ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸಂಪರ್ಕ ಬಂದ್: ₹ 2.83 ಕೋಟಿ ನಷ್ಟ ಅಂದಾಜು

Last Updated 21 ಮೇ 2022, 4:06 IST
ಅಕ್ಷರ ಗಾತ್ರ

ಹರಿಹರ: ಅಸನಿ ಚಂಡಮಾರುತದ ಮಳೆ ಆರ್ಭಟ ಐದನೇ ದಿನವಾದ ಶುಕ್ರವಾರವೂ ಮುಂದುವರಿದಿದೆ. ಗುರುವಾರ ಸುರಿದ ಸತತ ಮಳೆಗೆ ತಾಲ್ಲೂಕಿನ 4 ಸಾವಿರ ಎಕರೆ ಭತ್ತದ ಬೆಳೆಗೆ ಧಕ್ಕೆಯಾಗಿದ್ದರೆ, 25 ಮನೆಗಳಿಗೆ ಹಾನಿಯಾಗಿದ್ದು ಒಟ್ಟು ₹ 2.83 ಕೋಟಿ ನಷ್ಟ ಅಂದಾಜಿಸಲಾಗಿದೆ.

ಒಂದೆರಡು ವಾರಗಳಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕುರುಳಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ದುಸ್ಥಿತಿ ರೈತರು ಎದುರಿಸುತ್ತಿದ್ದಾರೆ. ಹಲವೆಡೆ ಜಮೀನುಗಳಲ್ಲಿ ಮಳೆ ನೀರು ಹಳ್ಳದಂತೆ ಹರಿಯುತ್ತಿದೆ, ಕೆಲ ಸೇತುವೆಗಳು ಜಲಾವೃತವಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಚಿಕ್ಕಬಿದರಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳೊಂದು ಮೃತಪಟ್ಟಿದೆ.

ಮನೆಗಳಿಗೆ ಹಾನಿ: ಭಾನುವಳ್ಳಿ-6, ಹೊಟ್ಟೆಗೇನಹಳ್ಳಿ- 2, ದೇವರಬೆಳಕೆರೆ-3, ಬನ್ನಿಕೋಡು-2 ಮತ್ತು ಕೊಂಡಜ್ಜಿ, ಸಾಲಕಟ್ಟಿ, ಗಂಗನರಸಿ, ಹನಗವಾಡಿ, ಎಳೆಹೊಳೆ, ವಾಸನ, ಸಿರಿಗೆರೆ, ಕಮಲಾಪುರ, ಸಂಕ್ಲೀಪುರ, ನಂದಿಗಾವಿ, ಕೊಕ್ಕನೂರು, ಕೆ.ಬೇವಿನಹಳ್ಳಿ ಹಾಗೂ ನಗರದ ತಲಾ ಒಂದು ಮನೆಗೆ ಭಾಗಶಃ ಹಾನಿಯಾಗಿದ್ದು ₹ 30 ಲಕ್ಷ ನಷ್ಟ ಅಂದಾಜಿಸಲಾಗಿದೆ.

ನದಿ ಹಿನ್ನೀರು ನುಗ್ಗಿ ಸಾರಥಿ ಸಮೀಪದ ದೊಡ್ಡಹಳ್ಳಕ್ಕೆ ಪ್ರವಾಹ ಬಂದಿದೆ. ಗ್ರಾಮದ ಸಮೀಪದ ಹಳ್ಳದ ಸೇತುವೆ ಜಲಾವೃತವಾಗಿದೆ. ಈ ಭಾಗದಲ್ಲಿ ಹೊಸ ಸೇತುವೆ ಕಾಮಗಾರಿ ಕೈಗೊಂಡಿದ್ದು, ಪಕ್ಕದಲ್ಲಿ ನಿರ್ಮಿಸಿದ್ದ ಸರ್ವಿಸ್ ರಸ್ತೆ ನೀರಲ್ಲಿ ಮುಳುಗಿದೆ. ಪರಿಣಾಮವಾಗಿ ಸಾರಥಿ ಚಿಕ್ಕಬಿದರಿ ಗ್ರಾಮಗಳ ಮಧ್ಯದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಜನತೆ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತ್ತಿ ಗ್ರಾಮದ ಮೂಲಕ ಸಂಚರಿಸಬೇಕಿದೆ.

ತುಂಗಭದ್ರೆಗೆ ಪ್ರವಾಹ: ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇನ್ನೆರಡು ದಿನ ಹೀಗೆಯೇ ಮಳೆ ಸುರಿದರೆ ನದಿಯಲ್ಲಿ ನೀರಿನ ಹರಿವು ಅಪಾಯ ಮಟ್ಟ ತಲುಪಿ ಮತ್ತಷ್ಟು ಬೆಳೆ, ಆಸ್ತಿ, ಪಾಸ್ತಿಗಳಿಗೆ ಹಾನಿಯಾಗುವ ಅಪಾಯವಿದೆ. ಮೈದುಂಬಿದ ತುಂಗಭದ್ರೆ ಕಣ್ತುಂಬಿಕೊಳ್ಳಲು ಜನರು ಸೇತುವೆ ಮೇಲೆ ಗುಂಪುಗೂಡುತ್ತಿದ್ದಾರೆ. ಮಳೆಗಾಲದ ಜುಲೈ, ಆಗಸ್ಟ್‌ನಲ್ಲಿ ಮೈದುಂಬಿ ಹರಿಯಬೇಕಿದ್ದ ನದಿಯು ಮುಂಗಾರು ಪೂರ್ವದಲ್ಲೇ ತುಂಬಿ ಹರಿಯುತ್ತಿದೆ. ನದಿ ಹಿನ್ನೀರು ಹರಿದು ಹಳ್ಳ, ಕೊಳ್ಳಗಳ ನೀರು ಹೊಲ–ಗದ್ದೆಗಳಿಗೆ ನುಗ್ಗುತ್ತಿದೆ. ಭತ್ತ ಹಾಗೂ ಇತರ ಬೆಳೆಗಳು ಜಲಾವೃತವಾಗಿವೆ.

ಎರಡು ಕಾಳಜಿ ಕೇಂದ್ರ
ಡಿ.ಬಿ.ಕೆರೆ ಹಳ್ಳದ ನೀರು ಹರಿದು ಕಾಳಿದಾಸನಗರ, ಬೆಂಕಿನಗರದ ಹಲವು ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ಹಲವು ಕುಟುಂಬಗಳನ್ನು ಅಂಜುಮನ್ ಶಾದಿ ಮಹಲ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಗಂಗಾನಗರದಲ್ಲಿ ಸೂಳೆಕೆರೆ ಹಳ್ಳದ ಹಿನ್ನೀರು ನುಗ್ಗುತ್ತಿರುವುದರಿಂದ ಮುಂಜಾಗ್ರತೆಯಾಗಿ ಅಲ್ಲಿಯ ಹಲವು ಕುಟುಂಬಗಳನ್ನು ಸಮೀಪದ ಎಪಿಎಂಸಿ ಗೋದಾಮಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ಆಹಾರದ ವ್ಯವಸ್ಥೆ ಇಲ್ಲ ಎಂದು ನಿರಾಶ್ರಿತರು ದೂರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT