ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಚೌತಿ ಹಬ್ಬಕ್ಕೆ ಚಂದದ ಮೂರ್ತಿ ಸಿದ್ಧ

ಗಣೇಶ ಉತ್ಸವಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ, ಗಣಪನಿಗೆ ಹಲವು ರೂಪ
Published 6 ಸೆಪ್ಟೆಂಬರ್ 2024, 6:56 IST
Last Updated 6 ಸೆಪ್ಟೆಂಬರ್ 2024, 6:56 IST
ಅಕ್ಷರ ಗಾತ್ರ

ದಾವಣಗೆರೆ: ಗಣೇಶ ಉತ್ಸವಕ್ಕೆ ಜಿಲ್ಲೆಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮಂಟಪ ನಿರ್ಮಾಣ, ಮೂರ್ತಿ ಆಯ್ಕೆ, ಪ್ರತಿಷ್ಠಾಪನೆಗೆ ಅನುಮತಿ ಪಡೆಯುವ ಪ್ರಕ್ರಿಯೆಗಳು ಚುರುಕು ಪಡೆದಿವೆ. ಮನೆ–ಮನಗಳನ್ನು ತುಂಬಲು ಗಣಪನ ಮೂರ್ತಿಗಳು ಸಜ್ಜುಗೊಂಡಿವೆ. ಕೋಲ್ಕತ್ತ, ಮಹಾರಾಷ್ಟ್ರದ ಗಣೇಶ ಮೂರ್ತಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.

ಗಣೇಶ ಚತುರ್ಥಿಗೆ ಮೂರ್ತಿಗಳನ್ನು ತಯಾರಿಸುವ ಹಲವು ಕುಟುಂಬಗಳು ದೇವನಗರಿಯಲ್ಲಿವೆ. ಹಳೆ ದಾವಣಗೆರೆಯ ಕಾಯಿಪೇಟೆ, ಶಾವಿಗೇರ ಪೇಟೆ, ಭಾರತ್‌ ಕಾಲೊನಿ ಸೇರಿ ಹಲವೆಡೆ ಕಣ್ಮನ ಸೆಳೆಯುವ ಮೂರ್ತಿಗಳಿವೆ. ಜೇಡಿ ಮಣ್ಣಿನಿಂದ ತಯಾರಿಸಿದ ಈ ಸಾಂಪ್ರದಾಯಿಕ ಗಣೇಶನಿಗಿಂತ ಹೊರರಾಜ್ಯದ ಮೂರ್ತಿಗಳು ಸ್ಥಳೀಯರ ಮನ ಗೆದ್ದಿವೆ. ಮನೆಗೆ ಜೇಡಿಮಣ್ಣಿನ ಗಣಪ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದ ಗಣಪ ಸಜ್ಜಾಗಿವೆ.

ಸೆ. 7ರಂದು ನಡೆಯುವ ಗಣೇಶ ಹಬ್ಬಕ್ಕೆ ಎಲ್ಲೆಡೆ ಸಿದ್ಧತೆ ಜೋರಾಗಿದೆ. ಸಾರ್ವಜನಿಕವಾಗಿ ಗಣಪತಿ ಕೂರಿಸುವಲ್ಲಿ ಉತ್ಸವ ಸಮಿತಿಗಳು ಬಿಡುವಿಲ್ಲದೇ ಕೆಲಸ ಮಾಡುತ್ತಿವೆ. ಹೈಸ್ಕೂಲು ಮೈದಾನ, ವಿದ್ಯಾನಗರ, ಆಂಜನೇಯ ಬಡಾವಣೆ, ಪಿಜೆ ಬಡಾವಣೆ, ಎಂಸಿಸಿ ಬಡಾವಣೆ, ಎಸ್‌ಎಸ್‌ ಬಡಾವಣೆ, ಶಿವಾಜಿ ನಗರ ಸೇರಿ ಅನೇಕ ಸ್ಥಳಗಳಲ್ಲಿ ಸಾರ್ವಜನಿಕ ಗಣಪನ ಪ್ರತಿಷ್ಠಾನೆಗೆ ಮಂಟಪ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಮಿಯಾನ, ವಿದ್ಯುತ್‌ ದೀಪಾಲಂಕಾರಕ್ಕೆ ತಯಾರಿಗಳು ಜೋರಾಗಿವೆ. 45 ವಾರ್ಡ್‌ ವ್ಯಾಪ್ತಿಯಲ್ಲಿ 250ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗಲಿವೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪರಿಸರ ಸ್ನೇಹಿ ಗಣೇಶನ ಆರಾಧನೆಗೆ ಮಹಾನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಾಗೃತಿ ಮೂಡಿಸುತ್ತಿದೆ. ಪ್ಲಾಸ್ಟರ್ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿ, ಮಾರಕ ಬಣ್ಣ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಮಂಟಪ ನಿರ್ಮಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಅನುಮತಿ ಪಡೆದು ವಿದ್ಯುತ್‌ ಸಂಪರ್ಕ ಕಲ್ಪಿಸಿ ಕೊಳ್ಳುವಂತೆ ‘ಬೆಸ್ಕಾಂ’ ಸಲಹೆ ಕೊಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಮೂರ್ತಿ ತಯಾರಕರು ಮೂರು ತಿಂಗಳ ಹಿಂದಿನಿಂದಲೇ ಕೆಲಸ ಆರಂಭಿಸುತ್ತಾರೆ. ಜೇಡಿಮಣ್ಣು, ಪರಿಕರ, ಬಣ್ಣ ಸೇರಿ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಎರಡು ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ಈ ಬಾರಿ ಮಣ್ಣು ಸಂಗ್ರಹಕ್ಕೆ ತೊಂದರೆ ಉಂಟಾಗಿದೆ. ವರುಣನ ಕೃಪೆಯಿಂದಾಗಿ ರೈತರು ಹರ್ಷಗೊಂಡಿದ್ದು ಉತ್ಸವ ಕಳೆಗಟ್ಟುವ ಲಕ್ಷಣಗಳು ಗೋಚರಿಸಿವೆ.

ದುರ್ಗಾದೇವಿ ಆರಾಧಕರ ಕೈಚಳಕ

ಪಶ್ಚಿಮ ಬಂಗಾಳದಲ್ಲಿ ದುರ್ಗಾದೇವಿ ಮೂರ್ತಿಗಳನ್ನು ತಯಾರಿಸುವ ಕಲಾವಿದರು ಗಣೇಶ ಮೂರ್ತಿ ಸಿದ್ಧಪಡಿಸಿದ್ದಾರೆ. ಇವರ ಕೈಚಳಕದಲ್ಲಿ ಅರಳಿದ ಮೂರ್ತಿಗಳು ಭಕ್ತರ ಮನಸೂರೆಗೊಂಡಿವೆ.

ಪಿ.ಜೆ. ಬಡಾವಣೆಯ ಪಿಸಾಳೆ ಕಾಂಪೌಂಡ್‌ ಸಮೀಪದಲ್ಲಿ ಟೆಂಟ್‌ ಹಾಕಿಕೊಂಡಿರುವ ಕಲಾವಿದರು ಮೂರು ತಿಂಗಳಿಂದ ಮೂರ್ತಿ ತಯಾರಿಕೆಯ ಕಾಯಕದಲ್ಲಿ ತೊಡಗಿದ್ದಾರೆ. ಹುಲ್ಲು, ಕಟ್ಟಿಗೆ, ನಾರು ಹಾಗೂ ಮಣ್ಣು ಬಳಸಿ ತಯಾರಿಸುವ ಗಣಪನ ರೂಪಗಳು ಕಣ್ಮನ ಸೆಳೆಯುತ್ತಿವೆ. ಮೂರು ಅಡಿಯಿಂದ 20 ಅಡಿಯವರೆಗೆ ಇಲ್ಲಿ ಮೂರ್ತಿಗಳಿವೆ.

‘ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದೇವೆ. ಹಬ್ಬಕ್ಕೂ ಕೆಲ ತಿಂಗಳು ಮೊದಲು ಇಲ್ಲಿಗೆ ಬರುತ್ತೇವೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳ ಭಕ್ತರು ಈ ಮೂರ್ತಿಗಳನ್ನು ಇಷ್ಟಪಡುತ್ತಾರೆ. ₹ 3 ಸಾವಿರದಿಂದ ₹ 80 ಸಾವಿರದವರೆಗೆ ಮೂರ್ತಿಗಳಿವೆ. ಹಲ್ಲು, ಹಗ್ಗ, ಕಟ್ಟಿಗೆ ಬಳಕೆ ಮಾಡುವುದರಿಂದ ಭಾರ ಕಡಿಮೆ’ ಎನ್ನುತ್ತಾರೆ ಕಲಾವಿದ ತಾರುಕ್‌ ಚಾಂದ್‌ಪಾಲ್‌.

ಮಹಾರಾಷ್ಟ್ರ ಮೂರ್ತಿಗೆ ಸೋಲುವ ಮನ

ಬೀರೇಶ್ವರ ದೇಗುಲದ ಬಳಿ ಮಹಾರಾಷ್ಟ್ರದ ಗಣೇಶ ಮೂರ್ತಿಗಳಿವೆ. ಹಳೆ ದಾವಣಗೆರೆಯ ಹಲವೆಡೆ ಈ ಮೂರ್ತಿಗಳು ಲಭ್ಯ ಇವೆ. ದೊಡ್ಡ ಹೊಟ್ಟೆ ಹಾಗೂ ಕಿವಿಗಳೇ ಇವುಗಳ ಆಕರ್ಷಣೆ.

‘ಗಣೇಶ ಮೂರ್ತಿ ತಯಾರಿಕೆ ಹಲವು ವರ್ಷಗಳಿಂದ ಮಾಡುತ್ತಿದ್ದೆ. ಆರೋಗ್ಯದ ಸಮಸ್ಯೆಯ ಬಳಿಕ ಮಹಾರಾಷ್ಟ್ರ ಮೂರ್ತಿಗಳನ್ನು ಖರೀದಿಸಿ ಮಾರಾಟ ಮಾಡಲು ಆರಂಭಿಸಿದೆ. ಮಣ್ಣು, ಸುಣ್ಣ ಹಾಗೂ ತೆಂಗಿನ ನಾರು ಬಳಸಿ ಪರಿಸರ ಸ್ನೇಹಿಯಾಗಿ ಇವುಗಳನ್ನು ತಯಾರಿಸಲಾಗುತ್ತದೆ. ಮಹಾರಾಷ್ಟ್ರದಿಂದ ತಂದು ಬಣ್ಣ ಲೇಪನ ಮಾಡಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಕಲಾವಿದ ಸತೀಶ್‌.

ಪಶ್ಚಿಮ ಬಂಗಾಳದ ಕಲಾವಿದರ ಮೂರ್ತಿಗಳು ಆಕರ್ಷಕವಾಗಿರುತ್ತವೆ. ಇವರು ತಯಾರಿಸಿದ ಮೂರ್ತಿಗಳನ್ನು 8 ವರ್ಷಗಳಿಂದ ಕೂರಿಸುತ್ತಿದ್ದೇವೆ.
ಸಚಿನ್‌, ಓಂ ಯುವಕರ ಸಂಘ ಆಂಜನೇಯ ಬಡಾವಣೆ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT