ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಟ್ಟಿಕೊಳ್ಳಲು ತ್ರಿಚಕ್ರವಾಹನ ನೀಡಿ

ವಿಶ್ವ ಬೆನ್ನುಹುರಿ ಅಪಘಾತ ತಡೆ ದಿನಾಚರಣೆಯಲ್ಲಿ ಅಂಗವಿಕಲರ ಆಗ್ರಹ
Last Updated 5 ಸೆಪ್ಟೆಂಬರ್ 2018, 15:36 IST
ಅಕ್ಷರ ಗಾತ್ರ

ದಾವಣಗೆರೆ: ಸ್ವ ಉದ್ಯೋಗ ನಡೆಸಲು ಇಚ್ಚಿಸುವ ಅಂಗವಿಕಲರಿಗೆ ವಿಜಯಪುರ ಮತ್ತಿತರ ಜಿಲ್ಲೆಗಳಲ್ಲಿ ತ್ರಿಚಕ್ರ ವಾಹನ ನೀಡಲಾಗುತ್ತಿದೆ. ಆದರೆ ದಾವಣಗೆರೆಯಲ್ಲಿ ಕೆಲವರಿಗಷ್ಟೇ ನೀಡಲಾಗಿದ್ದು, ಬಹಳ ಮಂದಿಗೆ ನೀಡಿಲ್ಲ ಎಂದು ಚಂದ್ರನಾಯ್ಕ ಮತ್ತು ಮಂಜುನಾಥ ಅಳಲು ತೋಡಿಕೊಂಡರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಜಿಲ್ಲಾ ಅಂಗವಿಕಲರ ಸಂಘ, ದಿ. ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ (ಎಪಿಡಿ) ಸಹಯೋಗದಲ್ಲಿ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವಬೆನ್ನುಹುರಿ ಅಪಘಾತಕ್ಕೊಳಗಾದವರ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಭಿಕರಾಗಿ ಭಾಗವಹಿಸಿ ಅತಿಥಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಡಾ.ಜಿ.ಎಸ್‌. ಶಶೀಧರ್‌ ಅಂಗವಿಕಲರ ಸೌಲಭ್ಯಗಳ ಮಾಹಿತಿ ನೀಡುತ್ತಾ, ಹಲವರಿಗೆ ತ್ರಿಚಕ್ರ ವಾಹನ ನೀಡಲಾಗಿದೆ ಎಂದು ತಿಳಿಸಿದರು. ಆಗ ಈ ಚರ್ಚೆಗಳು ನಡೆದವು.

ತ್ರಿಚಕ್ರ ನೀಡುವ ಮೊದಲು ಪರೀಕ್ಷೆಗಳು ನಡೆಯುತ್ತವೆ. ವೀಲ್‌ಚಯರ್‌ ಹತ್ತಲೂ ಕಷ್ಟಪಡುವವರಿಗೆ ತ್ರಿಚಕ್ರ ವಾಹನ ನೀಡಿದರೆ ಅದಕ್ಕೆ ಹತ್ತುವುದು ಇನ್ನೂ ಕಷ್ಟ. ವೈದ್ಯರ ಸಲಹೆ ಪಡೆದೇ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದು ಶಶೀಧರ್‌ ಉತ್ತರ ನೀಡಿದರು.

ನಮಗೆ ಸ್ನೇಹಿತರು ಇದ್ದಾರೆ. ನಾವು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ. ಬೇರೆ ಜಿಲ್ಲೆಗಳಲ್ಲಿ ಇಲ್ಲದ ನಿರ್ಬಂಧ ಇಲ್ಲಿ ಯಾಕೆ? ನಾವು ಬದುಕಲ್ಲಿ ಮುಂದೆ ಬರುವುದು ಹೇಗೆ ಎಂದು ಪ್ರಶ್ನಿಸಿದರು.

ನಿಮ್ಮ ಬೇಡಿಕೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಂದೆ ಇಡಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಅಂಗವಿಕಲರನ್ನು ಮದುವೆಯಾದರೆ ₹ 50 ಸಾವಿರ ಸಹಾಯಧನ ನೀಡಲಾಗುತ್ತಿದೆ. ಶೇ 50ರಷ್ಟು ವೈಕಲ್ಯ ಇದ್ದವರನ್ನು ಮದುವೆ ಸಮಸ್ಯೆಯಾಗಿಲ್ಲ. ಆದರೆ ಶೇ 75ಕ್ಕಿಂತ ಅಧಿಕ ವೈಕಲ್ಯ ಇದ್ದಾಗ ಅವರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಶೇ 75ಕ್ಕಿಂತ ಹೆಚ್ಚು ಅಂಗವೈಕಲ್ಯ ಇದ್ದವರಿಗೆ ₹ 2 ಸಹಾಯಧನ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ಅದೇ ರೀತಿ ಅಂಗವಿಕಲರ ಪಿಂಚಣಿಯನ್ನು ₹1,400 ಇರುವುದನ್ನು ₹ 3,000ಕ್ಕೆ ಏರಿಸಲು ಪತ್ರ ಬರೆಯಲಾಗಿದೆ ಎಂದು ಶಶಿಧರ್‌ ಮಾಹಿತಿ ನೀಡಿದರು.

ಡಿಎಚ್‌ಒ ಡಾ.ತ್ರಿಪುಲಾಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ನಿಮ್ಮ ಜತೆ ಆರೋಗ್ಯ ಇಲಾಖೆ ಎಂದೆಂದಿಗೂ ಇದೆ. ಎಲ್ಲರೂ ಮೆಡಿಕಲ್‌ ಕಿಟ್‌ ಸೌಲಭ್ಯವನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.

ಎಪಿಡಿ ಉಪನಿರ್ದೇಶಕ ಶಿವ ಸಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ, ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ ಎಲ್‌ ಪಾಟೀಲ್‌, ಎಪಿಡಿ ದಾವಣಗೆರೆ ಶಾಖಾ ವ್ಯವಸ್ಥಾಪಕ ಬಿ.ಜೆ. ರವಿಕುಮಾರ್‌, ನಿಂಗಪ್ಪ ಕೆ. ದೊಡ್ಡಮನಿ ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಜಿಲ್ಲಾ ಅಂಗವಿಕಲರ ಸಂಘ ಅಧ್ಯಕ್ಷ ಟಿ.ಜೆ. ಗಿರೀಶ್‌ ಸ್ವಾಗತಿಸಿದರು. ಹೆವನ್ನಾ ಬಾಬು ವಂದಿಸಿದರು. ಸುರೇಶ್‌ ಎನ್‌.ಜಿ. ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕಿಂತ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ವಿಶ್ವಬೆನ್ನುಹುರಿ ಅಪಘಾತ ತಡೆ ಜಾಗೃತಿ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT