ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮಿತಬಳಕೆಯ ಬೇಸಾಯ ಕ್ರಮ ಅನುಸರಿಸಿ

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ರೈತ ಮುಖಂಡ ಎಚ್‌.ಆರ್‌. ಬಸವರಾಜಪ್ಪ
Last Updated 3 ಡಿಸೆಂಬರ್ 2020, 16:02 IST
ಅಕ್ಷರ ಗಾತ್ರ

ದಾವಣಗೆರೆ: ಮುಂದಿನ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಲಿದೆ. ರೈತರು ಈಗಿನಿಂದಲೇ ಎಚ್ಚೆತ್ತುಕೊಂಡು ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ಧತಿ ಅಳವಡಿಸಿಕೊಳ್ಳಬೇಕು. ಕೂರಿಗೆ ಬೇಸಾಯ ಪದ್ಧತಿಗೆ ಕಡಿಮೆ ನೀರು ಸಾಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೌರವಾಧ್ಯಕ್ಷ ಎಚ್.ಆರ್‌. ಬಸವರಾಜಪ್ಪ ಹೇಳಿದರು.

ಇಲ್ಲಿನ ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ಗುರುವಾರ ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದಿಂದ ಆಯೋಜಿಸಿದ್ದ ರೈತರ ಚಿಂತನ–ಮಂಥನ ಸಭೆಯಲ್ಲಿ ಮಾತನಾಡಿದರು.

ನೀರಿಗಾಗಿ ಮುಂದೆ ಮಧ್ಯ ಕರ್ನಾಟಕ ಜಿಲ್ಲೆಗಳ ರೈತರ ನಡುವೆ ಯುದ್ಧ ನಡೆದರೂ ಅಚ್ಚರಿಯಿಲ್ಲ. ಅದಕ್ಕೆ ರೈತರು ಅವಕಾಶ ನೀಡದೆ ನೀರಿನ ಮಿತಬಳಕೆ ಬಗ್ಗೆ ಚಿಂತಿಸಬೇಕು. ಕೂರಿಗೆ ಪದ್ಧತಿಯಿಂದ ಇದರಿಂದ ಇಳುವರಿ ಪಡೆಯಬಹುದು. ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ತುಂತುರು ನೀರಾವರಿ ಪದ್ಧತಿ ಮೂಲಕ ಭತ್ತವನ್ನೂ ಬೆಳೆಯಬಹುದು. ಈ ಬಗ್ಗೆ ರೈತರು ಚಿಂತಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ‘ನೀರಿನ ಅಭಾವದಿಂದ ಬೇಸಾಯದಲ್ಲಿ ಹೊಸ ಪದ್ಧತಿಗಳು ಬರುತ್ತಿವೆ. ರೈತರು ಇದನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸಬೇಕು.ಕೂರಿಗೆ ಪದ್ಧತಿ ಹೊಸದಲ್ಲ. ನೀರಿನ ಅಭಾವದಿಂದ ಇದು ಮುನ್ನಲೆಗೆ ಬಂದಿದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಬಹುದು’ ಎಂದರು.

ಕೂರಿಗೆ ಪದ್ಧತಿಯ ಬಗ್ಗೆ ರೈತರಿಗೆ ತರಬೇತಿ ನೀಡಲು ರೈತ ಮುಖಂಡರು, ಕೃಷಿ ಇಲಾಖೆ ಮುಂದಾಗಬೇಕು. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಯಾವ ಬೆಳೆ ಬೆಳೆದರೆ ಅನುಕೂಲ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ, ರೈತ ಮುಖಂಡ ತೇಜಸ್ವಿ ವಿ. ಪಟೇಲ್‌, ‘ರೈತರು ನೀರು ಇದ್ದಾಗ ಒಂದು ಪದ್ಧತಿಯ ಬೇಸಾಯ, ನೀರು ಲಭ್ಯವಿಲ್ಲದಿದ್ದಾಗ ಇನ್ನೊಂದು ಪದ್ಧತಿ ಅನುಸರಿಸಬಾರದು. ಕೂರಿಗೆ ಪದ್ಧತಿಯನ್ನು ಈಗಿನಿಂದಲೇ ಅಳವಡಿಸಿಕೊಂಡರೆ ಮುಂದೆ ನೀರಿಲ್ಲದಾಗ ಪರಿತಪಿಸುವುದು ತಪ್ಪುತ್ತದೆ. ರೈತರಿಗೆ ಮಾಹಿತಿ ನೀಡಲು ಸಭೆ ಆಯೋಜಿಸಲಾಗಿದೆ’ ಎಂದರು.

ಮಹಾಮಂಡಳದ ನಿರ್ದೇಶಕ ಗಿರೀಶ್, ‘ರೈತರು ಕೂರಿಗೆ ಪದ್ಧತಿ ಅಳವಡಿಸಿಕೊಳ್ಳಬೇಕು. ಸರ್ಕಾರ ಈ ಪದ್ಧತಿ ಅನುಸರಿಸುವ ರೈತರಿಗೆ ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ, ‘ಕೂರಿಗೆ ಪದ್ಧತಿಯಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು. ಸಾಮಾನ್ಯ ಪದ್ಧತಿಗಿಂತ ಈ ಪದ್ಧತಿಯಲ್ಲಿ 1 ಎಕರೆಗೆ ₹ 8 ರಿಂದ ₹ 10 ಸಾವಿರ ಉಳಿಸಬಹುದು’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಮಾಹಿತಿ ನೀಡಿದರು.ರೈತ ಮುಖಂಡ ಬಲ್ಲೂರು ರವಿಕುಮಾರ್‌ ಮಾತನಾಡಿದರು. ಕರಿಬಸಣ್ಣ, ಜಗದೀಶ್‌, ಎಇಇ ಗುಡ್ಡಪ್ಪ ಸೇರಿ ವಿವಿಧ ತಾಲ್ಲೂಕುಗಳ ರೈತರು ಭಾಗವಹಿಸಿದ್ದರು. ಬಳಿಕ ರೈತರೊಂದಿಗೆ ಸಂವಾದ ನಡೆಯಿತು.

‘ತುಂಗಾ ಜಲಾಶಯದಿಂದಲೇ 29.5 ಅಡಿ ನೀರು ಬಿಡಿ’

‘ಭದ್ರಾ ಜಲಾಶಯದಲ್ಲಿ 145 ಟಿಎಂಸಿ ಅಡಿ ನೀರು ತುಂಬಿದಾಗ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡುತ್ತಾರೆ. ಇದು ಬಹುತೇಕ ರೈತರಿಗೆ ತಿಳಿದಿಲ್ಲ. ಹೆಚ್ಚಿನ ನೀರು ಸಂಗ್ರಹವಾದಾಗ ನೀರು ಮೇಲ್ದಂಡೆ ಯೋಜನಾ ಭಾಗಕ್ಕೆ ಹರಿಸುತ್ತಾರೆ ಎಂಬ ತಪ್ಪು ಅಭಿಪ್ರಾಯ ರೈತರಲ್ಲಿದೆ. 145 ಟಿಎಂಸಿ ಅಡಿಯಲ್ಲಿ ಎಷ್ಟು ಉಳಿಯುತ್ತದೆಯೇ ಅಷ್ಟು ನಮಗೆ ಸಿಗಲಿದೆ. ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ರೈತರಿಗೆ 29.5 ಟಿಎಂಸಿ ಅಡಿ ನೀರು ಬಿಡಬೇಕು. ಹೀಗಾಗಿ ನೀರು ಬಿಡಲು ಮುಂದಿನ ದಿನಗಳಲ್ಲಿ ಆಫ್‌, ಆನ್‌ ಪದ್ಧತಿ ಬಂದರೂ ಅಚ್ಚರಿ ಇಲ್ಲ’ ಎಂದು ಎಚ್‌.ಆರ್‌. ಬಸವರಾಜಪ್ಪ ಎಚ್ಚರಿಸಿದರು.

‘ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ರೈತರಿಗೆ ಬಿಡುವ 29.5 ಟಿಎಂಸಿ ಅಡಿ ನೀರನ್ನು ತುಂಗಾದಿಂದ ಬಿಡಿ ಎಂಬುದು ನಮ್ಮ ಒತ್ತಾಯ. ಆದರೆ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಬಸವರಾಜಪ್ಪ ಹೇಳಿದಾಗ, ‘ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳೋಣ. ರೈತರಿಗೆ ನೀರಿನ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಬಗ್ಗೆಯೂ ಪ್ರಚಾರ ನಡೆಸೋಣ’ ಎಂದು ರೈತರು ಒತ್ತಾಯಿಸಿದರು.

ಇದಕ್ಕೆ ರೈತ ಮುಖಂಡರು ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT