ಶುಕ್ರವಾರ, ಜನವರಿ 24, 2020
22 °C
ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ

ಪರಿಶ್ರಮದಿಂದ ಪ್ರತಿಭೆ, ಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಪ್ರತಿಭೆ, ಜ್ಞಾನ ಉಚಿತವಾಗಿ ಸಿಗುವುದಿಲ್ಲ. ಅದನ್ನು ಪರಿಶ್ರಮಪಟ್ಟು ಪಡೆಯಬೇಕು. ನಮಗೆ ಬೇಕಾದುದನ್ನು ನಮ್ಮ ಜಾಗದಲ್ಲೇ ಹುಡುಕಿಕೊಳ್ಳಬೇಕು’ ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಕಿವಿಮಾತು ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಡಿಆರ್‌ಎಂ ವಿಜ್ಞಾನ ಪದವಿ ಪೂರ್ವ ಕಾಲೇಜಿನಿಂದ ಶುಕ್ರವಾರ ಹಮ್ಮಿಕೊಂಡಿದ್ದ 2018–19ನೇ ಸಾಲಿನ ಪ್ರತಿಭಾ ಪುರಸ್ಕಾರ, 2019–20ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಅದನ್ನು ಸಾಧಿಸಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು, ಶ್ರದ್ಧೆ, ಶ್ರಮ ಇದ್ದರೆ ಸಾಧನೆ ಸಾಧ್ಯ. ಇಂದು ಬೆರಳ ತುದಿಯಲ್ಲಿ ಪ್ರಪಂಚ ಕಾಣಬಹುದು. ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಿರಂಜನ್‌ ಬಿ.ಸಿ., ‘ವಿದ್ಯಾರ್ಥಿಗಳು ಪೋಷಕರ ಒತ್ತಾಯಕ್ಕೆ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ನಿಮಗೆ ಆಸಕ್ತಿ ಇರುವ ಕೋರ್ಸ್‌ ಆಯ್ಕೆ ಮಾಡಿಕೊಂಡು ಯಶಸ್ಸು ಸಾಧಿಸಿ‘ ಎಂದು ಹೇಳಿದರು.

ಮುಂದೆ ನೀಟ್‌, ಜೆಇಇ ಸೇರಿ ವಿಪುಲ ಅವಕಾಶಗಳಿವೆ. ಅದನ್ನು ಬಳಸಿಕೊಳ್ಳಿ. ಕೆಸಿಇಟಿ ಪ್ರವೇಶ ಪರೀಕ್ಷೆಗೆ ಬೇಕಾದ ಮಾರ್ಗದರ್ಶನವನ್ನು ಶಿಕ್ಷಕರಿಂದ ಪಡೆಯಿರಿ. ಯಾವುದೇ ಕೋರ್ಸ್‌ ಆಯ್ಕೆ ಮಾಡಿಕೊಂಡರೂ ಆಸಕ್ತಿ ಇರಲಿ ಎಂದು ಸಲಹೆ ನೀಡಿದರು.

ಬಿಐಇಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್‌. ಚಿದಾನಂದಪ್ಪ, ‘ಇಂದು ಯುವಜನರಲ್ಲಿ ಯಾವುದೇ ವಿಷಯಗಳಿಗೆ ಸ್ಪಂದಿಸುವ ಮನೋಭಾವ ಇಲ್ಲ. ಇದು ಸರಿಯಲ್ಲ. ಸಮಾಜದ ನೋವು, ನಲಿವುಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಲ್ಲೂ ಸಾಮರ್ಥ್ಯ ಇದೆ. ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಾಧನೆಗೆ ಉಪನ್ಯಾಸಕರು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ಗೋಪಾಲಕೃಷ್ಣ ನಾಯ್ಕ್‌ ಎಸ್‌.ಆರ್‌. ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ.ಎಸ್‌. ನಾಗರತ್ನಮ್ಮ, ಉಪನ್ಯಾಸಕರಾದ ಶೋಭಾ ಟಿ., ಕೊಟ್ರಪ್ಪ ಕೆ. ಇದ್ದರು. 

ನಯನ ಸ್ವಾಗತಿಸಿದರು. ಅನುಷಾ ವಂದಿಸಿದರು. ಸಂಗೀತಾ, ಯಶಸ್ವಿನಿ ನಿರೂಪಿಸಿದರು. 

ಪ್ರತಿಕ್ರಿಯಿಸಿ (+)