ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಕುಸಿತ: ಸಾವಿರ ಅಡಿ ಕೊರೆದರೂ ಸಿಗುತ್ತಿಲ್ಲ ನೀರು!

ಮಂಜುನಾಥ್ ಎಸ್.ಎಂ.
Published 15 ಫೆಬ್ರುವರಿ 2024, 5:56 IST
Last Updated 15 ಫೆಬ್ರುವರಿ 2024, 5:56 IST
ಅಕ್ಷರ ಗಾತ್ರ

ಮಾಯಕೊಂಡ: ‘ಕಳೆದ ಎರಡು ತಿಂಗಳಿನಿಂದ 17 ಕೊಳವೆಬಾವಿ ಕೊರೆಯಿಸಿದ್ದೇನೆ. ಆದರೆ ಉತ್ತಮ ನೀರು ಮಾತ್ರ ಸಿಕ್ಕಿಲ್ಲ. ಫಲಕ್ಕೆ ಬರುವ ಹಂತಕ್ಕೆ ಬಂದಿರುವ ಈಗಾಗಲೆ ಏಳು ಸಾವಿರ ಪಪ್ಪಾಯ ಗಿಡಗಳು ಒಣಗುತ್ತಿವೆ. ಜೊತೆಯಲ್ಲಿ ಅಡಿಕೆ ಬೆಳೆ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ..’

ಇದು ಸಮೀಪದ ಸುಲ್ತಾನಿಪುರ ಗ್ರಾಮದ ಪ್ರಗತಿಪರ ರೈತ ನಟರಾಜ್ ಅವರ ಅಳಲು. ಇದು ಕೇವಲ ನಟರಾಜ್ ಅವರ ಆತಂಕವಲ್ಲ. ಈ ಭಾಗದ ಬಹುತೇಕರ ರೈತರದ್ದೂ ಇದೇ ಪರಿಸ್ಥಿತಿ. 

ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ಹಳ್ಳ ಕೊಳ್ಳಗಳು ಮೈದುಂಬಿ ಹರಿದು ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿದಿದ್ದವು. ಜಮೀನುಗಳಲ್ಲಿ ಜೌಗು ಹತ್ತಿ ನೀರು ಬಸಿ ಹೆಚ್ಚಾಗಿತ್ತು. ಮೂರ್ನಾಲ್ಕು ವರ್ಷಗಳವರೆಗೂ ಅಂತರ್ಜಲ ಕುಸಿಯುವ ಮಾತೇ ಇಲ್ಲ ಎಂಬ ಲೆಕ್ಕಾಚಾರದಿಂದ ರೈತರು ಕೊಳವೆ ಬಾವಿ ಕೊರೆಸಿ ಅಡಕೆ ಸಸಿಗಳನ್ನು ನೆಟ್ಟದ್ದೇ ನೆಟ್ಟಿದ್ದು. ಇನ್ನೇನು ಮೂರ್ನಾಲ್ಕು ವರ್ಷದಲ್ಲಿ ಫಸಲು ಕೈಗೆ ಬಂದೇ ಬಿಟ್ಟಿತು ಎಂಬ ಉತ್ಸಾಹದಲ್ಲಿದ್ದ  ರೈತನಿಗೆ, ಈ ವರ್ಷದ ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತ ಆಘಾತ ತಂದಿವೆ. 

ಮಾಯಕೊಂಡ, ಆನಗೋಡು, ಅಣಜಿ, ಬಾಡಾ ಭಾಗಗಳೂ ಸೇರಿದಂತೆ ದಾವಣಗೆರೆ ತಾಲ್ಲೂಕಿನಾದ್ಯಂತ ಅಡಿಕೆ ತೋಟ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವ ಕನಸು ಹೊತ್ತ ರೈತ ಇಂದು ಅಂತರ್ಜಲ ಕುಸಿತದಿಂದ ಕಂಗಾಲಾಗಿದ್ದಾನೆ. ಸಾವಿರಾರು ಅಡಿ ಆಳಕ್ಕೆ ಕೊರೆದರೂ ನೀರು ಸಿಗದಿರುವ ಸ್ಥಿತಿ ಎದುರಾಗಿದೆ. ದಿನೇ ದಿನೇ ಅಂತರ್ಜಲ ಮಟ್ಟ ಪಾತಾಳ ಮುಟ್ಟುತ್ತಿದ್ದು, ಕೊಳವೆಬಾವಿ ನೆಚ್ಚಿಕೊಂಡು ತೋಟ ಮಾಡುತ್ತಿರುವ ಬಯಲು ಸೀಮೆಯ ರೈತರ ಕಷ್ಟ ಹೇಳತೀರದಾಗಿದೆ.

ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದಂತೆ ಬಹುತೇಕ ಕೆರೆಗಳಲ್ಲಿನ ನೀರು ಖಾಲಿಯಾಗುತ್ತಿದೆ. ಹಲವು ಕೆರೆಗಳಲ್ಲಿ ನೀರು ತಳ ಮುಟ್ಟಿವೆ. ಕಳೆದ ಎರಡು ತಿಂಗಳಿಂದ ಕೊಳವೆ ಬಾವಿಗಳೂ ಬರಿದಾಗುತ್ತಿದ್ದು, ತೋಟಗಳಿಗೆ ನೀರುಣಿಸಿ ಅಡಿಕೆ ಹಾಗು ಇನ್ನಿತರೆ ಬೆಳೆಗಳನ್ನ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.

ಹೆಚ್ಚುತ್ತಿವೆ ಕೊಳವೆ ಬಾವಿ: 

ಈ ಬಾರಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದ ಮಳೆ ಸುರಿಯದ ಕಾರಣ, ಅಲ್ಪಾವಧಿ ಬೆಳೆಗಳಿಗೂ ಕೊಳವೆ ಬಾವಿಗಳನ್ನೇ  ನೆಚ್ಚಿಕೊಂಡ ರೈತ, ಭೂಮಿಯಿಂದ ನೀರು ಹೊರ ತೆಗೆದಿದ್ದ. ಆದರೆ ಈಗ ಬೇಸಿಗೆ ಸಮೀಪಿಸುವ ಮುನ್ನವೇ ಸಂಕಷ್ಟ ಎದುರಾಗಿದ್ದು, ಅಂತರ್ಜಲ ಪಾತಾಳಕ್ಕೆ ಸೇರುತ್ತಿದೆ. ನಿತ್ಯವೂ ಜಲ ಸಂಶೋಧನೆ ಮಾಡಿಸುವ, ಒಂದಾದ ನಂತರ ಮತ್ತೊಂದು ಕೊಳವೆಬಾವಿ ಕೊರೆಯಿಸಲು ರೈತರು ಹಣ ಸುರಿಯುತ್ತಿದ್ದಾರೆ. ಆದರೆ ನೀರು ಸಿಗುವ ಪ್ರಮಾಣ ಮಾತ್ರ ಅತ್ಯಲ್ಪ.  ತಾಲೂಕಿನಾದ್ಯಂತ ಪ್ರತಿ ಹಳ್ಳಿಗಳಲ್ಲೂ ನಿತ್ಯವೂ ಕೊಳವೆ ಬಾವಿ ಹಾಕಿಸುವವರ ಸಂಖ್ಯೆ ಏರುತ್ತಿದೆ. ಆದರೆ ನೀರು ಸಿಗುತ್ತಿರುವುದು ಕೆಲವೇ ಬೋರುಗಳಲ್ಲಿ ಎಂದು ರೈತರು ಚಿಂತೆಗೀಡುಮಾಡಿದೆ. 

ಕುಡಿಯುವ ನೀರಿಗೂ ತತ್ವಾರದ ಭೀತಿ:

ಕೆರೆ, ಕೊಳವೆಬಾವಿ ಹಾಗೂ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆ ಇದೆ. ಈ ಪರಿಸ್ಥಿತಿ ಅವಲೋಕಿಸಿದರೆ ಈ ವರ್ಷ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಭೀತಿ ಎದುರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕುಡಿಯುವ ನೀರಿಗೆ ಜಿಲ್ಲಾಡಳಿತ ಅಗತ್ಯ ಕ್ರಮ‌ ಕೈಗೊಳ್ಳಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ. 

ಮಾಯಕೊಂಡ ಸಮೀಪದ ಸುಲ್ತಾನಿಪುರ ಗ್ರಾಮದ ಪ್ರಗತಿಪರ ರೈತ ನಟರಾಜ್ ಅವರ ಪಪ್ಪಾಯ ತೋಟ ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿರುವುದು
ಮಾಯಕೊಂಡ ಸಮೀಪದ ಸುಲ್ತಾನಿಪುರ ಗ್ರಾಮದ ಪ್ರಗತಿಪರ ರೈತ ನಟರಾಜ್ ಅವರ ಪಪ್ಪಾಯ ತೋಟ ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿರುವುದು
ಮಾಯಕೊಂಡ ಸಮೀಪದ ಕೊಡಗನೂರು ಕೆರೆ ನೀರಿಲ್ಲದೆ ಒಣಗುತ್ತಿರುವುದು
ಮಾಯಕೊಂಡ ಸಮೀಪದ ಕೊಡಗನೂರು ಕೆರೆ ನೀರಿಲ್ಲದೆ ಒಣಗುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT