ದಾವಣಗೆರೆ: ಗಣೇಶನ ಹಬ್ಬಕ್ಕೆ ದೇವನಗರಿ ಸಜ್ಜಾಗಿದೆ. ಸೋಮವಾರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜಿಲ್ಲೆಯ ವಿವಿಧೆಡೆ ಬಣ್ಣ ಬಣ್ಣದ ಮಂಟಪಗಳನ್ನು ಅಲಂಕರಿಸಿದ್ದು, ಹೂವುಗಳಿಂದ ಸಿಂಗಾರಗೊಂಡಿವೆ. ನಗರದಲ್ಲಿ ಎಲ್ಲಿ ನೋಡಿದರಲ್ಲಿ ವೇದಿಕೆ ಸಿದ್ಧಗೊಂಡಿದ್ದು, ನಗರದ ಹಳೇ ಹಾಗೂ ಹೊಸ ದಾವಣಗೆರೆ ಭಾಗಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರಸ್ತುತ ದಾವಣಗೆರೆ ಮಹಾನಗಗರ ಪಾಲಿಕೆಯ 45 ವಾರ್ಡ್‌ಗಳಲ್ಲಿ 217 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಪರವಾನಗಿ ನೀಡಿದ್ದು, ಹರಿಹರದಲ್ಲಿ 9, ಮಲೇಬೆನ್ನೂರಿನಲ್ಲಿ 2, ಜಗಳೂರಿನ 6, ಹೊನ್ನಾಳಿ ಹಾಗೂ ನ್ಯಾಮತಿಗಳಲ್ಲಿ ತಲಾ 1 ಹಾಗೂ ಚನ್ನಗಿರಿಯಲ್ಲಿ 3 ಸಾರ್ವಜನಿಕ ಗಣೇಶೋತ್ಸವಕ್ಕೆ ಪರವಾನಗಿ ನೀಡಲಾಗಿದೆ. ಅನುಮತಿ ಪಡೆಯಲು 7 ಏಕ ಗವಾಕ್ಷಿಗಳನ್ನು ತೆರೆಯಲಾಗಿದೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಕೇದಾರನಾಥ ಮಹಾಮಂಟಪದ ಮಾದರಿಯಲ್ಲಿ ವೇದಿಕೆ ಸಿದ್ಧಗೊಳಿಸಿದರೆ, ಹರಿಹರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಸುತ್ತಿರುವ ಉತ್ಸವದಲ್ಲಿ ಚಂದ್ರಯಾನ ಮಾದರಿಯನ್ನು ನಿರ್ಮಿಸಲಾಗಿದೆ. ನಗರದ ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಟ್ರಸ್ಟ್‌ನಿಂದ ಈ ಬಾರಿ ಸಮುದ್ರ ಮಂಥನದ ಚಿತ್ರಣವವನ್ನು ಬಿಂಬಿಸಲಾಗುತ್ತದೆ.
ಕೇದಾರನಾಥ ಮಹಾ ಮಂಟಪ
ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಕೇದಾರನಾಥ ಮಹಾ ಮಂಟಪದ ಮಾದರಿಯಲ್ಲಿ ಗಣೇಶನ ಮಂಟಪವನ್ನು ನಿರ್ಮಿಸಿದ್ದು, ಮಂಟಪದ ಸುತ್ತಲೂ ನಾಗೇಶ್ವರ, ಭೀಮಾಶಂಕರ, ವೈದ್ಯನಾಥೇಶ್ವರ, ಓಂಕಾರೇಶ್ವರ, ಮಹಾಕಾಲೇಶ್ವರ, ಮಲ್ಲಿಕಾರ್ಜುನ, ಸೋಮನಾಥೇಶ್ವರ, ಕಾಶಿ ವಿಶ್ವನಾಥ, ಗ್ರೀಶ್ನೇಶ್ವರ, ತ್ರಯಂಬಕೇಶ್ವರ, ಕೇದಾರೇಶ್ವರ ಹಾಗೂ ರಾಮೇಶ್ವರ ಜ್ಯೋತಿರರ್ಲಿಂಗಗಳ ಚಿತ್ರಗಳನ್ನು ಅಂಟಿಸಲಾಗಿದೆ.
140 ಅಡಿ ಉದ್ದ ಹಾಗೂ 65 ಅಡಿ ಅಗಲದ ಈ ಮಹಾಮಂಟಪ ನಿರ್ಮಿಸಲು 16 ಜನ ಕೋಲ್ಕೊತ್ತಾ ಕೆಲಸದವರು 25 ದಿವಸ ಶ್ರಮಿಸಿದ್ದಾರೆ. ಈ ಮಂಟಪದಲ್ಲಿ 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಜ್ಜುಗೊಳಿಸಲಾಗಿದೆ. ಮಂಟಪದ ಪಕ್ಕದಲ್ಲಿಯೇ ಅಮ್ಯೂಸ್‌ಮೆಂಟ್ ಪಾರ್ಕ್ ಇದ್ದು, ಇಲ್ಲಿಗೆ ಬರುವವರು ಮಹಾಮಂಟಪವನ್ನು ವೀಕ್ಷಿಸಿ, ಸಮಯ ಕಳೆಯಬಹುದು.
‘ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಿರುವ ಮಹಾಮಂಟಪದಲ್ಲಿ 26 ದಿವಸಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಇರಲಿದೆ. ಒಂದು ದಿವಸ ಪ್ರಾಣೇಶ್ ಅವರಿಂದ ಹಾಸ್ಯ, ಮತ್ತೊಂದು ದಿವಸ ‘ಕುಂಟಕೋಣ ಮೂಕ ಜಾಣ’ ನಾಟಕ ಪ್ರದರ್ಶನವಾಗಲಿದೆ. ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ, ಹಾರಿಕಾ ಮಂಜುನಾಥ್ ಅವರ ಅವರ ಭಾಷಣವಿದೆ’ ಎಂದು ಹಿಂದೂ ಮಹಾ ಗಣಪತಿ ಸಮಿತಿಯ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದರು.
‘ಕೇದಾರನಾಥ ದೇವಾಲಯವನ್ನು ಅಷ್ಟು ದೂರ ಹೋಗಿ ನೋಡಲು ಆಗುವುದಿಲ್ಲ. ಜನರು ಇಲ್ಲಿಯೇ ನೋಡಲಿ ಎಂಬುದು ನಮ್ಮ ಉದ್ದೇಶ’ ಎಂದು ಅವರು ತಿಳಿಸಿದರು.
ವಿಘ್ನ ನಿವಾರಕನಿಗೆ ಗೋಪಿ ಚಂದನ ಅಲಂಕಾರ: ಹಿಂದೂ ಯುವ ಶಕ್ತಿ ವತಿಯಿಂದ ಪ್ರತಿವರ್ಷ ಒಂದೊಂದು ಅಲಂಕಾರ ಮಾಡುವುದು ವಾಡಿಕೆ. ಅದರಂತೆ ಈ ಬಾರಿ ಇಲ್ಲಿನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಗಣೇಶನಿಗೆ ಗೋಪಿ ಚಂದನ ಅಲಂಕಾರ ಮಾಡಲಾಗುತ್ತಿದೆ. ಕಳೆದ ಬಾರಿ ಕೊಬ್ಬರಿಯಿಂದ ಗಣೇಶನ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು.
‘18 ಅಡಿ ಎತ್ತರದ ಗಣೇಶನಿಗೆ 12ರಿಂದ 13 ಜನ ಇಪ್ಪತ್ತು ದಿವಸ ಶ್ರಮಪಟ್ಟು ಈ ಗಣಪನಿಗೆ 250 ಕೆ.ಜಿಯಷ್ಟು ಗೋಪಿ ಚಂದನದಿಂದ ಅಲಂಕಾರ ಮಾಡಲಾಗಿದೆ. ಕಡೆಯ ದಿವಸ ಜಾನಪದ ಕಲಾತಂಡದೊಂದಿಗೆ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು’ ಎಂದು ಹಿಂದೂ ಯುವ ಶಕ್ತಿ ಸಂಘಟನೆಯ ಮುಖಂಡ ಪಿ.ಸಿ. ಶ್ರೀನಿವಾಸ್ ತಿಳಿಸಿದರು.
ಪರಿಸರ ಸ್ನೇಹಿ ಗಣಪಗಳಿಗೆ ಬೇಡಿಕೆ: ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಯನ್ನು ನಿಷೇಧಿಸಲಾಗಿದ್ದು, ಹೆಚ್ಚಿನ ಜನರು ಪರಿಸರಸ್ನೇಹಿ ಗಣೇಶನಿಗೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸಾವಯವ ಬೆಲ್ಲದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದಾರೆ.
ಸಮಿತಿಯ 15ಕ್ಕೂ ಹೆಚ್ಚು ಸ್ವಯಂ ಸೇವಕರು ಚಂದ್ರಯಾನ-3ರ ಬಗ್ಗೆ ಸಮಗ್ರ ಮಾಹಿತಿ ನೀಡುವರು. ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು.ಕೆ.ಜಿ. ಸಿದ್ದೇಶ್ ವಿನಾಯಕ ಮಹೋತ್ಸವ ಸಮಿತಿಯ ಅಧ್ಯಕ್ಷ
30 ಸ್ಥಳಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ
‘ಗಣೇಶ ಮೂರ್ತಿ ವಿಸರ್ಜನೆಗೆ ದಾವಣಗೆರೆ ಮಹಾನಗರ ಪಾಲಿಕೆಯಿಂದ ಸೆ. 18 20 ಮತ್ತು 22 ರಂದು ನಗರದ 30 ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು’ ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ. ಸ್ಥಳಗಳು: ಹಗೆದಿಬ್ಬ ವೃತ್ತ ರಾಜಕುಮಾರ ಶಾಲೆ ಹತ್ತಿರ ಕುರುಬರ ಕೇರಿ ಕೊಂಡಜ್ಜಿ ರಸ್ತೆ (ಶಿಬಾರ) ಮೈಲಾರಲಿಂಗೇಶ್ವರ ದೇವಸ್ಥಾನ ದೇವರಾಜ ಅರಸು ಬಡಾವಣೆ (ಕೋರ್ಟ್ ಹಿಂಭಾಗ) ದುಗಾಂಬಿಕ ದೇವಸ್ಥಾನ (ಶಿವಾಜಿ ವೃತ್ತ) ಹೊಂಡದ ವೃತ್ತ ಬೇತೂರು ರಸ್ತೆ ವೆಂಕಟೇಶ್ವರ ವೃತ್ತ ಮಹಾರಾಜಪೇಟೆ ವಿಠಲಮಂದಿರ ಚೌಕಿಪೇಟೆಯ ಹಾಸಬಾವಿ ವೃತ್ತ ವಿನೋಬನಗರ 3ನೇ ಮುಖ್ಯ ರಸ್ತೆ ರಾಮ್ ಆ್ಯಂಡ್ ಕೋ ವೃತ್ತ ಕಾಯಿಪೇಟೆಯ ಬಸವೇಶ್ವರ ವೃತ್ತ ಬಂಬೂ ಬಜಾರ್ (ಗಣೇಶ ಹೋಟೆಲ್ ಬಳಿ) ಎಸ್‍ಎಸ್ ಲೇಔಟ್ ಬನ್ನಿಮರದ ಹತ್ತಿರ ರಿಂಗ್ ರಸ್ತೆ ಎಂ.ಸಿ.ಸಿ ‘ಎ’ ಬ್ಲಾಕ್ ಬಕ್ಕೇಶ್ವರ ಸ್ಕೂಲ್ ಮುಂಭಾಗ ಜಯದೇವ ವೃತ್ತ ಡಿಸಿಎಂ ಲೇಔಟ್ ಸರ್ಕಲ್ ಹತ್ತಿರ ಆವರಗೆರೆಯ ಸರ್ಕಾರಿ ಶಾಲೆಯ ಹತ್ತಿರ ಸರಸ್ವತಿ ಬಡಾವಣೆ ಪಂಚಮುಖಿ ಆಂಜನೇಯ ದೇವಸ್ಥಾನ ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ ಸಂಜೀವಿನಿ ಆಂಜನೇಯ ದೇವಸ್ಥಾನ ನಿಟ್ಟುವಳ್ಳಿ ದುಗಾಂಬಿಕ ದೇವಸ್ಥಾನ ಎಚ್‍ಕೆಆರ್ ಸರ್ಕಲ್ ಡಾಂಗೆ ಪಾರ್ಕ್ ಕುವೆಂಪು ನಗರದ ಬಾಪೂಜಿ ಶಾಲೆ ಹತ್ತಿರ ಗುಂಡಿ ಮಹದೇವಪ್ಪ ಸರ್ಕಲ್ ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನ ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನ ಶಾಮನೂರಿನ ಶ್ರೀರಾಮ ಮಂದಿರ ಹಳೇ ಕುಂದುವಾಡ ಆಂಜನೇಯ ದೇವಸ್ಥಾನ.
ಹರಿಹರದಲ್ಲಿ ಚಂದ್ರಯಾನದ ಮಾದರಿ
ಹರಿಹರ: ನಗರದ ಗಾಂಧಿ ಮೈದಾನದಲ್ಲಿ ಈ ಬಾರಿಯ 61ನೇ ವರ್ಷದ ಸಾರ್ವಜನಿಕ ವಿನಾಯಕ ಮಹೋತ್ಸವದಲ್ಲಿ ಇಸ್ರೋ ಸಂಸ್ಥೆಯ ಸಾಹಸಗಾಥೆ ಹೇಳುವ ಚಂದ್ರಯಾನ-3ರ ರೂಪದ ಪ್ರತಿಷ್ಠಾಪನೆ ಮಾಡುತ್ತಿರುವುದು ಜನರ ಗಮನ ಸೆಳೆದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಯಶಸ್ವಿಯಾಗಿದ್ದು ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಚಂದ್ರಯಾನ-3ರ ಪ್ರತಿರೂಪವನ್ನು ರಚಿಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಮತ್ತಷ್ಟು ಆಸಕ್ತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಸೆ.18ರಿಂದ 30ರವರೆಗೆ 13 ದಿನ ಮಹೋತ್ಸವ ನಡೆಯಲಿದ್ದು ಸೆ.18ರಂದು ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲು ಚಂದ್ರಯಾನದ ಸ್ತಬ್ಧ ಚಿತ್ರ ನಿರ್ಮಿಸಿ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡುವುದು ಕುತೂಹಲ ಕೆರಳಿಸಿದೆ.
‘ಕಾನೂನು ಸುವ್ಯವಸ್ಥೆ ಕಾಪಾಡಿ’
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ ಸುಳ್ಳುಸುದ್ದಿ ಹರಡುವುದು ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪೋಸ್ಟ್‌ಗಳನ್ನು ಹಾಕುವುದಾಗಲೀ ಹಾಗು ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಾಲಾಗುವುದು. ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಗಣೇಶ ಈದ್ ಮಿಲಾದ್ ಹಬ್ಬದ ಕಾನೂನು -ಸುವ್ಯಸ್ಥೆ ಕಾಪಾಡುವ ದೃಷ್ಠಿಯಿಂದ ಗಣೇಶ ಮತ್ತು ಈದ್ ಮಿಲಾದ್ ಸಮಿತಿ ಈ ಕೆಳಕಂಡ ಅಂಶಗಳನ್ನು ಪಾಲಿಸಲು ಸೂಚನೆ ನೀಡಿದೆ.
*ಗಣೇಶ ವಿಸರ್ಜನಾ ಸಮಯದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಈಜು ಬರುವಂತಹವರನ್ನು ಹಾಗೂ ಜೀವರಕ್ಷಕರನ್ನು ನೇಮಿಸಿಕೊಳ್ಳುವುದು.
*ಹಬ್ಬದ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹವರ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ಧಕ್ಷಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
* ಗಣೇಶ ಮೆರವಣಿಗೆ ಸಮಯದಲ್ಲಿ ಪ್ರಚೋದನಾಕಾರಿ ಹಾಡುಗಳನ್ನು ಹಾಕುವುದು ಪೋಸ್ಟರ್‌ಗಳನ್ನು ಪ್ರದರ್ಶನಕ್ಕೆ ಅವಕಾಶವಿಲ್ಲ.
*ಸಾರ್ವಜನಿಕ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.
* ಗಣೇಶ ಪ್ರತಿಷ್ಠಾಪನೆ ಸಂಧರ್ಭದಲ್ಲಿ ಹಾಗೂ ವಿಸರ್ಜನಾ ಮೆರವಣಿಗೆ ಸಂಧರ್ಭದಲ್ಲಿ ಮಾದಕ ವಸ್ತು ಮದ್ಯ ಸೇವನೆ ಮಾಡಬಾರದು ಈ ಬಗ್ಗೆ ಗಣೇಶ ಮಂಡಳಿಯವರು ಜವಾಬ್ದಾರಿ ತೆಗೆದುಕೊಳ್ಳುವುದು.
* ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬಾರದು ಹಾಗೂ ಇದೇ ರೀತಿ ವಿಸರ್ಜನೆ ಮೆರವಣಿಗೆಯನ್ನು ಸಹ ನಡೆಸಬಾರದು.
* ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವುದು. ಯಾವುದೇ ವಿದ್ಯುತ್ ಅವಘಡಗಳಾಗಂದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
* ಗಣೇಶ ಹಬ್ಬದ ಸಂಬಂಧ ಶುಚಿತ್ವ ಕಾಪಾಡಿಕೊಂಡು ಪ್ರಸಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಮತ್ತು ಪ್ರತಿಷ್ಠಾಪನೆ ಸ್ಥಳಗಳಲ್ಲಿ ಬೆಂಕಿ ಅನಾಹುತಗಳಾಗಂದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು.
* ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು.
* ಗಣೇಶ ಮತು ಈದ್ ಮಿಲಾದ್ ಹಬ್ಬದ ಸಂಬಂಧ ಈಗಾಗಲೇ ರೌಡಿ ಮತ್ತು ಮತೀಯ ಗೂಂಡಾಗಳ ಮೇಲೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ನಿಗಾ ಇರಿಸಲಾಗಿರುತ್ತದೆ. ಗಣೇಶ ಪ್ರತಿಷ್ಠಾಪನ ಪೆಂಡಾಲ್‍ಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಬೇಕು. ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು ಏಕೆಂದರೆ ಮಾನ್ಯ ಘನ ನ್ಯಾಯಲಯವು ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ನಿಷೇಧಿಸಿದ್ದು ಉಲ್ಲಂಘಿಸಿದ್ದಲ್ಲಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದು.
* ಗಣೇಶ ವಿಸರ್ಜನೆ ಮಾಡುವಾಗ ಸಾರ್ವಜನಿಕ ಆಸ್ತಿ ಜೀವ ಹಾನಿಯಾಗದಂತೆ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು.
* ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣೇಶ ಹಾಗೂ ಕಾರ್ಯಕ್ರಮದ ಸ್ಥಳಗಳಲ್ಲಿ ಸ್ವಯಂ ಸೇವಕರನ್ನು ನೇಮಿಸುವುದು ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.