ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಸಮುದ್ರ ರಾಜ‘ ಬಂಗುಡೆ: ಪೋಷಕಾಂಶಗಳ ಖನಿಜ

Last Updated 8 ಸೆಪ್ಟೆಂಬರ್ 2022, 5:32 IST
ಅಕ್ಷರ ಗಾತ್ರ

ಹರಿಹರ: ತಿಂಗಳುಗಳ ಬಿಡುವಿನ ನಂತರ ಮತ್ತೆ ಸಮುದ್ರದ ಬಂಗುಡೆ ಮೀನಿನ ಸೀಜನ್ ಆರಂಭವಾಗಿದೆ. ದರವೂ ಕಡಿಮೆ ಇದೆ. ಪ್ರಿಯರಿಗೆ ಮೀನಿನ ಅಡುಗೆ ಸವಿಯಲು ಇದು ಸುಸಮಯ.

ಈ ಸೀಜನ್‌ನಲ್ಲಿ 1 ಕೆ.ಜಿ. ಬಂಗುಡೆ ಮೀನಿಗೆ ₹ 200ರವರೆಗೆ ದರ ಇರುತ್ತಿತ್ತು. ಆದರೆ ಈಗ ಮಧ್ಯಮ ಗಾತ್ರದ ಮೀನಿನ ದರ ₹ 120ಕ್ಕೆ ಇಳಿದಿದ್ದು ಬಡವರು ಕೂಡ ಮೀನು ಅಡುಗೆ ಮಾಡಲು ಅನುಕೂಲವಾಗಿದೆ.

ಹಣ್ಣಿನ ರಾಜ ಮಾವು ಬಂದಾಗ ಬೇರೆ ಹಣ್ಣುಗಳು ಬದಿಗೆ ಸರಿಯುವಂತೆ, ಸಮುದ್ರದ ರಾಜ ಎನ್ನಿಸಿಕೊಂಡಿರುವ ಬಂಗುಡೆ ಮೀನು ಮಾರುಕಟ್ಟೆಗೆ ಲಗ್ಗೆ ಇಟ್ಟಿತೆಂದರೆ, ‘ಬಂಗುಡೆ ಬಂತು ದಾರಿ ಬಿಡಿ’ ಎಂಬ ಮಾತು ಚಾಲ್ತಿಗೆ ಬರುತ್ತದೆ.

ಶ್ರೀಮಂತ, ಬಡವರೆನ್ನುವ ಬೇಧವಿಲ್ಲದೇ ಎಲ್ಲ ವರ್ಗದ ಮೀನು ಪ್ರಿಯರು ಈ ಸೀಜನ್‌ನಲ್ಲಿ ಬಂಗುಡೆ ಮೀನನ್ನು ಹೇರಳವಾಗಿ ಬಳಸುತ್ತಾರೆ. ₹ 650 ಕೆ.ಜಿ.ಯ ಮಟನ್, ₹ 200 ಕೆ.ಜಿ.ಯ ಚಿಕನ್‌ಗಿಂತಲೂ ಕಡಿಮೆ ದರ ಇರುವುದು ಇದರ ವಿಶೇಷತೆ. ಈ ಕಾರಣದಿಂದ ಇದು ಜನಪ್ರಿಯ ಸಮುದ್ರ ಆಹಾರವಾಗಿದೆ.

ಬಂಗುಡೆ ಮೀನುಗಳನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಹರಿಹರ-ದಾವಣಗೆರೆ ಅವಳಿ ನಗರಗಳು, ಗ್ರಾಮೀಣ ಭಾಗದ ಓಣಿ, ಓಣಿಗಳಲ್ಲಿ ಸುತ್ತಾಡುತ್ತ ಚಿಕ್ಕಪುಟ್ಟ ವ್ಯಾಪಾರಿಗಳು ಮಾರಾಟ ಮಾಡುವುದೂ ಕಂಡುಬರುತ್ತಿದೆ. ದರ ಕಡಿಮೆ ಇರುವುದರಿಂದ 50ರಿಂದ 60 ಕೆ.ಜಿ.ಯಷ್ಟು ಮೀನು ಎರಡ್ಮೂರು ಗಂಟೆಗಳಲ್ಲಿ ಖಾಲಿಯಾಗುತ್ತಿದೆ.

ದಾವಣಗೆರೆಯ ವ್ಯಾಪಾರಿಗಳು ಈ ಸೀಜನ್‌ನಲ್ಲಿ ಪ್ರತಿ ದಿನ ಅಂದಾಜು 4 ಟನ್ ಬಂಗುಡೆ ಮೀನು ತರಿಸುತ್ತಿದ್ದಾರೆ. ಅವರಿಂದ ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ಸೇರಿದಂತೆ ವಿವಿಧ ಕಡೆಯ ವ್ಯಾಪಾರಿಗಳು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.

ಸಮುದ್ರದ ಎಲ್ಲ ಮೀನುಗಳಲ್ಲಿ ಸಾಮಾನ್ಯವಾಗಿ ಇರುವಂತೆ ಬಂಗುಡೆ ಮೀನಿನಲ್ಲೂ ಒಮೆಗಾ-3 ತೈಲದ ಅಂಶವಿದೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿ ಪ್ರದೇಶದ ಜನರಲ್ಲಿ ಹೃದಯ ಕಾಯಿಲೆ ಕಡಿಮೆ. ಜೊತೆಗೆ ಚುರುಕು ಬುದ್ಧಿ, ಆಕರ್ಷಕ ಮೈ ಚರ್ಮ, ತೇಜಸ್ಸು, ಓಜಸ್ಸಿನೊಂದಿಗೆ ಇರುವುದಕ್ಕೆ ಸಮುದ್ರ ಆಹಾರ ಸೇವನೆಯೇ ಕಾರಣ ಎನ್ನುತ್ತಾರೆ ತಜ್ಞರು.

ಮೀನಿನ ಸಾರು ಹೆಚ್ಚು ಉಪಯುಕ್ತ

ಬಂಗುಡೆ ಮೀನನ್ನು ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುವುದಕ್ಕಿಂತ, ಸಾರು ಮಾಡಿದರೆ ಅಧಿಕ ಪ್ರಮಾಣದ ಪೋಷಕಾಂಶಗಳು ಲಭ್ಯವಾಗುತ್ತವೆ. ಒಮೆಗಾ-3 ತೈಲ ಹಾಗೂ ಇತರ ವಿಟಮಿನ್‌ಗಳಿಂದಾಗಿ ಅಗತ್ಯ ಪೋಷಕಾಂಶಗಳ ಖನಿಜವೆಂದೇ ಬಂಗುಡೆ ಮೀನು ಬಿಂಬಿತವಾಗಿದೆ. ಎರಡೂವರೆ ತಿಂಗಳ ನಿಷೇಧದ ನಂತರ ಸಮುದ್ರದ ಮೀನುಗಾರಿಕೆ ಆರಂಭವಾಗಿದ್ದು, ಈಗ ಮೀನು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿವೆ.

ಈ ಮೀನಿನಲ್ಲಿರುವ ವಿಟಮಿನ್, ಪ್ರೊಟೀನ್, ನ್ಯೂಟ್ರಿಯಂಟ್ಸ್‌ಗಳು ಮನುಷ್ಯನ ಹೃದಯ, ಮೆದುಳು, ಮೂಳೆ, ಶ್ವಾಸಕೋಶ, ಕರುಳು, ಚರ್ಮ, ನೇತ್ರದ ಆರೋಗ್ಯಕ್ಕೆ ಪುಷ್ಟಿ ನೀಡುತ್ತವೆ. ಇದಲ್ಲಿರುವ ಅಯೋಡಿನ್, ಸೆಲೆನಿಯಮ್, ಜಿಂಕ್, ಪೊಟಾಶಿಯಮ್‌ನಿಂದಾಗಿ ಅಸ್ತಮಾ, ಥೈರಾಯ್ಡ್ ಪೀಡಿತರಿಗೆ ದಿವ್ಯ ಔಷಧಿಯಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ.ಅಣ್ಣಪ್ಪ ಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT