ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: 4 ವರ್ಷಗಳಿಂದ ‘ಗಂಗಾಕಲ್ಯಾಣ’ ಸ್ಥಗಿತ

ಬಹುತೇಕ ಕೊಳವೆಬಾವಿಗಳು ಮುಚ್ಚಿಹೋಗುವ ಆತಂಕ
Last Updated 4 ನವೆಂಬರ್ 2021, 6:17 IST
ಅಕ್ಷರ ಗಾತ್ರ

ಜಗಳೂರು: ಪರಿಶಿಷ್ಟ ಜಾತಿಯ ಬಡ ರೈತ ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ಯೋಜನೆ ಜಗಳೂರು ತಾಲ್ಲೂಕು ಸೇರಿದಂತೆ ಇಡೀ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಬಹುತೇಕ ಸ್ಥಗಿತವಾಗಿದ್ದು, ಪರಿಶಿಷ್ಟ ಸಮುದಾಯದ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

4 ವರ್ಷಗಳಿಂದ ಮೋಟರ್, ಪಂಪ್ ಕೊಟ್ಟಿಲ್ಲ: 2018-19ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ನಿಗಮ, ಭೋವಿ ಅಭಿವೃದ್ಧಿ ನಿಗಮ ಹಾಗೂ ತಾಂಡಾ ನಿಗಮದಿಂದ ಜಿಲ್ಲೆಯಲ್ಲಿ 384 ಫಲಾನುಭವಿಗಳ ಹೊಲಗಳಲ್ಲಿ ಗಂಗಾಕಲ್ಯಾಣ ಯೋಜನೆಯ ಅಡಿ ಕೊಳವೆಬಾವಿ ಕೊರೆದಿದ್ದು, 4 ವರ್ಷ ಕಳೆದರೂ ಇಂದಿಗೂ ಪಂಪ್, ಮೋಟರ್ ಕೊಟ್ಟಿಲ್ಲ. ವರ್ಷಗಟ್ಟಲೇ ವಿಳಂಬವಾಗಿರುವುದರಿಂದ ಬಹುತೇಕ ಕೊಳವೆಬಾವಿಗಳು ಮುಚ್ಚಿಹೋಗುವ ಆತಂಕ ರೈತರನ್ನು ಕಾಡುತ್ತಿದೆ.

‘ಮೋಟರ್, ಪಂಪ್ ಪೂರೈಕೆ ಮಾಡುವಂತೆ ಅಧಿಕಾರಿಗಳನ್ನು ನೂರಾರು ಬಾರಿ ಭೇಟಿ ಮಾಡಿ ಪರಿಪರಿಯಾಗಿ ವಿನಂತಿಸಿದ್ದೇವೆ. ಆದರೆ ಸಾಮಗ್ರಿ ಪೂರೈಕೆಗೆ ಏಜೆನ್ಸಿ ನಿಗದಿಯಾಗಿಲ್ಲ. ನಿಗಮಗಳಲ್ಲಿ ಅನುದಾನ ಬಂದಿಲ್ಲ. ಬಂದಾಗ ಕೊಡುತ್ತೇವೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಗಂಗಾಕಲ್ಯಾಣ ಯೋಜನೆ ಇದ್ದೂ ಇಲ್ಲದಂತಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಫಲಾನುಭವಿ ‘ಪ್ರಜಾವಾಣಿ’ಯೊಂದಿಗೆ ನೊಂದು ನುಡಿದರು.

3 ವರ್ಷಗಳಿಂದ ಒಂದೂ ಕೊಳವೆಬಾವಿ ಕೊರೆದಿಲ್ಲ: 2019-20ನೇ ಸಾಲಿನಲ್ಲಿ ನಾಲ್ಕು ನಿಗಮಗಳಿಂದ 85 ಫಲಾನುಭವಿಗಳು, 2020-21ನೇ ಸಾಲಿಗೆ ಕೇವಲ 3 ಫಲಾನುಭವಿಗಳು ಹಾಗೂ 2021-22ನೇ ಸಾಲಿನಲ್ಲಿ 33 ಫಲಾನುಭವಿಗಳನ್ನು ಕಾಟಾಚಾರಕ್ಕೆ ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್ ನಿಗಮ, ತಾಂಡಾ ನಿಗಮ, ಆದಿಜಾಂಬವ ನಿಗಮ ಹಾಗೂ ಭೋವಿ ಅಭಿವೃದ್ಧಿ ನಿಗಮಗಳಿಂದ ಕೇವಲ ಬೆರಳೆಣಿಕೆಯಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆ ಫಲಾನುಭವಿಗಳ ಜಮೀನುಗಳಲ್ಲಿ 3 ವರ್ಷಗಳಲ್ಲಿ ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಕೊಳವೆ ಬಾವಿಕೊರೆದಿಲ್ಲ.

ಸರ್ಕಾರದ ನಿರ್ಲಕ್ಷ್ಯ: ‘ಪರಿಶಿಷ್ಟ ಮುದಾಯದ ನಾಲ್ಕು ನಿಗಮಗಳ ವತಿಯಿಂದ 4 ವರ್ಷಗಳ ಹಿಂದೆ 2018-19ನೇ ಸಾಲಿನಲ್ಲಿ ಕೊರೆದ ಕೊಳವೆಬಾವಿಗಳಿಗೆ ಸರ್ಕಾರ ಇದುವರೆಗೂ ಪಂಪ್, ಮೋಟರ್ ಕೊಟ್ಟಿಲ್ಲ. 3 ವರ್ಷಗಳಿಂದ ಬೆರಳೆಣಿಕೆಯಷ್ಟು ಪಲಾನುಭವಿಗಳನ್ನು ಆಯ್ಕೆ ಮಾಡಿದ್ದು ಆಫಲಾನುಭವಿಗಳ ಪೈಕಿ ಒಬ್ಬರಿಗೂ ಸಹ 3 ವರ್ಷಗಳಿಂದ ಕೊಳವೆಬಾವಿಕೊರೆದಿಲ್ಲ. ಪರಿಶಿಷ್ಟರ ಬದುಕನ್ನು ಹಸನಾಗಿಸುವ ಸರ್ಕಾರದ ಮಹತ್ವದ ಗಂಗಾಕಲ್ಯಾಣ ಯೋಜನೆ ಜಿಲ್ಲೆಯಲ್ಲಿ ಸ್ಥಗಿತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲ ಶಾಸಕ, ಸಂಸದರು ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಬೇರೆ ಯೋಜನೆಗಳಿಗೆ ನೂರಾರು ಕೋಟಿ ಖರ್ಚು ಮಾಡುವ ಸರ್ಕಾರ ಬಡ ಪರಿಶಿಷ್ಟರಿಗೆ ಅನುದಾನ ನೀಡದೇ ಸತಾಯಿಸುತ್ತಿರುವುದು ಖಂಡನೀಯ’ ಎಂದು ಭೋವಿ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಎಚ್. ಜಯಣ್ಣ ಆರೋಪಿಸಿದ್ದಾರೆ.

ಏಜೆನ್ಸಿ ನಿಗದಿಯಾಗದ ಕಾರಣ ಸಮಸ್ಯೆ
‘2018-19ನೇ ಸಾಲಿನ 384 ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆದಿದ್ದು, ಏಜೆನ್ಸಿ ನಿಗದಿಯಾಗದ ಕಾರಣ ಪಂಪ್ ಮೋಟರ್ ಸಾಮಗ್ರಿ ವಿತರಿಸಲಾಗಿಲ್ಲ. ಶೇ 75ರಷ್ಟು ಫಲಾನುಭವಿಗಳಿಗೆ ಬೆಸ್ಕಾಂನಿಂದ ವಿದ್ಯುದೀಕರಣಕ್ಕೆ ಕ್ರಮ ಕೈಗೊಂಡಿದ್ದು, ಆರ್.ಆರ್. ಸಂಖ್ಯೆ ನೀಡಲಾಗಿದೆ. 134 ಫಲಾನುಭವಿಗಳಿಗೆ ಸಾಮಗ್ರಿ ವಿತರಣೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶ ನೀಡಲಾಗಿದೆ. ಬೋರ್ ವೆಲ್ ಏಜೆನ್ಸಿ ನಿಗದಿಯಾಗದ ಕಾರಣ 2019-20, 2020-21 ಹಾಗೂ 2021-22ನೇ ಸಾಲಿನ ಫಲಾನುಭವಿಗಳ ಕೊಳವೆಬಾವಿ ಕೊರೆದಿಲ್ಲ. ಏಜೆನ್ಸಿ ನಿಗದಿಯಾದ ಕೂಡಲೇ ಕೊಳವೆ ಬಾವಿ ಕೊರೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ. ರಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT