ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಪಕ್ಷಿಗಳ ದಾಹ ನೀಗಿಸುವ ಹುಸೇನ್ ಸುರಸಂಗಿ

Published 8 ಏಪ್ರಿಲ್ 2024, 6:53 IST
Last Updated 8 ಏಪ್ರಿಲ್ 2024, 6:53 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಬರದ ಬಿಸಿ ಪ್ರಾಣಿ– ಪಕ್ಷಿಗಳಿಗೂ ತಟ್ಟಿದೆ. ಬಾಯಾರಿಕೆ ನೀಗಿಸಿಕೊಳ್ಳುವ ಸಲುವಾಗಿ ಪಕ್ಷಿಗಳು ನೀರಿನ ಸೆಲೆಯ ಹುಡುಕಾಟ ನಡೆಸಿವೆ. ಇದನ್ನರಿತ ಸಮೀಪದ ಕರೆಬಿಳಚಿ ಬೆಸ್ಕಾಂ ನೌಕರ ಹುಸೇನ್ ಸುರಸಂಗಿ ಅವರು ತಮ್ಮ ಮನೆಯಂಗಳದಲ್ಲಿನ ಮರಗಳಿಗೆ ತೂಗು ತೊಟ್ಟಿ ಕಟ್ಟಿ ನೀರು ತುಂಬಿಸುವ ಮೂಲಕ ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ.

ಹುಸೇನ್ ಸುರಸಂಗಿ ಅವರು ಮೂಲತಃ ಬಿಜಾಪುರ ಜಿಲ್ಲೆ ವಡವಡಗಿ ಗ್ರಾಮದವರಾಗಿದ್ದು, ಬೆಸ್ಕಾಂನಲ್ಲಿ ಲೈನ್ ಮನ್ ಆಗಿ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಕೆರೆಬಿಳಚಿಯಲ್ಲಿ ನೆಲೆಸಿದ್ದಾರೆ.

‘ಕಳೆದ ಬೇಸಿಗೆಯಲ್ಲಿ ಮನೆಯಂಗಳದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಳೆಯಲ್ಲಿ ಇದ್ದ ನೀರನ್ನು ಹಕ್ಕಿಯೊಂದು ಹೆಕ್ಕಿ ಹೆಕ್ಕಿ ಕುಡಿಯುತ್ತಿದ್ದ ದೃಶ್ಯ ಮನಃ ಕಲಕಿತು. ಅಂದೇ ಮನೆಯಂಗಳದಲ್ಲಿರುವ ಮರಗಳಿಗೆ ಸಣ್ಣ ಪ್ಲಾಸ್ಟಿಕ್ ತೂಗು ಬುಟ್ಟಿ ಕಟ್ಟುವ ಸಂಕಲ್ಪ ಮಾಡಿದೆ. ನೀರು ತುಂಬಿಸಿದ ಎರಡೇ ದಿನಕ್ಕೆ ಖಾಲಿ ಆಗುತ್ತಿತ್ತು. ಈ ವರ್ಷ ಬರಗಾಲದಿಂದಾಗಿ ನೀರಿಗಾಗಿ ಪಕ್ಷಿಗಳು ಧಾವಿಸುತ್ತಿವೆ. ತಲಾ ಎರಡು ಲೀಟರ್‌ ನೀರು ಹಿಡಿದಿಡುತ್ತೇವೆ. ನೀರು ಕುಡಿಯಲು ಬರುವ ವೈವಿಧ್ಯಮಯ ಪಕ್ಷಿಗಳನ್ನು ನೋಡುವುದೇ ಚಂದ. ಕೆಲವೊಮ್ಮೆ ಅಪರೂಪದ ಪಕ್ಷಿಗಳು ನೀರು ಕುಡಿಯಲು ಬರುವುದು ಅಚ್ಚರಿ ಮೂಡಿಸಿದೆ’ ಎನ್ನುತ್ತಾರೆ ಹುಸೇನ್.

ಪಕ್ಷಿಗಳು ನೀರು, ಆಹಾರ, ರಕ್ಷಣೆ, ಸಂತಾನೋತ್ಪತ್ತಿ, ಜೀವನ ಕ್ರಮದಲ್ಲಿ ಸ್ಥಳೀಯ ಸಂಪನ್ಮೂಲಗಳ ಲಭ್ಯತೆ ಗ್ರಹಿಸಿ ನೆಲೆ ನಿಲ್ಲುತ್ತವೆ. ಪೊದೆ ನಿರ್ಮಾಣ, ಆಹಾರ ಸುಲಭವಾಗಿ ಸಿಕ್ಕರೂ ನೀರು ಬಯಲಲ್ಲಿ ಸಿಗುವುದು ದುಸ್ತರ. ಇದನ್ನರಿತು ಪ್ರಾಣಿ– ಪಕ್ಷಿಗಳಿಗೆ ನೀರು, ಆಹಾರ ಪೂರೈಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಪಾರಿವಾಳ, ಕಾಗೆ, ಸಾಂಬರ್ ಕಾಗೆ, ಗಿಳಿ, ಗುಬ್ಬಚ್ಚಿ, ಕೌಜುಗ, ಮೈನಾ, ಕೋಗಿಲೆ, ಮಿಂಚುಳ್ಳಿ, ಗೂಬೆ, ಮರಕುಟುಕ, ಪಿಕಳಾರ, ಗೀಜಗ, ಗೊರವಂಕ, ಸಿಂಪಿಗ, ಡ್ರೊಂಗೋ, ಸೂರಕ್ಕಿ ಮುಂತಾದ ವೈವಿಧ್ಯಮಯ ಪಕ್ಷಿಗಳು ಮನೆಯಂಗಳಕ್ಕೆ ಬಂದು ನೀರು ಗುಟುಕರಿಸುತ್ತವೆ. ಅಳಿಲುಗಳು ನೀರು ಕುಡಿದು ಜಿಗಿಯುತ್ತವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಕಡು ಬೇಸಿಗೆಯಲ್ಲಿ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪಕ್ಷಿಗಳಿಗೆ ನೀರುಣಿಸುವುದು ಪುಣ್ಯದ ಕೆಲಸ. ಮನೆ ಪಕ್ಕದಲ್ಲಿ ವಾಸವಾಗಿರುವ ಹುಸೇನ್ ಸುರಸಂಗಿ ಅವರು ಕಳೆದೆರಡು ವರ್ಷದಿಂದ ಪಕ್ಷಿಗಳಿಗಾಗಿ ಮರಕ್ಕೆ ಬುಟ್ಟಿ ಕಟ್ಟಿ ನೀರು ಪೂರೈಸುತ್ತಿರುವುದು ಮಾದರಿಯ ಕೆಲಸ ಎಂದು ಗ್ರಾಮದ ಅಸ್ಲಂ ಸಂತಸ ವ್ಯಕ್ತಪಡಿಸಿದರು.

ಹುಸೇನ್ ಅವರ ಮನೆ ಆವರಣದಲ್ಲಿ ನೀರು ಕುಡಿಯಲು ಹಾರಿ ಬಂದ ಪಕ್ಷಿ
ಹುಸೇನ್ ಅವರ ಮನೆ ಆವರಣದಲ್ಲಿ ನೀರು ಕುಡಿಯಲು ಹಾರಿ ಬಂದ ಪಕ್ಷಿ
ಪ್ಲಾಸ್ಟಿಕ್‌ ಬುಟ್ಟಿಯಿಂದ ನೀರು ಕುಡಿಯುತ್ತಿರುವ ಹಕ್ಕಿ
ಪ್ಲಾಸ್ಟಿಕ್‌ ಬುಟ್ಟಿಯಿಂದ ನೀರು ಕುಡಿಯುತ್ತಿರುವ ಹಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT