದಾಳೆ, ಅಣಬೇರು ತಿಪ್ಪೇಸ್ವಾಮಿ, ಸತೀಶ್ ಅರವಿಂದ್, ಭಾರತಿ, ಪರಶುರಾಮ್, ಸೌಮ್ಯ, ನಾಗಜ್ಯೋತಿ, ಪೂಜಾ, ಲೋಕೇಶ್ ನೀರ್ಥಡಿ, ಬೀರಲಿಂಗಪ್ಪ ನೀರ್ಥಡಿ, ಜನಶಕ್ತಿ ಸತೀಶ್ ಅರವಿಂದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು