ಶನಿವಾರ, ಮಾರ್ಚ್ 25, 2023
23 °C
ಹೂವು, ಹಣ್ಣುಗಳಿಗೆ ಏರದ ದರ * ಮಳೆಯ ಭೀತಿ ನಡುವೆ ವ್ಯಾಪಾರ

ಗಣೇಶನ ಹಬ್ಬಕ್ಕೆ ಖರೀದಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗಣೇಶನ ಹಬ್ಬಕ್ಕೆ ಖರೀದಿ ಜೋರಾಗಿತ್ತು. ಬೆಲೆ ವಿಪರೀತ ಹೆಚ್ಚಳ ಇರದೇ ಇದ್ದಿದ್ದು ಕೂಡ ಗ್ರಾಹಕರಲ್ಲಿ ಸಂತಸವನ್ನುಂಟು ಮಾಡಿತು.

ನಗರದ ಕೆ.ಆರ್‌. ಮಾರುಕಟ್ಟೆ, ಹಳೆ ಬಸ್‌ ನಿಲ್ದಾಣ, ಪಿ.ಬಿ. ರಸ್ತೆ, ಎಪಿಎಂಸಿ ಎದುರು, ನಿಟುವಳ್ಳಿ ಸಹಿತ ವಿವಿಧ ಕಡೆಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯಿತು.

ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ಎರಡು ವರ್ಷ ವಿಪರೀತ ನಿಯಮ ಪಾಲನೆಯ ನಡುವೆ ಖರೀದಿ ಮಾಡಬೇಕಿತ್ತು. ಈ ಬಾರಿ ಅಂಥ ನಿಯಮಗಳು ಇಲ್ಲದೇ ಇದ್ದಿದ್ದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳು ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲು ಅನುವು ಆಗಿತ್ತು. ಆದರೆ ಕೆಲವು ದಿನಗಳಿಂದ ಸುರಿಯತ್ತಿದ್ದ ಮಳೆ ಮಂಗಳವಾರವೂ ಆತಂಕವನ್ನು ಸೃಷ್ಟಿಸಿತ್ತು. ಹಬ್ಬಗಳು ಬಂದರೆ ಹೂವು ಹಣ್ಣುಗಳ ದರ ದುಪ್ಪಟ್ಟು ಆಗುತ್ತದೆ. ಆದರೆ ಈ ಬಾರಿ ದರ ವಿಪರೀತ ಏರಿಕೆಯಾಗಿರಲಿಲ್ಲ. ಬೇಗ ವ್ಯಾಪಾರ ಮುಗಿಸಿ ಕತ್ತಲಾಗುವ ಮುನ್ನ, ಮಳೆ ಬರುವ ಮುನ್ನ ಮನೆ ಸೇರುವ ಧಾವಂತದಲ್ಲಿ ಮಾರಾಟಗಾರರಿದ್ದರು. ಹಾಗಾಗಿ ಸಿಕ್ಕಿದ ದರಕ್ಕೆ ನೀಡುತ್ತಿರುವುದು ಕಂಡು ಬಂತು.

ಏಳಕ್ಕಿ ಬಾಳೆಹಣ್ಣು ಡಜನ್‌ಗೆ ₹ 20ರಿಂದ ₹ 60ರವರೆಗೆ ಇತ್ತು. ಪಚ್ಚೆಬಾಳೆ ₹ 20ರಿಂದ ₹ 40ರವರೆಗೆ ಮಾರಾಟವಾಯಿತು. ಸೇಬು, ದಾಳಿಂಬೆ ₹ 100ರಿಂದ ₹ 120,  ಮೂಸಂಬಿ, ಸೀತಾಫಲ ₹ 60, ದ್ರಾಕ್ಷಿ ₹ 150, ಕಾಕಡ, ಮಲ್ಲಿಗೆ, ಚೆಂಡು ಹೂವು, ಸೇವಂತಿ ಸಹಿತ ಮಾಲೆ ಹೂವುಗಳು ₹ 30ರಿಂದ ₹ 60ಕ್ಕೆ ಮಾರಾಟವಾಗುತ್ತಿದ್ದವು. ಗರಿಕೆ ಜೋಡಿ ಕಟ್ಟಿಗೆ ₹ 20, ಬಾಳೆಕಂದು ಜೋಡಿಗೆ ₹ 20ರಿಂದ ₹ 40, ತುಳಸಿ ಮಾಲೆಗೆ ₹ 40 ಹೀಗೆ ಎಂದಿನ ದರವೇ ಇತ್ತು.

‘ಜನರಲ್ಲಿಯೂ ದುಡ್ಡು ಓಡಾತ್ತಿಲ್ಲ. ಅಲ್ಲದೇ ಮಳೆಯ ಭೀತಿ ಬೇರೆ ಇದೆ. ಹಾಗಾಗಿ ವ್ಯಾಪಾರ ನಡೆದರೂ ಹಿಂದಿನಂತೆ ಲಾಭವಿಲ್ಲ. ಅಸಲು ಮತ್ತು ಬಂದು ಹೋಗುವ ಖರ್ಚು ಬಂದರೆ ಸಾಕು ಎಂದು ವ್ಯಾಪಾರ ಮಾಡುತ್ತಿದ್ದೇವೆ’ ಎಂದು ಹೀವು ವ್ಯಾಪಾರಿ ಅಂಜಿನಪ್ಪ ತಿಳಿಸಿದರು.

ದಿನಸಿ ವಸ್ತುಗಳ ಬೆಲೆ ಮಾತ್ರ ಹೆಚ್ಚಾಗಿತ್ತು. ತೋಗರಿ ಬೇಳೆ ಕೆ.ಜಿಗೆ ₹ 115, ಶೇಂಗಾ ₹ 120, ಕಡ್ಲೆ ಬೇಳೆ ₹ 70, ಅಡುಗೆ ಎಣ್ಣೆ ₹ 165, ಮೈದಾ ₹ 40 ಇತ್ತು.

ಮನೆ ಮನೆ ತಲುಪಿದ ವಿಗ್ರಹಗಳು

ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ತಮಗೆ ಬೇಕಾದ ಆಕೃತಿಯ ಗಣೇಶನ ವಿಗ್ರಹವನ್ನು ಮೊದಲೇ ಆರ್ಡರ್‌ ನೀಡಿ ಮಾಡಿಸಿಕೊಳ್ಳುತ್ತಾರೆ. ಮನೆಗಳಲ್ಲಿ ಇಡುವ ಸಣ್ಣ ಗಣೇಶನ ವಿಗ್ರಹಗಳನ್ನು ಮಾರುಕಟ್ಟೆಯಿಂದ ಖರೀದಿಸುವವರೇ ಹೆಚ್ಚು. ಹಾಗಾಗಿ ಎರಡು ಮೂರು ದಿನಗಳಿಂದ ಗಣೇಶನ ವಿಗ್ರಹಗಳ ಖರೀದಿ ನಡೆಯುತ್ತಿತ್ತು. ಮಂಗಳವಾರ ಇನ್ನೂ ಹೆಚ್ಚಾಗಿ ನಡೆಯಿತು.

ನಗರದ ಗಡಿಯಾರ ಕಂಬ, ಮಂಡಿ ಪೇಟೆ, ಚಾಮರಾಜ ಸರ್ಕಲ್, ಕಾಯಿ ಪೇಟೆ, ಪಿ.ಬಿ. ರಸ್ತೆ, ಕೊಂಡದ ಸರ್ಕಲ್, ಆರ್.ಹೆಚ್. ಚೌಟ್ರಿ ಸಹಿತ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿಯೇ ವಿಗ್ರಹ ಮಾರಾಟಗಳು ನಡೆದವು.

ಅರ್ಧ ಅಡಿಯಿಂದ ಹಿಡಿದು ಐದಾರು ಅಡಿಗಳವರೆಗೆ ಬಗೆ ಬಗೆಯ ಗಣೇಶ ಮೂರ್ತಿಗಳು ಮಾರಾಟಕ್ಕೆ ಇಡಲಾಗಿತ್ತು. ಪರಿಸರ ಸ್ನೇಹಿ ಗಣೇಶ, ಮಣ್ಣಿನ ಗಣೇಶ ವಿಗ್ರಹ ಮಾರಾಟ ಮಾಡಲಾಗುತ್ತಿತ್ತು. ₹ 200ರಿಂದ ಹಿಡಿದು ಸಾವಿರಾರು ರೂಪಾಯಿ ವರೆಗೆ ಬೆಲೆ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು