ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆಯಲ್ಲಿ ಬಿರುಸಿನ ಮಳೆ: ರಸ್ತೆಗಳು ಜಲಾವೃತ

Published 7 ಜೂನ್ 2024, 16:26 IST
Last Updated 7 ಜೂನ್ 2024, 16:26 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಬಿರುಸಿನ ಮಳೆಯಿಂದಾಗಿ ಹಲವು ಬಡಾವಣೆಗಳ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದೆ. ಜೋರು ಮಳೆಯಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಡಿದರು.

ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದವು. ರಸ್ತೆ ಪಕ್ಕದ ಮಳಿಗೆಗಳು, ಅಂಗಡಿಗಳು, ಹೋಟೆಲ್‌ಗಳು ಹಾಗೂ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು, ವ್ಯಾಪಾರಸ್ಥರು ಸಮಸ್ಯೆ ಅನುಭವಿಸಿದರು.

ನಗರದ ಪಿ.ಬಿ. ರಸ್ತೆ, ವಿನೋಬನಗರ, ಈರುಳ್ಳಿ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಹಳೇ ಬಸ್‌ ನಿಲ್ದಾಣ ಹಾಗೂ ಹಳೇ ದಾವಣಗೆರೆಯ ವಿವಿಧ ಭಾಗಗಳಲ್ಲಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಟ ನಡೆಸಿದ್ದು ಕಂಡುಬಂತು.

ಪಿಸಾಳೆ ಕಾಂಪೌಂಡ್‌ ಬಳಿ ಜೋರು ಮಳೆಗೆ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ರಾಜಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಬಳಿಕ ಕ್ರೇನ್‌ ಮೂಲಕ ಅದನ್ನು ಹೊರತೆಗೆಯಲಾಯಿತು.

ರಸ್ತೆಗಳು ಕೆಸರುಮಯ:

ಮಳೆಯಿಂದಾಗಿ ನಗರದ ವಿವಿಧ ಕಾಲೊನಿಗಳಲ್ಲಿನ ಮಣ್ಣಿನ ರಸ್ತೆಗಳು ಕೆಸರುಮಯವಾಗಿ ಬದಲಾಗಿವೆ. ವಿವಿಧ ಕಾಮಗಾರಿಗಳಿಗೆಂದು ರಸ್ತೆ ಅಗೆದಿದ್ದು, ಇದೀಗ ಮಳೆಯಿಂದಾಗಿ ಸಂಚರಿಸುವುದೇ ದುಸ್ತರವಾಗಿದೆ.

‘ಕೆ.ಬಿ.ಬಡಾವಣೆಯ 1ನೇ ಮುಖ್ಯ ರಸ್ತೆಯಲ್ಲಿನ 9ನೇ ಅಡ್ಡರಸ್ತೆಯಲ್ಲಿ ಈಚೆಗೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ನೆಪದಲ್ಲಿ ಮುಂಚೆ ಇದ್ದ ಡಾಂಬರು ರಸ್ತೆಯನ್ನು ಹಾಳು ಮಾಡಲಾಗಿದೆ. ಇದೀಗ ರಸ್ತೆಯು ಸಂಪೂರ್ಣ ಮಣ್ಣಿನಿಂದ ಕೂಡಿದ್ದು, ಮಳೆಯಿಂದಾಗಿ ಕೆಸರುಮಯ ಹಾದಿಯಲ್ಲಿ ಓಡಾಡುವುದೇ ಸವಾಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ‘ಪ್ರಜಾವಾಣಿಗೆ’ ದೂರಿದರು.

‘ಹಲವು ಬಡಾವಣೆಗಳಲ್ಲಿ ಇಂಥದ್ದೇ ಸಮಸ್ಯೆ ಎದುರಾಗಿದೆ. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವಿರಲಿ, ಓಡಾಡಲೂ ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಪಾಲಿಕೆ ಸದಸ್ಯರನ್ನು ಕೇಳಿದರೆ, ಅನುದಾನವಿಲ್ಲ ಎನ್ನುತ್ತಿದ್ದಾರೆ’ ಎಂದು ನಾಗರಿಕರು ಸಂಕಷ್ಟ ತೋಡಿಕೊಂಡರು.

ದಾವಣಗೆರೆಯಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ದ್ವಿಚಕ್ರ ವಾಹನವನ್ನು ಕ್ರೇನ್ ಮೂಲಕ ಹೊರತೆಗೆಯಲಾಯಿತು
ದಾವಣಗೆರೆಯಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ದ್ವಿಚಕ್ರ ವಾಹನವನ್ನು ಕ್ರೇನ್ ಮೂಲಕ ಹೊರತೆಗೆಯಲಾಯಿತು
ದಾವಣಗೆರೆಯ ವಿನೋಬನಗರದ ನರಹರಿಶೇಟ್ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯಲ್ಲಿ ಯುವಕನೊಬ್ಬ ಹಿರಿಯ ನಾಗರಿಕರೊಬ್ಬರನ್ನು ಕೈ ಹಿಡಿದು ರಸ್ತೆ ದಾಟಿಸುತ್ತಿರುವುದು
ದಾವಣಗೆರೆಯ ವಿನೋಬನಗರದ ನರಹರಿಶೇಟ್ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯಲ್ಲಿ ಯುವಕನೊಬ್ಬ ಹಿರಿಯ ನಾಗರಿಕರೊಬ್ಬರನ್ನು ಕೈ ಹಿಡಿದು ರಸ್ತೆ ದಾಟಿಸುತ್ತಿರುವುದು
ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಳೆಯಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ಬಾಲಕನೊಬ್ಬ ರಸ್ತೆ ದಾಟಲು ಓಡುತ್ತಿರುವುದು
ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಳೆಯಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ಬಾಲಕನೊಬ್ಬ ರಸ್ತೆ ದಾಟಲು ಓಡುತ್ತಿರುವುದು

ಬಸ್‌ ನಿಲ್ದಾಣಕ್ಕೆ ನುಗ್ಗುವ ಮಳೆ ನೀರು

ನಗರದ ಶಾಮನೂರು ಮುಖ್ಯರಸ್ತೆಯ ಉದ್ಯಾನದ ಪಕ್ಕದಲ್ಲಿನ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ಆಶ್ರಯ ಇಲ್ಲದಂತಾಗಿದೆ. ಮಳೆ ಬಂದಾಗ ಬಸ್‌ ನಿಲ್ದಾಣದಲ್ಲಿ ನಾಗರಿಕರು ನಿಲ್ಲಲೂ ಸಾಧ್ಯವಾಗದಂತಹ ಸ್ಥಿತಿಯಿದೆ. ಶುಕ್ರವಾರ ಸುರಿದ ಮಳೆಯಿಂದಾಗಿ ಬಸ್‌ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಸಮಸ್ಯೆ ಅನುಭವಿಸಿದರು.  ‘ಬಸ್‌ ನಿಲ್ದಾಣವು ತಗ್ಗು ಪ್ರದೇಶದಲ್ಲಿರುವುದು ಹಾಗೂ ರಸ್ತೆಯು ಎತ್ತರದಲ್ಲಿರುವ ಕಾರಣ ಸುತ್ತಲೂ ನೀರು ಸಂಗ್ರಹವಾಗುತ್ತಿದೆ. ಎರಡೂ ರಸ್ತೆಗಳಲ್ಲಿನ ಮಳೆ ನೀರು ಬಸ್‌ ನಿಲ್ದಾಣಕ್ಕೆ ನುಗ್ಗುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಪಾಲಿಕೆ ಸದಸ್ಯರು ಆಯುಕ್ತರು ಈ ಬಗ್ಗೆ ಗಮನ ಹರಿಸಬೇಕು. ಬಸ್‌ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ರೈತ ಮುಖಂಡ ಬಲ್ಲೂರ್ ರವಿಕುಮಾರ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT