ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಕಂದಾಯಕ್ಕೆ ಕನ್ನ: ನಕಲಿ ಸಹಿ ಬಳಸಿ ವಂಚನೆ; ಮೂವರ ಬಂಧನ

ಪಾಲಿಕೆ ಕಂದಾಯಕ್ಕೆ ಕನ್ನ ಹಾಕಿದ ವಂಚಕರು
Last Updated 15 ಅಕ್ಟೋಬರ್ 2020, 4:45 IST
ಅಕ್ಷರ ಗಾತ್ರ

ದಾವಣಗೆರೆ: ಕಂದಾಯ ಅಧಿಕಾರಿಗಳ ಸೀಲ್, ನಕಲಿ ಸಹಿ ಬಳಸಿ, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಮಹಾನಗರ ಪಾಲಿಕೆಗೆ ಬರಬೇಕಾದ ಕಂದಾಯವನ್ನು ವಂಚಿಸಿದ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದ ಮಹೇಶ್ ಎ, ಈತನಿಗೆ ಸಹಕರಿಸಿದ ಆನೆಕೊಂಡದ ವಾಸಿ ಗುರುರಾಜ್ ಹಾಗೂ ಆನಗೋಡಿನ ವೆಂಕಟೇಶ ಬಂಧಿತರು. ಗುರುರಾಜ್ ಅಕ್ಕಿನುಚ್ಚಿನ ವ್ಯಾಪಾರಿಯಾದರೆ ವೆಂಕಟೇಶ್ ಮುನ್ಸಿಪಾಲಿಟಿ ಹತ್ತಿರ ಫಾರಂ ಬರೆಯುವ ಕೆಲಸ ಮಾಡುತ್ತಿದ್ದಾನೆ.

‘ದಾವಣಗೆರೆಯ ನಿವಾಸಿಗಳಾದ ನೇತ್ರಾವತಿ ಹಾಗೂ ರಾಜೇಶ್ವರಿ ಅವರ ಸ್ವಯಂ ಘೋಷಿತ ಆಸ್ತಿ ತೆರಿಗೆ ದಾಖಲೆ ನೀಡುವ ವೇಳೆ ನಕಲಿ ಖಾತಾ ಎಕ್ಟ್ರಾಕ್ಟ್ ನೀಡಿದ್ದು, ಪರಿಶೀಲನೆ ವೇಳೆ ಗೊತ್ತಾಗಿದೆ. ಕಂದಾಯ ಅಧಿಕಾರಿ ನಾಗರಾಜು ಅವರು ನೀಡಿದ ದೂರಿನ ಮೇರೆಗೆ ಈ ಮೂವರನ್ನು ಬಂಧಿಸಲಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಕರಣದ ಬೆನ್ನತ್ತಿದ್ದ ಸಿಪಿಐ ದಕ್ಷಿಣ ವೃತ್ತದ ನೇತೃತ್ವದ ತಂಡ ಆರೋಪಿ ಮನೆಯನ್ನು ಶೋಧಿಸಿದಾಗ 2010, 2012ರಲ್ಲೂ ಬಳಸುತ್ತಿದ್ದ ನಕಲಿ ಸೀಲುಗಳು ಪತ್ತೆಯಾಗಿವೆ. ಮಹೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕಂದಾಯ ಕಟ್ಟಲು ಬರುವ ಜನರಿಂದ ಬ್ಯಾಂಕ್ ಚಲನ್ ತುಂಬಿ ಅವರಿಂದ ಹಣ ಪಡೆದುಕೊಂಡು ಪಾಲಿಕೆಯ ಖಾತೆಗೆ ಜಮಾ ಮಾಡದೇ ಆರೋಪಿಗಳು ವಂಚಿಸಿದ್ದಾರೆ’ ಎಂದು ಎಸ್‌ಪಿ ತಿಳಿಸಿದರು.

‘ತನಿಖೆ ನಡೆಸಲು ದಾಖಲಾತಿಗಳ‌ನ್ನು ಪರಿಶೀಲಿಸಲು ಪಾಲಿಕೆಯಿಂದ ವಿಸ್ತೃತ ವರದಿ ಕೇಳಿದ್ದು, ತನಿಖೆಗೆ ಸಹಕಾರ ನೀಡುವುದಾಗಿ ಆಯುಕ್ತರು ತಿಳಿಸಿದ್ದಾರೆ. ದಾಖಲೆ ತರಿಸಿಕೊಂಡ ನಂತರ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು‘ ಹನುಮಂತರಾಯ ಭರವಸೆ ನೀಡಿದರು.

ಆರೋಪಿಗಳ ಪತ್ತೆಗಾಗಿ ಶ್ರಮಿಸಿದ ದಕ್ಷಿಣ ವೃತ್ತ ಸಿಪಿಐ ಗುರುಬಸವರಾಜ್, ಪಿಎಸ್‌ಐ ಚಿದಾನಂದಪ್ಪ, ಎಎಸ್‌ಐ ಕೆ.ಎಲ್‌.ತಿಪ್ಪೇಸ್ವಾಮಿ, ಸಿಬ್ಬಂದಿ ರಾಜು, ಲೋಕನಾಯ್ಕ, ಚಂದ್ರಪ್ಪ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಗರ ಡಿವೈಎಸ್‌ಪಿ ನಾಗೇಶ್ ಐತಾಳ್, ದಕ್ಷಿಣ ವೃತ್ತದ ಸಿಪಿಐ ಗುರುಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT