ದಾವಣಗೆರೆ: ಜಿಲ್ಲೆಯಲ್ಲಿ 2023ರ ಜನವರಿಯಿಂದ ಅಕ್ಟೋಬರ್‌ವರೆಗೆ 206 ಜನರಲ್ಲಿ ಎಚ್‌ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,069ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳ ಪೈಕಿ ದಾವಣಗೆರೆ ತಾಲ್ಲೂಕಿನಲ್ಲಿಯೇ ಈ ವರ್ಷ ಅತೀ ಹೆಚ್ಚು (110) ರೋಗಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಹರಿಹರ ತಾಲ್ಲೂಕಿನಲ್ಲಿ 37, ಜಗಳೂರು 29, ಚನ್ನಗಿರಿ 14, ಹೊನ್ನಾಳಿ ತಾಲ್ಲೂಕಿನಲ್ಲಿ 16 ಜನರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನ ಪಾಸಿಟಿವ್ ಪ್ರಮಾಣ ಜನಸಾಮಾನ್ಯರಲ್ಲಿ ಶೇ 0.34 ಹಾಗೂ ಗರ್ಭಿಣಿಯರಲ್ಲಿ ಶೇ 0.03 ರಷ್ಟಿದೆ. ಎಚ್‌ಐವಿ ಪಾಸಿಟಿವಿಟಿ ಪ್ರಮಾಣದಲ್ಲಿ ಜಿಲ್ಲೆಯು ರಾಜ್ಯದಲ್ಲಿ 18ನೇ ಸ್ಥಾನದಲ್ಲಿದೆ.
2018–19ರಲ್ಲಿ 445 ಸಾಮಾನ್ಯ ರೋಗಿಗಳಲ್ಲಿ ಹಾಗೂ 17 ಜನ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿತ್ತು. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಪತ್ತೆ ಪ್ರಕರಣಗಳ ಪ್ರಮಾಣ ಇಳಿಮುಖವಾಗುತ್ತಿವೆ. 2019–20ರಲ್ಲಿ 69,924 ಜನರಿಗೆ ಎಚ್‌ಐವಿ ರಕ್ತ ಪರೀಕ್ಷೆ ನಡೆಸಿದ್ದು, 332 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 12 ಜನ ಗರ್ಭಿಣಿಯರಲ್ಲೂ ಎಚ್‌ಐವಿ ಪತ್ತೆಯಾಗಿದೆ.
2020–21ರಲ್ಲಿ 37,583 ಜನರನ್ನು ಪರೀಕ್ಷಿಸಿದ್ದು, 140 ಜನರಲ್ಲಿ ಸೋಂಕು ಪತ್ತೆಯಾಗಿತ್ತು. 7 ಜನ ಗರ್ಭಿಣಿಯರಲ್ಲೂ ಎಚ್‌ಐವಿ ಪಾಸಿಟಿವ್ ಕಂಡುಬಂದಿತ್ತು.
2021–22ರಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, 49,379 ಜನರ ರಕ್ತ ಪರೀಕ್ಷೆ ಪೈಕಿ 226 ಜನರಲ್ಲಿ ಎಚ್‌ಐವಿ ದೃಢಪಟ್ಟಿದೆ. 7 ಜನ ಗರ್ಭಿಣಿಯರೂ ಸೋಂಕಿಗೆ ಒಳಗಾಗಿದ್ದಾರೆ.
2022–23ರಲ್ಲಿ 90,382 ಜನರನ್ನು ಪರೀಕ್ಷಿಸಿದ್ದು, 267 ಜನರಲ್ಲಿ ಎಚ್‌ಐವಿ ಕಾಣಿಸಿಕೊಂಡಿದೆ. 12 ಜನ ಗರ್ಭಿಣಿಯರಿಗೂ ಅವರಲ್ಲಿ ಸೇರಿದ್ದಾರೆ.
ಗರ್ಣಿಣಿಯರಿಗೆ ಕಡ್ಡಾಯವಾಗಿ ಎಚ್‌ಐವಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಈ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ 26,841 ಗರ್ಭಿಣಿಯರಿಗೆ ಎಚ್‌ಐವಿ ರಕ್ತ ಪರೀಕ್ಷೆ ನಡೆಸಿದ್ದು, 10 ಜನರಲ್ಲಿ ಸೋಂಕು ಕಂಡುಬಂದಿದೆ.
ಜಿಲ್ಲಾ ಎಚ್‌ಐವಿ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕವು ಜಿಲ್ಲೆಯಲ್ಲಿ ಎಚ್‌ಐವಿ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಯತ್ನಿಸುತ್ತಿದೆ. ಏಡ್ಸ್‌ನಿಂದ ರೋಗಿಗಳ ಸಾವು ತಡೆಯುವುದು, ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಿ, ಅವರನ್ನು ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯದಲ್ಲಿ ತೊಡಗಿದೆ.
ಜಿಲ್ಲೆಯಲ್ಲಿ 2 ಎ.ಆರ್.ಟಿ.ಗಳಿವೆ (ಚಿಕಿತ್ಸಾ ಕೇಂದ್ರ). ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಚನ್ನಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿನ ಕೇಂದ್ರಗಳಲ್ಲಿ 14,625 ಎಚ್‌ಐವಿ ಸೋಂಕಿತರು ಹೆಸರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 5,083 ರೋಗಿಗಳು ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 9 ಉಪ ಎ.ಆರ್.ಟಿ.ಗಳಿವೆ.
11 ಸಮಗ್ರ ಆಪ್ತ ಸಮಾಲೋಚನೆ ಹಾಗೂ ರಕ್ತ ಪರೀಕ್ಷಾ ಕೇಂದ್ರಗಳಿವೆ (ಐ.ಸಿ.ಟಿ.ಸಿ). 90 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆಪ್ತ ಸಮಾಲೋಚನೆ ಹಾಗೂ ಎಚ್‌ಐವಿ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಂಆ್ಯಂಡ್‌ಇ (ಮೌಲ್ಯಮಾಪಕ) ಸಹಾಯಕ ದೊಡ್ಡಬಸಪ್ಪ ಮಾಹಿತಿ ನೀಡಿದರು.
ಎಚ್‌ಐವಿ ಏಡ್ಸ್ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 1ರಂದು ‘ವಿಶ್ವ ಏಡ್ಸ್ ದಿನ’ ಆಚರಿಸಲಾಗುತ್ತಿದೆ. ‘ಸಮುದಾಯಗಳು ಮುನ್ನಡೆಸಲಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮ ನಡೆಸಲಾಗುತ್ತಿದೆ.
ಎಚ್ಐವಿ ಸೋಂಕು ಹರಡುವ ವಿಧಾನ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ವರ್ಷದಿಂದ ವರ್ಷಕ್ಕೆ ಅರಿವು ಮೂಡುತ್ತಿರುವುದರಿಂದ ಎಚ್‌ಐವಿ ಸೋಂಕಿತರ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಸೋಂಕಿತರು ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ
–ಡಾ. ಷಣ್ಮುಖಪ್ಪ ಎಸ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಎಚ್‌ಐವಿ ಸೋಂಕಿತರು ನಿರಂತರವಾಗಿ ಔಷಧೋಪಚಾರ ಪಡೆಯಬೇಕು. ಆತಂಕದಿಂದ ಹೊರಬರಬೇಕು. ಸೋಂಕು ತಡೆಗಟ್ಟಲು ಸಂಘ– ಸಂಸ್ಥೆಗಳೊಂದಿಗೆ ಘಟಕವು ಕಾರ್ಯನಿರ್ವಹಿಸುತ್ತಿದೆ
–ಡಾ.ಡಿ.ಪಿ. ಮುರಳೀಧರ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಎಚ್ಐವಿ ಏಡ್ಸ್ ನಿಯಂತ್ರಣ ಘಟಕ
ಸರ್ಕಾರೇತರ ಸಂಸ್ಥೆಗಳ ನೆರವು
ಎಚ್‌ಐವಿ ಸೋಂಕಿತರ ಬದುಕು ಸುಂದರಗೊಳಿಸಲು ಹಲವು ಸರ್ಕಾರೇತರ ಸಂಘ– ಸಂಸ್ಥೆಗಳು ಜಿಲ್ಲೆಯಲ್ಲಿ ಶ್ರಮಿಸುತ್ತಿವೆ. ಆಪ್ತ ಸಮಾಲೋಚನೆ ಸೋಂಕಿತರ ಮಕ್ಕಳಿಗೆ ಶಿಕ್ಷಣ ಚಿಕಿತ್ಸೆ ಪಡೆಯಲು ಪ್ರೋತ್ಸಾಹ ಸಾಮಾಜಿಕ ಸೌಲಭ್ಯ ಒದಗಿಸುವುದು ಸೇರಿದಂತೆ ಎಚ್‌ಐವಿ ಸೋಂಕಿತರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಎನ್‌ಜಿಒಗಳು ಕಾರ್ಯ ನಿರ್ವಹಿಸುತ್ತಿವೆ. ‘ಸಂಜೀವಿನಿ ನೆಟ್‌ವರ್ಕ್’ (ಸಿ.ಎಸ್.ಸಿ) ‘ದುರ್ಗಾ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ’ ‘ಅಭಯ ಸ್ಪಂದನ ಎಂ.ಎಸ್.ಎಂ.’ (ಟಿಐ) ಸಂಘಟನೆಗಳು ಎಚ್‌ಐವಿ ಸೋಂಕಿತರಿಗಾಗಿ ಕೆಲಸ ನಿರ್ವಹಿಸುತ್ತಿವೆ.
ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಇಂದು
ನಗರದ ಎ.ವಿ. ಕಮಲಮ್ಮ ಮಹಾವಿದ್ಯಾಲಯದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಡಿಸೆಂಬರ್ 1ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯು ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಎಂವಿ. ವೆಂಕಟೇಶ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಡಿಎಚ್‌ಒ ಡಾ.ಎಸ್. ಷಣ್ಮುಖಪ್ಪ ಹಾಜರಿರುವರು. ಜಾಥಾ: ಬೆಳಿಗ್ಗೆ 9 ಗಂಟೆಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಮುಂಭಾಗದಿಂದ ಕಾಲೇಜುವರೆಗೆ ಜಾಥಾ ನಡೆಯಲಿದೆ. ಸಂಜೆ 6ಕ್ಕೆ ನಗರದ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಏಡ್ಸ್‌ನಿಂದ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಅರ್ಪಿಸಲು ‘ಮೊಂಬತ್ತಿ ಬೆಳಕು ಸ್ಮರಣೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.