ಭಾನುವಾರ, ನವೆಂಬರ್ 28, 2021
19 °C
ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ

ಪಿಂಚಣಿ ನೀಡದಿದ್ದರೆ ಉಪವಾಸ ಸತ್ಯಾಗ್ರಹ: ಹನುಮಂತಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಚಳಿಗಾಲದ ಅಧಿವೇಶನದ ಒಳಗಾಗಿ ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡದಿದ್ದರೆ ರಾಜ್ಯದಾದ್ಯಂತ ಶಾಲಾ-ಕಾಲೇಜು ಬಂದ್ ಮಾಡಿ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ  ಜಿ.ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಸಿದರು.

ನಗರದ ಗುರುಭವನದಲ್ಲಿ ಸೋಮವಾರ ನಡೆದ ಪಿಂಚಣಿ ವಂಚಿತ ನೌಕರರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

2006 ಏಪ್ರಿಲ್ 1ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಮತ್ತು ನಂತರ ನೇಮಕವಾಗಿ
ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ಇಲ್ಲ. ಈ ಬಗ್ಗೆ ಹಲವು ಹೋರಾಟ ಮಾಡಿದ್ದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ ಎಂದರು.

2006 ಏಪ್ರಿಲ್ 1ಕ್ಕಿಂತ ಮೊದಲು ಪಿಂಚಣಿ ವಿಚಾರದಲ್ಲಿ ಅನುದಾನಿತ ಮತ್ತು ಸರ್ಕಾರಿ ನೌಕರರ ಮಧ್ಯೆ ಯಾವುದೇ ತಾರತಮ್ಯ ಇರಲಿಲ್ಲ. ಬೇರೆ ರಾಜ್ಯಗಳು ಈಗಲೂ ವೇತನದ ಜೊತೆಗೆ ಪಿಂಚಣಿ ನೀಡುತ್ತಿವೆ. ಅಲ್ಲದೆ ಪಿಂಚಣಿ ನೀಡಲು ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳು ಆದೇಶಿಸಿವೆ. 6ನೇ ವೇತನ ಆಯೋಗವು ಸಹ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೂಡ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ನೌಕರರು ಕೊನೆಯ ತಿಂಗಳ ವೇತನ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿ ಆಗಿದ್ದಾರೆ. ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ. ಗರಿಷ್ಠ ವಾರ್ಷಿಕ ₹ 150 ಕೋಟಿಯಲ್ಲಿ ಪಿಂಚಣಿ ಬೇಡಿಕೆ ಈಡರುತ್ತದೆ ಎಂದು ತಿಳಿಸಿದರು.

ಅನುದಾನಿತ ಮತ್ತು ಅನುದಾನ ರಹಿತ ನೌಕರರ ಪರ ಹೋರಾಟಗಾರ ಜಾಲಮಂಗಲ ನಾಗರಾಜ ಮಾತನಾಡಿ, ಪಿಂಚಣಿ ಪಡೆಯುವುದು ನಮ್ಮ ಮೂಲಭೂತ ಹಕ್ಕು. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಅಥವಾ ಕಾನೂನು ತೊಡಕು ಆಗುವುದಿಲ್ಲ. ಪಿಂಚಣಿ ಇಲ್ಲದೆ ನೌಕರರು ನಿವೃತ್ತಿ ನಂತರ ಕಷ್ಟಪಡುವಂತಾಗುತ್ತದೆ. ನಿಶ್ಚಿತ ಮತ್ತು ನೂತನ ಪಿಂಚಣಿ ಜಾರಿಗಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ಮಾತ್ರ ಸರ್ಕಾರಕ್ಕೆ ನಾವು ನೆನಪಾಗುತ್ತೇವೆ. ಆಗ ಮತಕೇಳಲು ನಮ್ಮ ಬಳಿ ಬರಬೇಕು. ನಮ್ಮ ನ್ಯಾಯುತ ಬೇಡಿಕೆ ಈಡೇರಿಸಿದಿದ್ದರೆ ಆಗ ನಮ್ಮ ಒಗ್ಗಟ್ಟು ಏನೆಂಬುದನ್ನು ನಾವು ತೋರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬೋಧಕೇತರ ಸಂಘದ ರಾಜ್ಯಾಧ್ಯಕ್ಷ ಅರುಣಕುಮಾರ್, ರಾಜ್ಯ ಕಾರ್ಯದರ್ಶಿ ಮುತ್ತುರಾಜ್ ಮತ್ತಿಕೊಪ್ಪ, ರಾಜ್ಯ ಕೋಶಾಧ್ಯಕ್ಷ ಬಿ.ಜಿ. ಕೊರಗ, ಮಂಜುನಾಥ್ ಭತ್ತದ, ಕೆ. ಈಶಾನಾಯ್ಕ್, ಜಿಲ್ಲಾ ಅಧ್ಯಕ್ಷ ಮಂಜನಾಯ್ಕ್, ಎಸ್.ಎಂ. ಮಡಿವಾಳರ್, ಬಿ.ಐ. ಹುಗ್ಗಿ, ಎಸ್.ಎಚ್. ಮಲ್ಲಮ್ಮನವರ್, ಕೆ.ಸಿ. ಶ್ರೀನಿವಾಸಮೂರ್ತಿ, ಆರ್. ನಾಗೇಂದ್ರಪ್ಪ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು