ದಾವಣಗೆರೆ: ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಯುವಪಡೆ, ಆಗಸದತ್ತ ಚಾಚಿದ ನಂದಿ ಕೋಲುಗಳ ನರ್ತನ, ಲಯಬದ್ಧ ಡೊಳ್ಳಿನ ಸದ್ದಿಗೆ ರೋಮಾಂಚನಗೊಳ್ಳುವ ಮೈಮನಗಳ ನಡುವೆ ಅದ್ದೂರಿಯಾಗಿ ನೆರವೇರಿತು ವಿನೋಬನಗರದ 2ನೇ ಕ್ರಾಸ್ ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ.
ವಿನೋಬನಗರದ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯು 32ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಿದ್ದ ರೇಣುಕಾ ಯಲ್ಲಮ್ಮ ದೇವಿ ಪರಿಕಲ್ಪನೆಯ ವಿನಾಯಕನ ಶೋಭಾಯಾತ್ರೆ ಭಾನುವಾರ ನೆರವೇರಿತು. ಮೆರವಣಿಗೆಗೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು.
ಗಣಪತಿ ದೇಗುಲದ ಬಳಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನಾ ಮೆರವಣಿಗೆ ಮಧ್ಯಾಹ್ನ 2.40ಕ್ಕೆ ಆರಂಭವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜು ಸ್ವತಃ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಹುರುಪು ತುಂಬಿದರು. ‘ಧೂಡಾ’ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹಾಗೂ ಪಾಲಿಕೆ ಸದಸ್ಯ ಎ.ನಾಗರಾಜ್ ಸಚಿವರಿಗೆ ಸಾಥ್ ನೀಡಿದರು.
ಮೆರವಣಿಗೆಯ ಮುಂಭಾಗದಲ್ಲಿದ್ದ ಡಿಜೆ ಬಳಿ ಯುವಪಡೆ ಹೆಚ್ಚಾಗಿತ್ತು. ಭಗವಾಧ್ವಜ ಹಿಡಿದಿದ್ದ ಯುವಕರು ಮೆರವಣಿಗೆ ಆರಂಭವಾಗುತ್ತಿದ್ದಂತೆ ಕುಣಿಯತೊಡಗಿದರು. ‘ಜೈಶ್ರೀರಾಮ್’ ಘೋಷಣೆ ಮುಗಿಲು ಮುಟ್ಟಿತ್ತು. ಕಿವಿಗಡಚಿಕ್ಕುವ ಡಿಜೆ ಸದ್ದಿನಲ್ಲಿ ಭಕ್ತಿಯ ಪರಾಕಾಷ್ಠೆ ಮೇರೆಮೀರಿತ್ತು.
ಡೊಳ್ಳು ಕುಣಿತ, ನಂದಿ ಧ್ವಜ ಕುಣಿತ ಹಾಗೂ ಸಮಾಳದ ಸದ್ದು ಜನರಲ್ಲಿ ಭಕ್ತಿಯ ಭಾವ ಮೂಡಿಸಿದವು. ಮೆರವಣಿಗೆ ಸಾಗುವ ಮಾರ್ಗವನ್ನು ಶುಚಿಗೊಳಿಸಿ ಸಜ್ಜಾಗಿದ್ದ ಜನರು ಗಣೇಶಮೂರ್ತಿಯ ದರ್ಶನ ಪಡೆದು ಪುನೀತರಾದರು. ಮನೆ, ಕಟ್ಟಡಗಳ ಮೇಲೆ ಕುಳಿತು ವಿಸರ್ಜನಾ ಮೆರವಣಿಗೆಯ ದೃಶ್ಯವನ್ನು ಕಣ್ತುಂಬಿಕೊಂಡರು.
ಮೆರವಣಿಗೆ ಆರಂಭವಾದ ಕೆಲ ಹೊತ್ತಿನಲ್ಲಿಯೇ ಮಳೆಯ ಸಿಂಚನವಾಯಿತು. ನಿಧಾನವಾಗಿ ಆರಂಭವಾದ ಮಳೆ ಬಿರುಸಾಗಿ ಸುರಿಯಿತು. ಮಸೀದಿಯ ಸಮೀಪ ಮೆರವಣಿಗೆ ಬರುತ್ತಿದ್ದಂತೆ ಮುಸ್ಲಿಮರು ಗಣೇಶಮೂರ್ತಿಗೆ ಭಕ್ತಿ ಸಮರ್ಪಿಸಿದರು. ಮಸೀದಿಯ ಸಮೀಪ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಸಿ.ಸಿ.ಟಿವಿ ಕ್ಯಾಮೆರಾಗಳ ನಿಗಾ ಇಡಲಾಗಿತ್ತು.
ವಿನೋಬನಗರದಲ್ಲಿ ಸಾಗಿದ ಮೆರವಣಿಗೆ ಪಿ.ಬಿ ರಸ್ತೆಗೆ ಬರುವ ಹೊತ್ತಿಗೆ ಸಂಜೆಯಾಗಿತ್ತು. ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಾಗಿ ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಗಣೇಶ ಸಮಿತಿ ಅಧ್ಯಕ್ಷ ಗುರುನಾಥ ಬಾಬು, ಮುಖಂಡರಾದ ಬಿ.ಕೆ. ರಮೇಶ್, ಮಂಜುನಾಥ, ನಾಗರಾಜಗೌಡ, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.