ದಾವಣಗೆರೆ: ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್ಬಿಐ) ನೆಹರೂ ರಸ್ತೆಯ ಶಾಖೆಯ ₹15.30 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಬ್ಯಾಂಕ್ ದರೋಡೆಗೆ ಸಂಬಂಧಿಸಿದ ‘ಮನಿ ಹೀಸ್ಟ್’ ವೆಬ್ ಸರಣಿಯಿಂದ ಪ್ರೇರಣೆ ಪಡೆದಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಒಟಿಟಿ ಹಾಗೂ ಯೂಟ್ಯೂಬ್ನಲ್ಲಿ ಬ್ಯಾಂಕ್ ಕಳವಿಗೆ ಸಂಬಂಧಿಸಿದ ವಿಡಿಯೊಗಳನ್ನು ಗಮನಿಸಿ 6 ಜನ ಆರೋಪಿಗಳು ವೃತ್ತಿಪರತೆ ಮೈಗೂಡಿಸಿಕೊಂಡ ಬಗೆಗೆ ಪೊಲೀಸರು ಅಚ್ಚರಿಗೊಂಡಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಬ್ಯಾಂಕ್ನಿಂದ ಕಳವು ಮಾಡಿದ್ದ 17 ಕೆ.ಜಿ. 750 ಗ್ರಾಂ ಚಿನ್ನಾಭರಣದಲ್ಲಿ 17 ಕೆ.ಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಐವರನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆಯ ನಂತರ ದೊರೆತ ಸುಳಿವಿನ ಮೇರೆಗೆ ತಮಿಳುನಾಡಿನ ಮಧುರೆಗೆ ತೆರಳಿ ಅಲ್ಲಿನ ಬಸ್ ನಿಲ್ದಾಣದಲ್ಲಿ ಇನ್ನೊಬ್ಬ ಆರೋಪಿ ಪರಮಾನಂದ (30) ಎಂಬುವನನ್ನು ಸೆರೆ ಹಿಡಿದಿದ್ದಾರೆ.

‘ಪ್ರಮುಖ ಆರೋಪಿ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯ ವಿಜಯ್ಕುಮಾರ್ (30) ಮಹಾತ್ವಾಕಾಂಕ್ಷೆ ಹೊಂದಿದ್ದ ವ್ಯಾಪಾರಿ. ಬೇಕರಿ ವ್ಯವಹಾರದ ವಿಸ್ತರಣೆಗೆ ಸಾಲ ಸೌಲಭ್ಯ ಸಿಗದ ಬಳಿಕ ಬ್ಯಾಂಕ್ ಕಳವಿಗೆ ಆಲೋಚಿಸಿದ್ದ. ‘ಮನಿ ಹೀಸ್ಟ್’ ಸೇರಿದಂತೆ ಹಲವು ವೆಬ್ ಸರಣಿ, ಸಿನಿಮಾ ಹಾಗೂ ವಿಡಿಯೊಗಳನ್ನು 6 ತಿಂಗಳು ನೋಡಿ ಬ್ಯಾಂಕ್ ಕಳವಿಗೆ ಯೋಜನೆ ರೂಪಿಸಿದ್ದ’ ಎಂದು ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

‘ದಿಢೀರ್ ಶ್ರೀಮಂತನಾಗುವ ಬಯಕೆ ವಿಜಯ್ಕುಮಾರ್ಗೆ ಇತ್ತು. ಇದಕ್ಕೆ ನ್ಯಾಮತಿಯ ಎಸ್ಬಿಐ ಶಾಖೆಯ ಕಳವಿನ ಆಲೋಚನೆಯನ್ನು ಸಹಚರರೊಂದಿಗೆ ಹಂಚಿಕೊಂಡು ಸಂಚು ರೂಪಿಸಿದ್ದ. ಅಗತ್ಯ ಸಾಮಗ್ರಿಗಳನ್ನು ಶಿವಮೊಗ್ಗ ಹಾಗೂ ನ್ಯಾಮತಿಯಲ್ಲಿ ಖರೀದಿಸಿದ್ದ. ಬ್ಯಾಂಕ್ ಬಳಿಗೆ ತೆರಳಿ ಸಿ.ಸಿ. ಟಿವಿ ಎಲ್ಲಿದೆ? ಕಟ್ಟಡಕ್ಕೆ ನುಗ್ಗಲು ಯಾವ ಸ್ಥಳ ಸುಲಭ? ಚಿನ್ನಾಭರಣವನ್ನು ಎಲ್ಲಿ ಭದ್ರಪಡಿಸಲಾಗಿದೆ? ಎಂಬ ವಿವರವನ್ನು ಅರಿತುಕೊಂಡಿದ್ದ’ ಎಂದು ಹೇಳಿದ್ದಾರೆ.

‘ಕೃತ್ಯ ಎಸಗುವುದಕ್ಕೂ 15 ದಿನಗಳ ಮುನ್ನ ವಿಜಯ್ಕುಮಾರ್ ಹಾಗೂ ಅಭಿಷೇಕ್ ಬ್ಯಾಂಕ್ ಕಳವಿಗೆ ಸಂಬಂಧಿಸಿದಂತೆ ಅಣಕು ಪ್ರದರ್ಶನ ನಡೆಸಿದ್ದರು. ಸಣ್ಣ ವಿಚಾರಕ್ಕೂ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ ವೇಳೆ ಯಾವ ಸಮಯದಲ್ಲಿ ಪೊಲೀಸರು ಬ್ಯಾಂಕ್ ಬಳಿಗೆ ಗಸ್ತಿಗೆ ಬರುತ್ತಾರೆ ಎಂಬುದನ್ನೂ ಗಮನಿಸಿದ್ದರು. ಯಾರೊಬ್ಬರೂ ಮೊಬೈಲ್ ಫೋನ್ ಬಳಸಿರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಕೃತ್ಯ ಎಸಗಿದ ಬಳಿಕ ಸಣ್ಣ ಸಾಕ್ಷ್ಯವೂ ಸಿಗದಂತೆ ಎಚ್ಚರವಹಿಸಿದ್ದರು. ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್ಗ್ಲೌಸ್ಗಳನ್ನು ನಾಶಪಡಿಸಿದ್ದರು. ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲಿಂಡರ್ ಸೇರಿ ಇತರ ವಸ್ತುಗಳನ್ನು ಕೆರೆಗೆ ಎಸೆದಿದ್ದರು. ಬ್ಯಾಂಕಿನಿಂದ ತಂದಿದ್ದ ಹಾರ್ಡ್ಡಿಸ್ಕ್, ಡಿವಿಆರ್ಗಳನ್ನು ಕಲ್ಲಿನಿಂದ ಜಜ್ಜಿ ಹಾಳು ಮಾಡಿದ್ದರು’ ಎಂದಿದ್ದಾರೆ.

ಸಿಕ್ಕಿಬಿದ್ದ ದರೋಡೆ ತಂಡ

‘ಕೃತ್ಯ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಒತ್ತು ನೀಡಿದ್ದರು. ಬ್ಯಾಂಕ್ ಸುತ್ತಲಿನ 8 ಕಿ.ಮೀ ವ್ಯಾಪ್ತಿಯ ಇಂಚಿಂಚು ಸ್ಥಳವನ್ನೂ ಶೋಧಿಸಿದ್ದರು. ಸಣ್ಣ ಸುಳಿವು ಸಿಗದಿರುವುದನ್ನು ನೋಡಿ ವೃತ್ತಿಪರ ದರೋಡೆಕೋರರು ಈ ಕೃತ್ಯ ಎಸಗಿರಬಹುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಬ್ಯಾಂಕಿನಲ್ಲಿ ನಡೆದ ಇದೇ ಮಾದರಿಯ ಕೃತ್ಯದ ಜಾಡು ಹಿಡಿದ ತಂಡ ಉತ್ತರಪ್ರದೇಶದ ಬದಾಯ್ ಜಿಲ್ಲೆಯ ಕಕ್ರಾಳ್ ಪಟ್ಟಣಕ್ಕೆ ತೆರಳಿತ್ತು’ ಎಂದು ರವಿಕಾಂತೇಗೌಡ ವಿವರಿಸಿದ್ದಾರೆ.

‘ಫೆಬ್ರುವರಿಯಲ್ಲಿ ಕೇರಳ, ಹಿಮಾಚಲ ಪ್ರದೇಶ, ಹರಿಯಾಣ, ಆಂಧ್ರಪ್ರದೇಶ ತಮಿಳುನಾಡಿಗೂ ತನಿಖಾ ತಂಡ ಭೇಟಿ ನೀಡಿತ್ತು. ಮಾರ್ಚ್ನಲ್ಲಿ ಮತ್ತೊಮ್ಮೆ ಉತ್ತರಪ್ರದೇಶದ ಕಕ್ರಾಳ್ಗೆ ತೆರಳಿತ್ತು. ಈ ಗ್ಯಾಂಗ್ ಕರ್ನಾಟಕಕ್ಕೆ ಬಂದಿರುವ ಸುಳಿವು ಲಭ್ಯವಾಗುತ್ತಿದ್ದಂತೆ ಮಾರ್ಚ್ 16ರಂದು ಜಿಲ್ಲೆಯ ಎಲ್ಲೆಡೆ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ ನಿಗಾ ಇಡಲಾಗಿತ್ತು. ಆಗ ಉತ್ತರಪ್ರದೇಶದ ಗ್ಯಾಂಗ್ ಸಿಕ್ಕಿಬಿದ್ದಿತ್ತು’ ಎಂದಿದ್ದಾರೆ.

‘ಬಂಧಿತರಾದ ಗುಡ್ಡು ಕಾಲಿಯಾ, ಅಸ್ಲಾಂ, ಹಜರತ್ ಅಲಿ ಹಾಗೂ ಕಮರುದ್ದೀನ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ನ್ಯಾಮತಿ ಬ್ಯಾಂಕ್ ಕಳವಿನಲ್ಲಿ ಇವರ ಪಾತ್ರವಿಲ್ಲ ಎಂಬ ಸಂಗತಿ ಗೊತ್ತಾಗಿತ್ತು. ಆ ಬಳಿಕ ಸ್ಥಳೀಯರ ಮೇಲೆ ಅನುಮಾನ ಮೂಡಿತು. ಕಳವು ಕೃತ್ಯದ ವೃತ್ತಿಪರತೆ ತನಿಖಾ ತಂಡದ ಗಮನವನ್ನು ಹೊರರಾಜ್ಯದತ್ತ ಸೆಳೆದಿದ್ದು ನಿಜ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಬಾವಿಯಲ್ಲಿದ್ದ ಚಿನ್ನ ವಶಕ್ಕೆ

‘ಕೃತ್ಯ ಎಸಗಿದ ಬಳಿಕ ಚಿನ್ನಾಭರಣವನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದರು. ಕೆಲ ದಿನಗಳ ಬಳಿಕ ವಿಜಯ್ಕುಮಾರ್ ಈ ಚಿನ್ನವನ್ನು ತಮಿಳುನಾಡಿನ ಮಧುರೆ ಜಿಲ್ಲೆಯ ಸ್ವಗ್ರಾಮಕ್ಕೆ ಸಾಗಿಸಿದ್ದ. ಚಿನ್ನಾಭರಣಗಳನ್ನು ಲಾಕರ್ನಲ್ಲಿ ಭದ್ರಪಡಿಸಿ ಮನೆ ಸಮೀಪದ 30 ಅಡಿ ಆಳದ ಬಾವಿಗೆ ಎಸೆದಿದ್ದ’ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

‘ಚಿನ್ನದ ಒಂದಷ್ಟು ಭಾಗವನ್ನು ಮಾತ್ರ ಬ್ಯಾಂಕ್ ಮತ್ತು ಚಿನ್ನಾಭರಣ ಮಳಿಗೆಗಳಲ್ಲಿ ಅಡಿವಿಟ್ಟಿದ್ದ. ಇದರಿಂದ ಬಂದ ಹಣದಲ್ಲಿ ಅಭಿಷೇಕ್, ಮಂಜುನಾಥ್ ಹಾಗೂ ಚಂದ್ರುಗೆ ತಲಾ ₹1 ಲಕ್ಷ ನೀಡಿದ್ದ. ಇನ್ನೂ ಒಂದೂವರೆ ವರ್ಷ ಅಥವಾ ಪ್ರಕರಣದ ತನಿಖೆ ಮುಗಿಯುವವರೆಗೂ ಚಿನ್ನಾಭರಣವನ್ನು ಬಾವಿಯಿಂದ ಹೊರತೆಗೆಯದಂತೆ ನಿರ್ಧರಿಸಿದ್ದ’ ಎಂದು ಮಾಹಿತಿ ನೀಡಿದ್ದಾರೆ.
.ಬ್ಯಾಂಕ್ ಕಳವಿಗೆ ‘ಮನಿ ಹೈಸ್ಟ್’ ಪ್ರೇರಣೆ: ಆರೋಪಿಗಳಿಂದ 17 KG ಚಿನ್ನಾಭರಣ ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.