ಭಾನುವಾರ, ಜುಲೈ 3, 2022
24 °C
ರೈತ ಸಂಘ ಹಾಗೂ ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ ವಿಷಾದ

‘ಇನ್ನೂ ಆಕ್ರೋಶಗೊಳ್ಳದ ರೈತರು‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದರೂ ರೈತರು ಇನ್ನೂ ಆಕ್ರೋಶಗೊಂಡಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ) ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ವಿಷಾದ ವ್ಯಕ್ತಪಡಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ನಡೆದ ಸೇನೆಯ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂರು ತಿದ್ದುಪಡಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ನಮ್ಮ ರೈತರು ಪಾಲ್ಗೊಳ್ಳಲು ಸಿದ್ಧರಾಗಬೇಕು. ದೆಹಲಿಯ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಕ್ಕೆ ತಿರುಗೇಟು ನೀಡಲು ನಮ್ಮ ರೈತರು ದೆಹಲಿಯತ್ತ ಸಾಗಬೇಕು ಎಂದು ತಿಳಿಸಿದರು.

ಬಿಜೆಪಿ ಬೆಂಬಲಿಸುವ ಪ್ರತಿಯೊಬ್ಬರೂ ಈ ಕಾಯ್ದೆಗಳು ಉತ್ತಮ ಎಂದು ಫೇಸ್‍ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಅದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲೇ ಉತ್ತರಿಸಲು ರೈತರಿಗೆ ತಂತ್ರಜ್ಞಾನದ ಅರಿವಿಲ್ಲ. ಹಾಗಾಗಿ ಅರಿವು ಇರುವ ನಾವೆಲ್ಲ ಸಕ್ರಿಯರಾಗಬೇಕು. ಅದಕ್ಕಾಗಿ ಯುವಕರನ್ನು ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ದೆಹಲಿಯಲ್ಲಿನ ರೈತ ಶಿಬಿರಗಳ ಸುತ್ತ ಮೂರು ಅಡಿಗೂ ಹೆಚ್ಚು ಎತ್ತರದ ಕಾಂಕ್ರೀಟ್ ಬ್ಲಾಕ್ ಹಾಕಲಾಗಿದೆ. ಅಷ್ಟೇ ಅಲ್ಲದೆ ಸರಳುಗಳನ್ನು ನೆಟ್ಟು ಅವುಗಳ ಹಿಂದೆ ಹತ್ತಾರು ಬ್ಯಾರಿಕೇಡ್‍ಗಳನ್ನು ಜೋಡಿಸಲಾಗಿದೆ. ಆ ನಂತರ ಅವುಗಳ ಹೊರಗೆ ಟ್ರಕ್-ಟಿಪ್ಪರ್‌ಗಳನ್ನು ನಿಲ್ಲಿಸಲಾಗಿದೆ. ಇದಕ್ಕೆ ಪ್ರತಿಯಾಗಿ ರೈತರ ಹೋರಾಟವನ್ನು ಜನಾಂದೋಲವನ್ನಾಗಿ ರೂಪಿಸಬೇಕು. ರಾಜ್ಯದ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಹೋರಾಟ ರೂಪಿಸಲಾಗುವುದು. ಅದು ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಮೂರು ಕಾಯ್ದೆಗಳಿಂದ ಆಗುವ ಅನಾಹುತಗಳನ್ನು ತಿಳಿಸುವ ಉದ್ದೇಶದಿಂದ ಫೆ. 18ರಂದು ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಯಾಗಾರ ಆಯೋಜನೆ ಮಾಡಲಾಗಿದೆ. ಇದರಲ್ಲಿ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ಭಾಗವಹಿಸಬೇಕು ಎಂದು ಹೇಳಿದರು.

ವಿದ್ಯುತ್‍ನ್ನು ಖಾಸಗೀಕರಣ ಮಾಡುವುದರಿಂದ ರೈತರು ಹಣ ಕೊಟ್ಟು ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ. ಇದು ಕೃಷಿಕರನ್ನು ಸಂಕಷ್ಟಕ್ಕೆ ದೂಡುತ್ತದೆ. ಬಿಜೆಪಿ ನಾಯಕರು ಇದನ್ನು ಅಲ್ಲಗಳೆಯುತ್ತಾರೆ. ಹಾಗಾಗಿ ಬಿಜೆಪಿ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಕಾಯ್ದೆ ಬೆಂಬಲಿಗರು ಅಳವಡಿಸಿಕೊಳ್ಳಲಿ. ಸರಿ ಇದ್ದರೆ ಆಮೇಲೆ ನಾವು ಅಳವಡಿಸಿಕೊಳ್ಳುತ್ತೇವೆ. ಖರೀದಿ ಮಾಡುವುದು ಇದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹೇಳಿ ಕಾಯ್ದೆಯನ್ನು ತೆಗೆಯುವಂತೆ ಆಗ್ರಹಿಸಲಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ರೈತ ಮುಖಂಡರಾದ ಚಿರಂಜೀವಿ, ಹೊನ್ನಾಳಿ ಸತೀಶ್, ಗುಮ್ಮನೂರು ಬಸವರಾಜ್, ಶಿವಕುಮಾರ್, ಮಲ್ಲಿಗೆರೆ ಪ್ರಕಾಶ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು