ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಬದಲು ಮೌಲ್ಯ ಬಿತ್ತಿ, ಬೆಳೆಯಿರಿ: ಪಂಡಿತಾರಾಧ್ಯ ಶ್ರೀ

‘ಉದಕದೊಳಗಿನ ಕಿಚ್ಚು’ ಸಿನಿಮಾದ ಪೋಸ್ಟರ್ ಬಿಡುಗಡೆ
Last Updated 8 ಅಕ್ಟೋಬರ್ 2021, 15:13 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ಇಂದಿನ ದಿನಗಳಲ್ಲಿ ಬೀಜವನ್ನು ಬಿತ್ತಿ, ಬೆಳೆಯುವಂತೆ, ಹಣವನ್ನು ಬಿತ್ತಿ ಹಣವನ್ನು ಬೆಳೆಯುವ ಕೆಲಸವಾಗುತ್ತಿದೆ. ಆದರೆ ಮೌಲ್ಯಗಳನ್ನು ಬಿತ್ತಿ, ಆದರೆ ಇಂದು ಮೌಲ್ಯಗಳನ್ನು ಬೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ‘ಉದಕದೊಳಗಿನ ಕಿಚ್ಚು’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಯಾರೂ ಹಣದ ಹಿಂದೆ ಓಡುತ್ತಾರೋ ಅವರಿಗೆ ಸಾಹಿತ್ಯ ಸಂಗೀತ, ಕಲೆ, ಧರ್ಮದಂತಹ ಮೌಲ್ಯಗಳು ಬೇಕಾಗಿಲ್ಲ. ಹೆಚ್ಚು ಸಂಪಾದನೆ ಬರುವುದನ್ನು ನೋಡುತ್ತಾರೆ. ಮೌಲ್ಯಗಳನ್ನು ಬಿತ್ತಿ ಬೆಳೆಯುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಇದು ಇನ್ನೊಬ್ಬರ ಕೆಲಸವಲ್ಲ. ನಮ್ಮದೂ ಹೊಣೆಗಾರಿಕೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಜನರ ಬಳಿ ತುಂಬಾ ಹಣ ಇದೆ. ಆದರೆ ಆ ಹಣ ಹೇಗೆ ಬಳಕೆಯಾಗುತ್ತದೆ ಎಂಬುದು ಕಷ್ಟ. ದುಬಾರಿ ತೆರಿಗೆ ಪಾವತಿಸುವವರು ಸಾಂಸ್ಕೃತಿಕ ಶ್ರೀಮಂತಿಕೆ, ನೈತಿಕ ಪ್ರಜ್ಞೆ ಜಾಗೃತಗೊಳಿಸುವ, ಸುಂದರ ಸಮಾಜ ನಿರ್ಮಾಣ ಮಾಡುವ ಕೆಲಸವಾಗಿಲ್ಲ’ ಎಂದು ವಿಷಾದಿಸಿದರು

‘ಸಾಹಿತ್ಯದಲ್ಲಿ ಒಳ್ಳೆಯ ತತ್ವಗಳು ಇರುವಾಗ, ಜನರು ಅಹಿಂಸೆಗೆ ಒತ್ತು ನೀಡುತ್ತಿದ್ದಾರೆ. ನಾವು ಒಂದು ಕಡೆ ಶಾಂತಿ, ಶಾಂತಿ ಎಂದು ಬಡಿದುಕೊಳ್ಳುತ್ತೇವೆ. ಇನ್ನೊಂದು ಕಡೆ ಅಶಾಂತಿಯ ಕಾರ್ಯಗಳು ನಡೆಯುತ್ತಿವೆ. ದಯವೇ ಧರ್ಮದ ಮೂಲ ಎಂದು ಹೇಳುವ ನಾವು ಮತ್ತೊಂದು ಕಡೆ ಭಯವನ್ನೇ ಧರ್ಮದ ಮೂಲವಾಗಿರುವುದನ್ನು ಕಾಣುತ್ತಿದ್ದೇವೆ. ವೈದಿಕ ಧರ್ಮವನ್ನು ಅಪ್ಪಿಕೊಳ್ಳುವ ಹೀನ ಪದ್ಧತಿಯನ್ನು ಜನ ಇನ್ನೂ ಬಿಟ್ಟುಕೊಟ್ಟಿಲ್ಲ. ಚಲನಚಿತ್ರದ ಮೂಲಕ ಅಂತಹವರಿಗೆ ಮಾರ್ಗದರ್ಶನವನ್ನು ಮಾಡಲು ಹೊರಟಿದ್ದಾರೆ.

‘ಚಲನಚಿತ್ರಗಳಿಗೂ ಸ್ವಾಮೀಜಿಗಳಿಗೂ ಸಂಬಂಧ ಇಲ್ಲ. ಆದರೆ ಬಸವತತ್ವಕ್ಕೂ ಸ್ವಾಮೀಜಿಗಳಿಗೂ ಸಂಬಂಧ ಇದೆ. ತರಳಬಾಳು ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಸ್ವಾತಂತ್ರ್ಯ ಪೂರ್ವದಲ್ಲೇ ಎಲ್ಲ ವರ್ಗದ ಜನರನ್ನು ಪ್ರೀತಿಸುತ್ತಿದ್ದರು. ಅದರಲ್ಲೂ ರಂಗಭೂಮಿಯ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಅವರೇ ನಾಟಕಕಾರರು, ನಿರ್ದೇಶಕರು, ಸಂಘಟಕರೂ ಆಗಿದ್ದರು. ತತ್ವ ಪ್ರಚಾರಕ್ಕಾಗಿ ಮಾಧ್ಯಮವನ್ನು ಸದ್ಬಳಕೆ ಮಾಡಿಕೊಂಡರು’ ಎಂದು ಶ್ಲಾಘಿಸಿದರು.

ಶೋಷಿತ ವರ್ಗದವರನ್ನು ಮತ್ತೆ ತಲೆ ಎತ್ತಿ ಬರಬೇಕು ಎನ್ನುವ ಕಿಚ್ಚು ಈ ಚಿತ್ರದಲ್ಲಿ ಇದ್ದು, ಬಸವಣ್ಣನವರು ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಅವರನ್ನು ಮೇಲೆತ್ತಿದ ಮಹಾನುಭವ. ಬಸವತತ್ವದ ನೆಲೆಯಲ್ಲಿ ಆ ಕೆಲಸ ಮಾಡಬೇಕಾಗಿದೆ. ಯಾವುದೇ ಕೆಲಸದಲ್ಲಿ ಸದ್ಭಾವನೆಯಿಮದ ತೊಡಗಿದರೆ ಯಶಸ್ಸು. ಬೇಕಾದಷ್ಟು ನೋವುಗಳೂ ಇದ್ದರೂ ಅವು ಇನ್ನಷ್ಟು ಗಟ್ಟಿಗೊಳಿಸುತ್ತದೆ.

‘ನಾಟಕೋತ್ಸವ ಆರಂಭವಾಗಿ 25ನೇ ವರ್ಷವಾಗಿದ್ದು, ಇಷ್ಟು ನಿರಂತರವಾಗಿ ರಂಗಭೂಮಿ ಸೇವೆ ಮಾಡುವುದು ಕಷ್ಟ. ಕೊರೊನಾ ಅವಧಿಯಲ್ಲೂ ಅಂತರ್ಜಾಲದ ಮೂಲಕ ನಾಟಕೋತ್ಸವ ನಡೆದಿದೆ. ಈ ವರ್ಷ ನವೆಂಬರ್‌ 2ರಿಂದ 7ರವರೆಗೆ ನಾಟಕೋತ್ಸವ ವಿವಿಧ ಗೋಷ್ಠಿಗಳು ನಡೆಯಲಿವೆ’ ಎಂದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ. ಕಪ್ಪಣ್ಣ ವಚನಗಳನ್ನು ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಉಳ್ಳವರು ಶಿವಾಲಯಕ್ಕೆ ಕಟ್ಟುವರು ಎನ್ನುವ ಹಾಗೆ ಉಳ್ಳವರು ಮಲ್ಟಿಸ್ಟಾರ್ ಸಿನಿಮಾ ಮಾಡುತ್ತಿದ್ದಾರೆ. ಸಮಾಜದ ಬಗ್ಗೆ ಚಿಂತನೆ ಮಾಡುವ ಚಿತ್ರಗಳು ಕಡಿಮೆಯಾಗಿದ್ದು, ಕಲಾತ್ಮಕ ಚಿತ್ರಗಳು ಉತ್ತಮ ಸಂದೇಶ ನೀಡುತ್ತಿವೆ. ಇಂದಿನ ನಿರ್ಮಾಪಕರೂ ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಸ್ಥಿತಿಯಲ್ಲಿ ಇದ್ದಾರೆ. ಗುಣಾತ್ಮಕ ಚಿತ್ರಗಳು ಬಂದರೆ ಹಾಕಿದ ಬಂಡವಾಳ ಗ್ಯಾರಂಟಿಯಾಗಿ ಬರುತ್ತದೆ. 100 ಕೋಟಿ ಹಾಕಿ ₹150 ಕೋಟಿ ಹಣ ತೆಗೆದುಕೊಳ್ಳುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಚಿತ್ರ ನಿರ್ದೇಶಕ ಡಿಂಗ್ರಿ ನರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಡಾ.ನಾ. ಲೋಕೇಶ್‌ ಒಡೆಯರ್, ಪ್ರೊ.ಹಾಲಪ್ಪ, ಪಾಸ್ಟರ್ ರಾಜಶೇಖರ್, ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ಪರಮೇಶ್ವರಪ್ಪ, ವಿಜಯ್‌ಕುಮಾರ್ ಸೋನಾಲೆ, ವೀರೇಶ್ ಹನಗವಾಡಿ ಇದ್ದರು.

---

‘ಬಸವಣ್ಣನ ವಚನ ಕಿರುಚಿತ್ರವಾಗಲಿ’

‘ಬಸವಣ್ಣನ ಒಂದೊಂದು ವಚನವನ್ನು ಕಿರುಚಿತ್ರ ಮಾಡಬಹುದು’ ಎಂದು ರಂಘ ಸಂಘಟಕ ಮಂಡ್ಯ ರಮೇಶ್ ಸಲಹೆ ನೀಡಿದರು.

‘ಸಿನಿಮಾ ಒಂದು ಶ್ರೇಷ್ಠ ಭಾಷೆ. ಇಂದಿನ ಮಕ್ಕಳಿಗೆ ಇದರ ಮೂಲಕ ಸದಭಿರುಚಿ ಬೆಳೆಸುವ ಕೆಲಸವಾಗಬೇಕಿದೆ. 12ನೇ ಶತಮಾನದ ಶರಣರ ಚಳವಳಿಯನ್ನು ಪ್ರಸ್ತುತ ಸಂದರ್ಭಕ್ಕೆ ಸಮೀಕರಿಸಲು ಉದಕದೊಳಗಿನ ಕಿಚ್ಚು ಸಿನಿಮಾ ಸಹಕಾರಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT