ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ, ಕಂದಾಚಾರ ನಿರ್ಮೂಲನೆಗೆ ವಿದ್ಯಾವಂತರಾಗಿ: ಸ್ವಾಮೀಜಿ

Published 11 ಸೆಪ್ಟೆಂಬರ್ 2023, 5:15 IST
Last Updated 11 ಸೆಪ್ಟೆಂಬರ್ 2023, 5:15 IST
ಅಕ್ಷರ ಗಾತ್ರ

ದಾವಣಗೆರೆ: ‘ಇಂದಿನ ದಿನಗಳಲ್ಲಿ ವಿದ್ಯಾವಂತರಾಗದಿದ್ದರೆ, ಮುಂದಿನ ದಿನಗಳಲ್ಲಿ ತುಂಬಾ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಮಾದಿಗ ದಂಡೋರ ವತಿಯಿಂದ ರೋಟರಿ ಬಾಲಭವನದಲ್ಲಿ 2022–23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಸಮಾಜದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾವಂತರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ, ಸಮಾಜದಲ್ಲಿ ನಿಮಗೆ‌ ಎಲ್ಲಾ ರೀತಿಯ ಗೌರವ ಪ್ರಾಪ್ತಿಯಾಗುತ್ತದೆ’ ಎಂದರು.

‘ಸಮಾಜ ಅನುಭವಿಸುತ್ತಿರುವ ಅಸ್ಪೃಶ್ಯತೆಯನ್ನು ತೊಡೆದುಹಾಕಬೇಕಾದರೆ ನಿಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ವಿದ್ಯಾವಂತರಾದರೆ ಅಸ್ಪೃಶ್ಯತೆ, ಕಂದಾಚಾರ ತಾವಾಗಿಯೇ ನಿರ್ಮೂಲನೆಯಾಗುತ್ತವೆ. ವಿದ್ಯಾರ್ಥಿಗಳ ತಂದೆ-ತಾಯಂದಿರು ತಮ್ಮ ದುಡಿಮೆಯ ಹಣವನ್ನು ದುಂದುವೆಚ್ಚ ಮಾಡದೇ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಮೂಲಕ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ತುಳಿತಕ್ಕೆ ಒಳಗಾದ ಸಮಾಜದ ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದಿನ ದಿನಗಳಲ್ಲಿ ಚಿಂತನೆ ನಡೆಸುತ್ತೇವೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಇನ್‌ಸೈಟ್ ಐಎಎಸ್ ಸಂಸ್ಥಾಪಕ  ಜಿ.ಬಿ. ವಿನಯ್ ಕುಮಾರ್ ತಿಳಿಸಿದರು.

‘ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಒತ್ತು ನೀಡದೇ ಮೊಬೈಲ್‌ಗಳಿಗೆ ಹೆಚ್ಚಿನ ಸಮಯ ನೀಡುತ್ತಿರುವುದು ಆತಂಕ ಸಂಗತಿ.  ಆದ್ದರಿಂದ ಮಕ್ಕಳ ಮೇಲೆ ಪೋಷಕರು ಗಮನ ಹರಿಸಬೇಕು’ ಎಂದು ಕಾಂಗ್ರೆಸ್ ಮುಖಂಡರಾದ ಜಸ್ಟಿನ್ ಜಯಕುಮಾರ್ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಬಸವರಾಜಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ಕೆ.ಎಸ್. ಬಸವಂತಪ್ಪ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಎಚ್.ಸಿ. ಗುಡ್ಡಪ್ಪ ಅಧ್ಯಕ್ಷೆ ವಹಿಸಿದ್ದರು. ಜಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಎಚ್.ಮಹೇಶ್, ಈಚಗಟ್ಟ ಕೆಂಚಪ್ಪ, ಕಣವಿಹಳ್ಳಿ ಮಂಜುನಾಥ್, ಜಿ.ಎಚ್. ತಮ್ಮಣ್ಣ, ಬಿ.ಎಸ್. ಕೃಷ್ಣಮೂರ್ತಿ, ಎಚ್. ಚಿದಾನಂದಪ್ಪ, ಗಂಗನಕಟ್ಟಿ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT