ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳ ಅಧಿಕಾರಿಗಳನ್ನು ವಾಪಸ್‌ ಕಳುಹಿಸಿದ ಜಿ.ಪಂ.

ಮೇಲಧಿಕಾರಿಗಳು ಭಾಗವಹಿಸದೇ ಇದ್ದಿದ್ದಕ್ಕೆ ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ರೋಶ
Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ದಾವಣಗೆರೆ: ಇಲಾಖೆಯ ಮಾಹಿತಿ ಇರುವ ಮೇಲಧಿಕಾರಿಗಳು ಸಭೆಯಲ್ಲಿ ಭಾಗವಹಿಸದೇ, ಮಾಹಿತಿ ಇಲ್ಲದ ಕೆಳ ಹಂತದ ಅಧಿಕಾರಿಗಳನ್ನು ಸಭೆಗೆ ಕಳುಹಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಅವರನ್ನು ಸಭೆಯಿಂದ ವಾಪಸ್‌ ಕಳುಹಿಸಲಾಯಿತು.

ಇಂಥ ಕ್ರಮಕ್ಕೆ ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆ ಸಾಕ್ಷಿಯಾಯಿತು.

ಸಾಮಾಜಿಕ ಅರಣ್ಯ ಇಲಾಖೆಯ ಮಾಹಿತಿ ನೀಡಲು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಬಂದಿರಲಿಲ್ಲ. ಅವರಿಲ್ಲದಿದ್ದರೆ ಎಸಿಎಫ್‌ ಬಂದಿಲ್ವ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಪ್ರಶ್ನಿಸಿದರು. ಅವರೂ ಬಂದಿಲ್ಲ ಎಂದು ಸಭೆಗೆ ಹಾಜರಾಗಿದ್ದ ಸೂಪರಿಂಟೆಂಡೆಂಟ್‌ ಉತ್ತರಿಸಿದರು. ಅಧಿಕಾರಿಗಳು ಸಭೆಗೆ ಬಾರದಿದ್ದರೆ ಸಭೆಯನ್ನೇ ರದ್ದು ಮಾಡಬೇಕಾಗುತ್ತದೆ ಎಂದು ಲೋಕೇಶ್ವರ ಎಚ್ಚರಿಸಿದರು. ಇಲ್ಲೇ ಪಕ್ಕದಲ್ಲೇ ನಿಮ್ಮ ಕಚೇರಿ ಇರುವುದರಿಂದ ನೀವು ಹೋಗಿ ಮೇಲಧಿಕಾರಿಗಳನ್ನು ಬರಲು ಹೇಳಿ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಆನಂದ ಸೂಚಿಸಿದರು. ಅದರಂತೆ ಸೂಪರಿಂಡೆಂಟ್‌ ಹೊರ ನಡೆದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಾಹಿತಿ ನೀಡುವಾಗಲೂ ಇದೇ ಪುನರಾವರ್ತನೆಯಾಯಿತು. ಇಲಾಖೆಯ ಮ್ಯಾನೇಜರ್‌ಗೆ ಅನಾರೋಗ್ಯ ಎಂದು ಬಂದಿದ್ದ ಅಧಿಕಾರಿ ಮಾಹಿತಿ ನೀಡಿದರು. ಅವರೇ ಬರಬೇಕು ಎಂದು ಲೋಕೇಶ್ವರ ಹೇಳಿದರು. ಸಭೆ ಇರುವಾಗಲೇ ಅವರಿಗೆ ಅನಾರೋಗ್ಯ ಉಂಟಾಗುತ್ತದಾ? ನೀವು ಹೋಗಿ ಅವರೇ ಬರಲಿ ಎಂದು ಈ ಅಧಿಕಾರಿಯನ್ನೂ ವಾಪಸ್‌ ಕಳುಹಿಸಲಾಯಿತು.

ಆದರೆ ಹೊರ ಹೋದ ಅಧಿಕಾರಿಗಳ ಬದಲಾಗಿ ಮೇಲಧಿಕಾರಿಗಳು ಸಭೆಗೆ ಬರಲಿಲ್ಲ.

ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಪ್ರತಿ ಸಭೆಗೆ ಯಾಕೆ ತಪ್ಪಿಸುತ್ತಾರೆ ಎಂದು ಸಿಇಒ ಬಸವಂತಪ್ಪ ಪ್ರಶ್ನಿಸಿದರು. ಅವರು ಮೀಟಿಂಗ್‌ಗೆ ಹೋಗಿದ್ದಾರೆ ಎಂದು ಸಹಾಯಕ ಎಂಜಿನಿಯರ್‌ ಉತ್ತರಿಸಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಲ್ಲಿ ಎಂದು ಕೇಳಿದ್ದಕ್ಕೂ ‘ಅವರೂ ಮೀಟಿಂಗ್‌ಗೆ’ ಹೋಗಿದ್ದಾರೆ ಎಂಬ ಉತ್ತರವೇ ಬಂತು. ‘ನಾನು ಬಂದು ಎರಡೂವರೆ ತಿಂಗಳಷ್ಟೇ ಆಗಿದೆ. ಮಾಹಿತಿ ಇಲ್ಲ’ ಎಂದು ಸಹಾಯಕ ಎಂಜಿನಿಯರ್‌ ತಿಳಿಸಿದರು. ಅವರು ಮೀಟಿಂಗ್‌ ಮುಗಿಸಿ ಕಚೇರಿಗೆ ಬಂದ ಬಳಿಕ ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡಿ ಎಂದು ಉಪಕಾರ್ಯದರ್ಶಿ ಸೂಚಿಸಿದರು.

ಬಾರದ ವಿಕೋಪ ನಿಧಿ: ಪ್ರವಾಹಕ್ಕೆ ತುತ್ತಾಗಿ ಹಾಳಾದ ರಸ್ತೆ, ಸೇತುವೆ, ಶಾಲೆಗಳ ಕಾಮಗಾರಿಗಳಿಗೆ ₹ 5 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಅನುದಾನ ಈವರೆಗೆ ಬಿಡುಗಡೆಯಾಗಿಲ್ಲ ಎಂದು ಸಿಇಒ ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

ಕಾರ್ಮಿಕ ಯೋಜನೆಗಳ ಮಾಹಿತಿ ನೀಡಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿವಿಧ ಸೌಲಭ್ಯಗಳಿವೆ. ಶೈಕ್ಷಣಿಕ ಧನ ಸಹಾಯ, ಹೆರಿಭತ್ಯೆ, ವೈದ್ಯಕೀಯ ಧನ ಸಹಾಯ, ಮದುವೆ ಧನ ಸಹಾಯಗಳಿವೆ. ಆದರೆ ಈ ಬಗ್ಗೆ ಕಾರ್ಮಿಕರಿಗೆ ಆಗಲಿ, ಜನಪ್ರತಿನಿಧಿಗಳಿಗಾಗಲಿ ಮಾಹಿತಿ ಇಲ್ಲ. ಹಾಗಾಗಿ ನಿಮ್ಮ ಯೋಜನೆಗಳ ಮಾಹಿತಿ ಇರುವ ಕರಪತ್ರಗಳನ್ನು ಜನಪ್ರತಿನಿಧಿಗಳಿಗೆ ಮುಟ್ಟಿಸಿ. ಆಗ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾರ್ಮಿಕರ ಬಗ್ಗೆ ಮಾಹಿತಿ ನೀಡುತ್ತಾರೆ. ಹಾಗೆ ಕಾರ್ಮಿಕರಿಗೂ ಮಾಹಿತಿ ನೀಡಿ ಎಂದು ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್‌ ಮಾನ್‌-ಧನ್‌ ಯೋಜನೆಯಡಿ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತರನ್ನು ತರಲು ಆದೇಶ ಬಂದಿದೆ. 18 ವರ್ಷದಿಂದ 40 ವರ್ಷದವರೆಗಿನ ಕಾರ್ಯಕರ್ತರು ವಯಸ್ಸಿಗೆ ಅನುಗುಣವಾಗಿ ಕನಿಷ್ಠ ₹ 55 ಗರಿಷ್ಠ ₹ 200 ಮಾಸಿಕವಾಗಿ ಕಟ್ಟಿದರೆ ಅವರಿಗೆ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ₹ 3,000 ಪಿಂಚಣಿ ಬರಲಿದೆ ಎಂದು ಕಾರ್ಮಿಕ ಅಧಿಕಾರಿ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳ ನೆರವಿನೊಂದಿಗೆ ಅರ್ಹ ಎಲ್ಲರೂ ಈ ಯೋಜನೆಯಲ್ಲಿ ಒಳಗೊಳ್ಳುವಂತೆ ಮಾಡಿ ಎಂದು ಸಿಇಒ ಮತ್ತು ಉಪಕಾರ್ಯದರ್ಶಿ ಸಲಹೆ ನೀಡಿದರು.

ಕೃಷಿ ಹೊಂಡಕ್ಕೆ ಈ ಬಾರಿ ಅನುದಾನ ಬರುವ ಸಾಧ್ಯತೆ ಕಡಿಮೆ ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ತಿಳಿಸಿದರು. ಕರಾವಳಿ ಮತ್ತು ಮಲೆನಾಡಿನಲ್ಲಷ್ಟೇ ಅಡಿಕೆ ತೋಟದ ಕೆಲಸವನ್ನೂ ಉದ್ಯೋಗ ಖಾತ್ರಿ ಯೋಜನೆಯನ್ನು ಮಾಡಬಹುದು. ಮಲೆನಾಡು ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳಿಗೂ ಅವಕಾಶ ಇದೆ ಎಂದು ತೋಟಗಾರಿಕ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನರ್‌ ಮಾಹಿತಿ ನೀಡಿದರು. ಈ ಬಗ್ಗೆ ಗೊಂದಲ ಇದೆ. ಅದಕ್ಕಾಗಿ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಲಾಗಿದೆ ಎಂದು ಪದ್ಮ ಬಸವಂತಪ್ಪ ತಿಳಿಸಿದರು.

ಹೊರಗುತ್ತಿಗೆ ನೌಕರರ ವೇತನಕ್ಕೂ ಲಂಚ ?

‘ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುವುದಿಲ್ಲ. ವೇತನ ಬಂದರೂ ಇಲಾಖೆಯಲ್ಲಿರುವ ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಅದನ್ನು ಪೆಂಡಿಂಗ್‌ ಇಡುತ್ತಾರೆ. ಅವರನ್ನು ವೈಯಕ್ತಿಕವಾಗಿ ಕಂಡರಷ್ಟೇ ವೇತನ ಕೊಡುತ್ತಾರಂತೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಆರೋಪಿಸಿದರು.

‘ತಾಲ್ಲೂಕು ಮಟ್ಟದಲ್ಲಿಯೇ ವೇತನ ಬಿಡುಗಡೆಯಾಗುತ್ತದೆ. ನಮ್ಮಲ್ಲಿಗೆ ಬರಲ್ಲ’ ಎಂದು ಡಿಎಚ್‌ಒ ಡಾ. ರಾಘವೇಂದ್ರ ಸ್ವಾಮಿ ಉತ್ತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಿ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಉಪ ಕಾರ್ಯದರ್ಶಿ ತಿಳಿಸಿದರು.

ಲಂಚ ಎಂಬ ಪದ ಬಳಸದೆಯೇ ಪರೋಕ್ಷ ಚರ್ಚೆಗೆ ಈ ಪ್ರಕರಣ ಕಾರಣವಾಯಿತು.

ಸೇಫ್ಟಿವಾಲ್ ವಿವಾದ

ಶಾಲೆಗಳಲ್ಲಿ ಬಿಸಿಯೂಟ ಅಡುಗೆಗೆ ಬಳಸುವ ಸಿಲಿಂಡರ್‌ಗಳಿಗೆ ಸೇಫ್ಟಿವಾಲ್‌ ಅಳವಡಿಸಿದ್ದಕ್ಕಾಗಿ ಖಾಸಗಿ ಏಜೆನ್ಸಿಗೆ ₹ 35 ಲಕ್ಷ ನೀಡಲು ಬಾಕಿ ಇದೆ ಎಂದು ಕಳೆದ ಬಾರಿಯ ಸಭೆಯಲ್ಲಿ ಚರ್ಚೆಯಾಗಿತ್ತು. ಸೇಫ್ಟಿವಾಲ್‌ ಅಳವಡಿಸಲು ಜಿಲ್ಲಾ ಪಂಚಾಯಿತಿಯಿಂದಾಗಲಿ, ಡಿಡಿಪಿಐ ಕಚೇರಿಯಿಂದಾಗಲಿ ಯಾವುದೇ ಆದೇಶ ಹೋಗಿಲ್ಲ. ಆದರೂ ಬಿಇಒಗಳು ಶಾಲೆಗಳಿಗೆ ಈ ಆದೇಶ ನೀಡಿರುವುದರಿಂದ ಅವರೇ ಆ ವೆಚ್ಚವನ್ನು ಬರಿಸಲು ಕ್ರಮ ಕೈಗೊಳ್ಳಬೇಕು ಎಂದು ಉಪ ಕಾರ್ಯದರ್ಶಿ ಬಿ. ಆನಂದ ತಿಳಿಸಿದರು.

****

674 ಮಿ.ಮೀ. :ಡಿಸೆಂಬರ್‌ 2ರ ವರೆಗೆ ಜಿಲ್ಲೆಯಲ್ಲಿ ಬರಬೇಕಿರುವ ಸರಾಸರಿ ಮಳೆ

847 ಮಿ.ಮೀ. :ಈ ವರ್ಷ ಬಂದಿರುವ ಮಳೆ

2,43,238 ಹೆಕ್ಟೇರ್‌ : ಜಿಲ್ಲೆಯಲ್ಲಿ ಮುಂಗಾರಲ್ಲಿ ಬಿತ್ತನೆಯಾಗಬೇಕಿದ್ದ ಗುರಿ

2,16,682 ಹೆಕ್ಟೇರ್‌ :ಬಿತ್ತನೆಯಾದ ಪ್ರದೇಶ

16,750 ಹೆಕ್ಟೇರ್‌:ಹಿಂಗಾರಿನಲ್ಲಿ ಬಿತ್ತನೆಯ ಗುರಿ

8,426 ಹೆಕ್ಟೇರ್‌ :ಹಿಂಗಾರಿನಲ್ಲಿ ಬಿತ್ತನೆ ಆಗಿರುವ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT