ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ರಾಜಕಾರಣದಿಂದ ಮೀಸಲಾತಿ ಕಸಿದ ಸರ್ಕಾರ: ಮೌಲಾನಾ ಇಬ್ರಾಹಿಂ ಸಖಾಫಿ

ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಧರ್ಮಗುರು ಮೌಲಾನಾ ಇಬ್ರಾಹಿಂ ಸಖಾಫಿ
Last Updated 1 ಏಪ್ರಿಲ್ 2023, 6:57 IST
ಅಕ್ಷರ ಗಾತ್ರ

ದಾವಣಗೆರೆ: ಮುಸ್ಲಿಮರು ಬಿಜೆಪಿಗೆ ವೋಟು ಹಾಕುವುದಿಲ್ಲ ಎಂಬ ದ್ವೇಷ ರಾಜಕಾರಣದಿಂದ ಮುಸ್ಲಿಮರ ‘2 ಬಿ’ ಮೀಸಲಾತಿಯನ್ನು ರದ್ದುಪಡಿಸಲಾಗಿದೆ ಎಂದು ಮುಸ್ಲಿಂ ಧರ್ಮಗುರು ಮೌಲಾನಾ ಇಬ್ರಾಹಿಂ ಸಖಾಫಿ ಆರೋಪಿಸಿದರು.

ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ ಮಿಲಾದ್‌ ಮೈದಾನದಲ್ಲಿ ಶುಕ್ರವಾರ ತಂಜೀಮುಲ್‌–ಮುಸ್ಲಿಮೀನ್ ಫಂಡ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಮಗೆ ಧಾರ್ಮಿಕ ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ಮೀಸಲಾತಿ ಕೊಡುವುದು ಬೇಡ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಸಮುದಾಯ ಹಿಂದುಳಿದಿರುವ ಕಾರಣಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ‘ ಎಂದು ಹೇಳಿದರು.

‘ಯಾವ ಕಾರಣಕ್ಕೆ ಮೀಸಲಾತಿಯನ್ನು ಕಸಿದುಕೊಳ್ಳಲಾಗಿದೆ ಎಂಬುದನ್ನು ಹೇಳಲಿ. ಮೀಸಲಾತಿ ಪಡೆದು ಮುಸ್ಲಿಂ ನೌಕರರು ಹೆಚ್ಚಿದ್ದಾರಾ? ಉನ್ನತ ಸ್ಥಾನಕ್ಕೆ ಹೋಗಿದ್ದಾರಾ? ಸಮುದಾಯ ಇನ್ನೂ ಹಿಂದುಳಿದಿದೆ. ಮೀಸಲಾತಿ ರದ್ದುಪಡಿಸಿರುವುದು ಖಂಡನೀಯ. ಈ ಬಗ್ಗೆ ಪುನರ್‌ ಚಿಂತನೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಬೇರೆಯವರ ಹಕ್ಕು ಕೊಡಿ ಎಂದು ಕೇಳಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಪೂರ್ವಜರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಈ ದೇಶ ನಮ್ಮದು. ನಮ್ಮ ದೇಶದಲ್ಲಿ ನಾವು ಹಕ್ಕು ಕೇಳದೆ ಬೇರೆ ಯಾವ ದೇಶದಲ್ಲಿ ಕೇಳಬೇಕು’ ಎಂದು ಅವರು ಪ್ರಶ್ನಿಸಿದರು.

ಮುಖಂಡರು, ಕಾನೂನು ತಜ್ಞರು ಸೇರಿದಂತೆ ಯಾರೊಂದಿಗೂ ಚರ್ಚಿಸದೇ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದರು.

‘ಮೀಸಲಾತಿ ಪುನರ್ ಸ್ಥಾಪಿಸು ವವರೆಗೆ ಶಾಂತಿಯುತ, ನ್ಯಾಯುಯುತ, ಕಾನೂನಾತ್ಮಕ ಹೋರಾಟ ನಡೆಸೋಣ’ ಎಂದು ಅವರು ಕರೆ ನೀಡಿದರು.

‘ಇದು ಕರಾಳ ದಿನ. ಮೀಸಲಾತಿ ಕಸಿದು ಸಮುದಾಯಕ್ಕೆ ದ್ರೋಹ ಬಗೆಯಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರದ ದಾಹದಿಂದ ಮುಸ್ಲಿಂ ಸಮುದಾಯವನ್ನು ನಿರ್ನಾಮ ಮಾಡಲು ಹೊರಟಿದೆ. ನಾವು ಲಿಂಗಾಯತರು, ಒಕ್ಕಲಿಗರ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ನಾವೆಲ್ಲಾ ಒಂದಾಗಿ ಬಾಳುತ್ತಿದ್ದೇವೆ. ಮೀಸಲಾತಿ ಕಸಿದು ನಮ್ಮ ನಮ್ಮಲ್ಲಿ ಜಗಳ ಹಚ್ಚಲು ಹುನ್ನಾರ ನಡೆಸಲಾಗಿದೆ’ ಎಂದು ಮಿಲ್ಲತ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಸೈಯದ್
ಸೈಫುಲ್ಲಾ ಆರೋಪಿಸಿದರು.

‘ಹಲಾಲ್‌, ಹಿಜಾಬ್‌ ಎಂದು ಹಲವು ರೀತಿಯ ತೊಂದರೆ ಕೊಟ್ಟರೂ ನಾವು ಪ್ರತಿರೋಧ ತೋರಲಿಲ್ಲ. ಈಗ ಮೀಸಲಾತಿ ಕಸಿದು ನಮಗೆ ಅನ್ಯಾಯ ಮಾಡಲಾಗಿದೆ. ನಾವು ನಮ್ಮ ಹಕ್ಕಿಗಾಗಿ ಹೋರಾಡಬೇಕು. ಮೀಸಲಾತಿ ಕಸಿದವರಿಗೆ ತಕ್ಕ ಪಾಠ ಕಲಿಸಬೇಕು‘ ಎಂದು ಹೇಳಿದರು.

‘1917ರಲ್ಲಿ ಮೈಸೂರು ಮಹಾರಾಜರು ಮುಸ್ಲಿಂ ಸಮುದಾಯದ ಸ್ಥಿತಿಗತಿಗಳ ಅಧ್ಯಯನಕ್ಕೆ ಮಿಲ್ಲರ್ ಆಯೋಗ ರಚಿಸಿ ಮೀಸಲಾತಿ ಕಲ್ಪಿಸಿದರು. ಬಳಿಕ ಹಲವು ಆಯೋಗಗಳ ವರದಿ ಅಧರಿಸಿ ಹಿಂದಿನ ಸರ್ಕಾರಗಳು ಮೀಸಲಾತಿ ಕಲ್ಪಿಸಿವೆ. ಮೀಸಲಾತಿಯಿಂದ ಮುಸ್ಲಿಂ ಸಮುದಾಯದ ಬಡ ಮಕ್ಕಳಿಗೆ ಅನುಕೂಲ ಆಗಲಿದೆ. ಸರ್ಕಾರಿ ಹುದ್ದೆಗಳಿಗೆ ಹೆಚ್ಚು ಜನರು ಸೇರುತ್ತಾರೆ. ಉನ್ನತ ಶಿಕ್ಷಣದಲ್ಲಿ ಮೀಸಲಾತಿಯಿಂದ ನಮ್ಮ ಮಕ್ಕಳು ವೈದ್ಯರು, ಎಂಜಿನಿಯರ್‌ಗಳಾ ಗಬಹುದು. ಮೀಸಲಾತಿ ಕಸಿದರೆ ಮುಂದಿನ ದಿನಗಳಲ್ಲಿ ಸಮುದಾಯದಲ್ಲಿ ವೈದ್ಯರು, ಎಂಜಿನಿಯರ್‌, ಸರ್ಕಾರಿ ನೌಕರರು ಕಾಣಸಿಗುವುದಿಲ್ಲ‘ ಎಂದು ಮಹಾನಗರ ಪಾಲಿಕೆ ಸದಸ್ಯ ಚಮನ್ ಸಾಬ್‌ ಎಚ್ಚರಿಸಿದರು.

‘ಶಾಂತಿಯುತವಾಗಿ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಸಿ ನಮ್ಮ ಹಕ್ಕೊತ್ತಾಯ ಮಂಡಿಸೋಣ‘ ಎಂದು ಅವರು ಸಲಹೆ ನೀಡಿದರು.

ವೇದಿಕೆಯಲ್ಲಿದ್ದ ಮುಖಂಡರು ಕಪ್ಪು ಪಟ್ಟಿ ಧರಿಸಿದ್ದರು. ಮುಸ್ಲಿಂ ಒಕ್ಕೂಟ ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳು ಸಾಥ್‌ ನೀಡಿದ್ದವು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಅಸೋಸಿಯೇಷನ್‌ ಅಧ್ಯಕ್ಷ ಶೇಖ್‌ ದಾದಾಪೀರ್‌, ಕಾರ್ಯದರ್ಶಿ ಸಾಬೀರ್‌ ಅಲಿಖಾನ್‌, ಜೆಡಿಎಸ್‌ ಮುಖಂಡ ಅಮಾನುಲ್ಲಾ ಖಾನ್‌, ಮಹಮದ್‌ ಜಬೀವುಲ್ಲಾ ಖಾನ್‌, ನಜೀರ್‌ ಅಹಮ್ಮದ್‌, ಎ.ಬಿ. ರಹೀಂ ಸಾಬ್, ಅಬ್ದುಲ್, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ವಿಶ್ವನಾಥ್, ಅಮ್ಜದ್‌ ಉಲ್ಲಾ ಖಾನ್‌ ಇದ್ದರು.

ಮೀಸಲಾತಿ ಭಿಕ್ಷೆಯಲ್ಲ, ಹಕ್ಕು

‘ಮೀಸಲಾತಿ ಮುಸ್ಲಿಮರಿಗೆ ನೀಡುವ ಭಿಕ್ಷೆಯಲ್ಲ. ಅದು ಅವರ ಆಜನ್ಮ ಸಿದ್ಧ ಹಕ್ಕು. ಮೀಸಲಾತಿ ಬಗ್ಗೆ ಸರ್ಕಾರಕ್ಕೆ ದ್ವಂದ್ವ ನಿಲುವು ಇದೆ. ಮೀಸಲಾತಿ ರದ್ದು ಪಡಿಸುವ ಮೂಲಕ ಸರ್ಕಾರ ದುಡಿಯುವ ವರ್ಗದ ಕಗ್ಗೊಲೆ ಮಾಡಿದೆ. ಎಲ್ಲ ಸಮುದಾಯದ ರಕ್ಷಣೆ ಸರ್ಕಾರದ ಕರ್ತವ್ಯ. ಈ ಬಗ್ಗೆ ಗಮನಹರಿಸಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ.ವಿಶ್ವನಾಥ್ ಹೇಳಿದರು.

‘ವರ್ಷದ ಹಿಂದೆ ಮುಸ್ಲಿಮರ ಮೀಸಲಾತಿ ಕಸಿಯುವ ಮಾತು ಕೇಳಿಬಂದಿತ್ತು. ಆಗಲೇ ಸಮುದಾಯ ಎಚ್ಚೆತ್ತುಕೊಂಡಿದ್ದರೆ ಈಗ ಇದು ಆಗುತ್ತಿರಲಿಲ್ಲ. ಇನ್ನಾದರೂ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹಕ್ಕನ್ನು ಸಂಪೂರ್ಣ ಕಸಿದುಕೊಳ್ಳಲಾಗುತ್ತದೆ. ನ್ಯಾಯಯುತ ಹಕ್ಕು ಪಡೆಯಲು ಶಾಂತಿಯುತ ಹೋರಾಟಕ್ಕೆ ಮುಂದಾಗಬೇಕು‘ ಎಂದು ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾ ಖಾನ್‌ ಸಲಹೆ ನೀಡಿದರು.

ಧರ್ಮ, ಜಾತಿ ಹೆಸರಿನಲ್ಲಿ ಮುಸ್ಲಿಂ ಯುವಕರು ಉದ್ರೇಕಕ್ಕೆ ಒಳಗಾಗಬಾರದು. ಯಾರದೋ ಮಾತಿಗೆ ಮರುಳಾಗಿ ನಿಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ. ಶಾಂತಿಯುತ ಹೋರಾಟಕ್ಕೆ ಕೈಜೋಡಿಸಿ.

ಕೆ.ಚಮನ್ ಸಾಬ್, ಮಹಾನಗರ ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT