ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಸರ್ಕಾರಿ, 27 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ದಾವಣಗೆರೆ: ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸಲು ಒಪ್ಪಂದ
Last Updated 8 ಡಿಸೆಂಬರ್ 2018, 14:39 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸಲು ಜಿಲ್ಲೆಯಲ್ಲಿ 13 ಸರ್ಕಾರಿ ಹಾಗೂ 27 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಸಿಕೊಂಡಿದ್ದು, ಆರೋಗ್ಯ ಸೇವೆ ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಎಸ್. ತ್ರಿಪುಲಾಂಭ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಸಂಯೋಜಿತ ಯೋಜನೆ ಕುರಿತು ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಹಾಗೂ ವೈದ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಆಯುಷ್ಮಾನ್‌ ಯೋಜನೆಯಡಿ ಆಸ್ಪತ್ರೆಗಳ ನೋಂದಣಿ ಪ್ರಕ್ರಿಯೆ ಇನ್ನೂ ನಡೆಯಬೇಕಿದೆ. ಈ ಕಾರ್ಯ ಪೂರ್ಣಗೊಂಡರೆ ಯೋಜನೆಯ ಅನುಷ್ಠಾನ ಪರಿಣಾಮಕಾರಿಯಾಗಿ ಆರಂಭಗೊಳ್ಳಲಿದೆ ಎಂದರು.

ಯೋಜನೆಗಳ ಲಾಭ ಫಲಾನುಭವಿಗಳಿಗೆ ತಲುಪಬೇಕಾದರೆ ಆಸ್ಪತ್ರೆಗಳ ಆಡಳಿತ ಮಂಡಳಿ ಮತ್ತು ವೈದ್ಯರ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗಾಗಿ, ಆಯುಷ್ಮಾನ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ. ನೀಲಾಂಬಿಕೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ವೈದ್ಯಕೀಯ ನಿರ್ದೇಶಕ ಡಾ.ಬಿ. ಮಂಜುನಾಥ್‌, ವಿಚಕ್ಷಣಾಧಿಕಾರಿ ಡಾ.ಎಸ್‌. ರಾಜಣ್ಣ, ಜಿಲ್ಲಾ ಸಂಯೋಜಕ ಎಂ.ಎಂ. ಮೋಹನ್‌ ಅವರೂ ಇದ್ದರು.

ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ 150 ಮಂದಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

* * *

ಫಲಾನುಭವಿಗಳು ಯಾರು?
ಅರ್ಹ ರೋಗಿಗಳು:
2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಅರ್ಹತೆ ಪಡೆದ, ರಾಜ್ಯದಲ್ಲಿ ವಾಸವಿರುವ ಕುಟುಂಬದ ಸದಸ್ಯರು (ಬಿಪಿಎಲ್‌ ಪಡಿತರ ಚೀಟಿ ಪಡೆದವರು).

ಸಾಮಾನ್ಯ ರೋಗಿಗಳು: ಎಪಿಎಲ್‌ ಪಡಿತರ ಚೀಟಿ ಹೊಂದಿರುವವರು, ಆಹಾರ ಭದ್ರತಾ ಕಾಯ್ದೆಯಡಿ ಸೌಲಭ್ಯ ಪಡೆಯಲು ಸಾಧ್ಯವಾಗದವರು.

ಸರ್ಕಾರದಿಂದ ಸಿಗುವ ವೈದ್ಯಕೀಯ ವೆಚ್ಚ
ಅರ್ಹತಾ ರೋಗಿಗಳು:
ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಪ್ರತಿ ವರ್ಷಕ್ಕೆ ಕುಟುಂಬಕ್ಕೆ ₹ 5 ಲಕ್ಷವನ್ನು ಸರ್ಕಾರದಿಂದ ಭರಿಸಲಾಗುವುದು.

ಸಾಮಾನ್ಯ ರೋಗಿಗಳು: ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೂ ಸಹಪಾವತಿ ಆಧಾರದ ಮೇಲೆ ಚಿಕಿತ್ಸೆ ಪಡೆಯಲು ಅವಕಾಶವಿದೆ. ಪ್ಯಾಕೇಜ್‌ ದರಗಳ ಶೇ 30ರಷ್ಟನ್ನು ಸರ್ಕಾರ ಕೊಡಲಿದೆ. ಉಳಿದ ಶೇ 70ರಷ್ಟನ್ನು ರೋಗಿ ಪಾವತಿಸಬೇಕು. ಒಟ್ಟಾರೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಸರ್ಕಾರ ₹ 1.5 ಲಕ್ಷ ಮೀಸಲಿಡಲಿದೆ.

ಅರ್ಹತಾ ಮತ್ತು ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ರಾಜ್ಯ ಸರ್ಕಾರ ಶೇ 40ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ 60ರಷ್ಟು ಹಣವನ್ನು ಫಲಾನುಭವಿಗಳ ಚಿಕಿತ್ಸೆಗಾಗಿ ಪಾವತಿಸಲಾಗುತ್ತದೆ.

ರೋಗಿಗಳ ನೋಂದಣಿ ಹೇಗೆ?
ಅರ್ಹ ಫಲಾನುಭವಿಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಸಿಕೊಂಡು ಹೆಲ್ತ್‌ ಕಾರ್ಡ್‌ ಪಡೆಯಬೇಕು. ಈ ಕಾರ್ಡ್‌ ಜತೆಗೆ ಆಧಾರ್‌ ಸಂಖ್ಯೆ, ಮತದಾರರ ಗುರುತಿನ ಚೀಟಿ ನೀಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ನೋಂದಣಿ ಮಾಡಿಸಿಕೊಳ್ಳಬಹುದು.

ಸರ್ಕಾರಿ ಆಸ್ಪತ್ರೆಗಳ ವೈದ್ಯರು ಶಿಫಾರಸು ಮಾಡಿದರಷ್ಟೇ ಯೋಜನೆಯಡಿ ನೋಂದಾಯಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿದೆ.

ತುರ್ತು ಸಂದರ್ಭದಲ್ಲಿ ಮಾತ್ರ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ಅವಕಾಶವಿದೆ.

*
ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ 62 ಲಕ್ಷ ಕುಟುಂಬಗಳಿಗೆ ಸೌಲಭ್ಯ ಸಿಗುತ್ತಿತ್ತು. ಆಯುಷ್ಮಾನ್‌ ಭಾರತ್‌–ಆರೋಗ್ಯ ಕರ್ನಾಟಕ ಸಂಯುಕ್ತ ಯೋಜನೆಯಡಿಯೂ ಇಷ್ಟೇ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡಲಾಗುವುದು.
–ಡಾ.ಬಿ. ಮಂಜುನಾಥ್‌, ವೈದ್ಯಕೀಯ ನಿರ್ದೇಶಕ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT