ಭಾನುವಾರ, ಸೆಪ್ಟೆಂಬರ್ 26, 2021
21 °C

ಖ್ಯಾತ ವೈದ್ಯೆ, ಲೇಖಕಿ ಡಾ.ಎಚ್.ಗಿರಿಜಮ್ಮ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ದಾವಣಗೆರೆ: ಖ್ಯಾತ ವೈದ್ಯೆ, ಲೇಖಕಿ ಡಾ.ಎಚ್. ಗಿರಿಜಮ್ಮ (70) ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಹರಿಹರದಲ್ಲಿ ಜನಿಸಿದ ಗಿರಿಜಮ್ಮ ಅವರು ಪಿಯುಸಿವರೆಗೂ ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ನಂತರ ದಾವಣಗೆರೆ, ಹರಿಹರ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದರು. ತ್ರಿವೇಣಿ ಅವರ ಬರಹಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ಅವರ ಮೊದಲ ಕತೆ ‘ಹೂಬಳ್ಳಿಗೆ ಈ ಆಸರೆ’ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ‘ಚಂದಮಾಮ’, ‘ತಮಸೋಮ ಜ್ಯೋತಿರ್ಗಮಯ’, ‘ಅಂಬರತಾರೆ’ ಸೇರಿ 27 ಕಾದಂಬರಿಗಳು ಪ್ರಕಟವಾಗಿವೆ. ‘ಅರ್ಧಾಂಗಿ’, ‘ಸಂಜೆಮಲ್ಲಿಗೆ’, ‘ಅನಾವರಣ’ ನೀಳ್ಗತೆಗಳು ಮಯೂರದಲ್ಲಿ ಪ್ರಕಟಗೊಂಡಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ಪ್ರಕಟಗೊಂಡಿವೆ.

ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. 26 ವೈದ್ಯ ವಿಜ್ಞಾನದ ಕೃತಿಗಳನ್ನು ಪ್ರಕಟಿಸಿರುವ ಗಿರಿಜಮ್ಮ,  ‘ಅಂತರಗಂಗೆ’ ಚಲನಚಿತ್ರವನ್ನೂ ನಿರ್ದೇಶಿಸಿದ್ದಾರೆ. ಇವರು ರಚಿಸಿದ ‘ಮೇಘ ಮಂದಾರ’ ಕಾದಂಬರಿ ಸಿನಿಮಾವಾಗಿದೆ. 15 ಟೆಲಿ ಫಿಲ್ಮ್‌ಗಳು, 5 ಟೆಲಿ ಧಾರಾವಾಹಿಗಳು ಮತ್ತು ಹತ್ತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.

‘ಕಾಡತಾವ ನೆನಪುಗಳು’ ಇವರ ಆತ್ಮಕಥನ. 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಬಿ.ಸರೋಜಾದೇವಿ ದತ್ತಿನಿಧಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರಿಗೆ ಪತಿ ಭಾಸ್ಕರ್ ಹೆಗಡೆ ಇದ್ದಾರೆ. ಅಂತ್ಯಕ್ರಿಯೆ ಇಲ್ಲಿನ ಮುಕ್ತಿಧಾಮದಲ್ಲಿ ನೆರವೇರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು