ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಂ ಸೀಡರ್‌ನಿಂದ ಉತ್ತಮ ಇಳುವರಿ- ಕಾರಿಗನೂರಿನ ರೈತ ಡಿ.ವಿ.ರುದ್ರೇಶ್ ಸಾಧನೆ

ಕಾರಿಗನೂರಿನ ರೈತ ಡಿ.ವಿ.ರುದ್ರೇಶ್ ಸಾಧನೆ
Last Updated 11 ಮೇ 2022, 2:59 IST
ಅಕ್ಷರ ಗಾತ್ರ

ಬಸವಾಪಟ್ಟಣ: ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುತ್ತಾ ಯಶಸ್ಸು ಸಾಧಿಸುತ್ತಿರುವ ಪ್ರಗತಿಪರ ರೈತರ ಗ್ರಾಮವಾದ ಕಾರಿಗನೂರಿನ ಡಿ.ವಿ. ರುದ್ರೇಶ್‌ ಡ್ರಂ ಸೀಡರ್‌ ಬಿತ್ತನೆಯಿಂದ ಬೇಸಿಗೆ ಭತ್ತದ ಬೆಳೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ.

ಆರು ದಶಕಗಳಿಂದ ಭತ್ತದ ಬೆಳೆಯಲ್ಲಿ ಸಾಂಪ್ರದಾಯಕವಾಗಿದ್ದ ನಾಟಿ ಪದ್ಧತಿಗೆ ಬದಲಾಗಿ ‘ಡ್ರಂ ಸೀಡರ್‌’ ಉಪಕರಣ ಬಳಸಿ ಬಿತ್ತನೆ ಮಾಡಿದ ರುದ್ರೇಶ್‌ ನಾಟಿಗಾಗಿ ಖರ್ಚು ಮಾಡುತ್ತಿದ್ದ ಸಾಕಷ್ಟು ಪ್ರಮಾಣದ ಹಣವನ್ನು ಉಳಿತಾಯ ಮಾಡುವುದರೊಂದಿಗೆ ಹೆಚ್ಚಿನ ಇಳುವರಿಯನ್ನೂ ಪಡೆದಿದ್ದಾರೆ.

‘ಕಾರಿಗನೂರಿನ ನೇಗಿಲಯೋಗಿ ಸಂಘವು ತರಿಸಿದ್ದ ಡ್ರಂ ಸೀಡರ್‌ನಿಂದ ನಾನು ಮೂರು ಎಕರೆ ಪ್ರದೇಶದಲ್ಲಿ ಒಂದು ಎಕರೆಗೆ 10 ಕಿಲೋದಂತೆ ಆರ್‌.ಎನ್‌.ಆರ್‌.ತಳಿಯ ಭತ್ತದ ಬೀಜವನ್ನು ಬಿತ್ತನೆ ಮಾಡಿದ್ದು, ನಾಟಿ ಮಾಡುವಾಗ ಬಳಸುವಂತೆ ಇದರಲ್ಲಿ ಯಾವುದೇ ಗೊಬ್ಬರವನ್ನು ಬಳಸಿಲ್ಲ. ಬಿತ್ತನೆಯಾದ ನಂತರ 25 ದಿನಕ್ಕೆ ಎಕರೆಗೆ 40 ಕೆ.ಜಿ.ಯೂರಿಯಾ, ಮತ್ತೆ 25 ದಿನದ ನಂತರ 40 ಕಿಲೋ ಯೂರಿಯಾ 25 ದಿನಗಳ ನಂತರ 50 ಕೆ.ಜಿಯಷ್ಟು ಡಿ.ಎ.ಪಿ.25 ಕೆ.ಜಿ.ಯೂರಿಯಾ, 25 ಕೆ.ಜಿ.ಪೊಟ್ಯಾಷ್‌ ಬಳಸಿದ್ದೇನೆ. ಒಮ್ಮೆ ಮಾತ್ರ ಕಳೆನಾಶಕ ಬಳಸಲಾಗಿದ್ದು, ಗೊಬ್ಬರ ಬಳಕೆಯಲ್ಲಿ ಶೇಕಡ 60ರಷ್ಟು ಉಳಿತಾಯವಾಗಿದೆ’ ಎನ್ನುತ್ತಾರೆ.

‘ಈ ಪದ್ಧತಿಯಲ್ಲಿ ಹೆಚ್ಚಿನ ಕೂಲಿಕಾರರ ಅವಶ್ಯಕತೆ ಇಲ್ಲ. ಒಬ್ಬನೇ ವ್ಯಕ್ತಿ ಭತ್ತದ ಬೀಜ ತುಂಬಿದ ಈ ಡ್ರಂ ಸೀಡರ್‌ ಎಳೆಯುತ್ತಾ ಒಂದು ದಿನಕ್ಕೆ ಮೂರು ಎಕರೆ ನಾಟಿ ಮಾಡಬಹುದು. ಈ ಕೃಷಿಗೆ ಮನೆಯಲ್ಲಿರುವ ಇಬ್ಬರು ವ್ಯಕ್ತಿಗಳು ಸಾಕು. ಈ ಪದ್ಧತಿಯಲ್ಲಿ ರೈತರಿಗೆ ಯಾವುದೇ ಮಾನಸಿಕ ಒತ್ತಡ ಕಂಡುಬರುವುದಿಲ್ಲ. ಈ ಬಾರಿ ಎಕರೆಗೆ 30 ಕ್ವಿಂಟಲ್‌ ಇಳುವರಿಯ ನಿರೀಕ್ಷೆ ಇದ್ದು, ಮುಂದಿನ ವಾರದಲ್ಲಿ ಕೊಯಿಲು ಆರಂಭವಾಗಲಿದೆ. ನಮ್ಮ ಗ್ರಾಮದ ನೇಗಿಲಯೋಗಿ ಸಂಘದ ಸದಸ್ಯರು ಹಾಗೂ ನನ್ನ ಬಂಧು ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತ ರೈತ ಟಿ.ವಿ. ರುದ್ರೇಶ್‌ ನನಗೆ ಈ ಕೃಷಿಯಲ್ಲಿ ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಡಿ.ವಿ. ರುದ್ರೇಶ್‌

‘ಕೃಷಿ ತಂತ್ರ ಜ್ಞಾನ ನಿಂತ ನೀರಲ್ಲ. ರೈತ ನಿರಂತರವಾಗಿ ಪ್ರಯೋಗಶೀಲನಾಗಿರಬೇಕು. ಈಗ ನಮ್ಮ ಸಂಘದ ಎಂಟರಿಂದ 10 ಜನ ಡ್ರಂ ಸೀಡರ್‌ ಬಳಸಿ ಭತ್ತ ಬಿತ್ತನೆ ಮಾಡಿ ಯಶಸ್ಸು ಸಾಧಿಸಿದ್ದಾರೆ. ಎಲ್ಲರೂ ಈ ಪದ್ಧತಿಯನ್ನು ಅನುಸರಿಸಿ, ಕೃಷಿಯ ನಷ್ಟವನ್ನು ತಗ್ಗಿಸಿ ಲಾಭದತ್ತ ಮುನ್ನಡೆಯಬೇಕು’ ಎನ್ನುತ್ತಾರೆ ನೇಗಿಲಯೋಗಿ ಸಂಘದ ಅಧ್ಯಕ್ಷ ಬಸವರಾಜಪ್ಪ ಕಾರ್ಯದರ್ಶಿ ತಿಪ್ಪೇಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT