ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮೇನಲ್ಲಿ 15.7 ಸೆಂ.ಮೀ. ಮಳೆ

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ
Last Updated 22 ಮೇ 2022, 2:20 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮೇ 15ರವರೆಗೆ 16 ಮಿ.ಮೀ. ಮಳೆಯಾಗಬೇಕಿತ್ತು. 157 ಮಿ.ಮೀ.ಅಂದರೆ ಬಹುತೇಕ ಹತ್ತುಪಟ್ಟು ಅಧಿಕ ಮಳೆಯಾಗಿದೆ. ಭತ್ತದ ಬೆಳೆ ಚಾಪೆ ಹಾಸಿದಂತೆ ಬಿದ್ದಿರುವ ಕಾರಣ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜತೆಗೆ ಪ್ರವಾಹದ ಬಗ್ಗೆ ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಚನ್ನಗಿರಿ ತಾಲ್ಲೂಕಿನ ಜಯಂತಿ ನಗರ, ಕೋಟೆಹಾಳ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಪರಿಣಾಮ 87ಕ್ಕೂ ಹೆಚ್ಚಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಅವರಿಗೆ ಸಮುದಾಯ ಭವನ ಹಾಗೂ ಶಾಲೆಗಳಲ್ಲಿ ಆಶ್ರಯ ಕಲ್ಪಿಸಿ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಹರಿಹರ ತಾಲ್ಲೂಕಿನ ಭಾನುವಳ್ಳಿ, ಬೆಳ್ಳೂಡಿ ಹಾಗೂ ಹರಿಹರ ನಗರದ ಗಂಗಾನಗರಗಳಲ್ಲಿಯೂ ಕೂಡ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿತ್ತು, ಅಲ್ಲಿಯೂ 62 ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಚನ್ನಗಿರಿ ಭಾಗದಲ್ಲಿ ಪ್ರವಾಸ ಕೈಗೊಂಡು ಹಾನಿ ಪ್ರಮಾಣವನ್ನು ವೀಕ್ಷಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಐ ಸ್ಯಾಟ್ ಸರ್ವೇ ಪ್ರಕಾರ 4,449 ಹೆಕ್ಟೇರ್ ಭತ್ತದ ಬೆಳೆ ಹಾಗೂ ಸುಮಾರು 77 ಹೆಕ್ಟೇರ್ ಅಡಿಕೆ, ಬಾಳೆ, ತೆಂಗು, ಹಾಗೂ ಮಾವು ಬೆಳೆಗೆ ಹಾನಿಯಾಗಿದೆ. ಒಟ್ಟು 4526 ಹೆಕ್ಟೇರ್‌ನಷ್ಟು ವಿವಿಧ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 40 ಮನೆಗಳು ಸಂಪೂರ್ಣ ಹಾನಿ ಹಾಗೂ 265 ಮನೆಗಳು ಭಾಗಶಃ ಸೇರಿ ಒಟ್ಟು 305 ಮನೆಗಳಿಗೆ ಹಾನಿಯಾಗಿದೆ. 68 ಶಾಲೆಗಳು, 54 ಅಂಗನವಾಡಿಗಳಿಗೆ ಹಾನಿಯಾಗಿದ್ದು, 265 ವಿದ್ಯುತ್ ಕಂಬಗಳಿಗೆ ತೊಂದರೆಯಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಚನ್ನಪ್ಪ ಎ., ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ, ಡಿಯುಡಿಸಿ ಅಧಿಕಾರಿ ನಜ್ಮಾ, ಜಿಲ್ಲಾಮಟ್ಟದ ಅಧಿಕಾರಿಗಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT