ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಕೆರೆಗೆ ನೀರು ತುಂಬಿಸಲು 22ಕ್ಕೆ ಚಾಲನೆ: ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ

Last Updated 13 ಜೂನ್ 2020, 16:03 IST
ಅಕ್ಷರ ಗಾತ್ರ

ದಾವಣಗೆರೆ: 22 ಕೆರೆಗಳಿಗೆ ನೀರು ತುಂಬಿಸಲು ರಾಜನಹಳ್ಳಿ ಏತ ನೀರಾವರಿಗೆ ಜೂನ್ 22ರಂದು ಚಾಲನೆ ನೀಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆಯ ನಿರ್ವಹಣೆ ಮತ್ತು ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿನ ಪೈಪ್‌ಲೈನ್‌ ಸ್ಥಳಾಂತರ ಕಾಮಗಾರಿ ಬಗ್ಗೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಸಮರ್ಪಕವಾಗಿ ಜಾರಿಯಾಗಿಲ್ಲ. ಇದಕ್ಕೆ ಗುತ್ತಿಗೆದಾರರ ಬೇಜವಾಬ್ದಾರಿ ಕಾರಣ. ಜತೆಗೆ ತಾಂತ್ರಿಕ ತೊಂದರೆಗಳೂ ಕಾಣಿಸಿಕೊಂಡಿದ್ದವು ಎಂದರು.

ಈ ಬಾರಿ ಕೆರೆಗಳಿಗೆ ನೀರು ತಲುಪಿಸಲಾಗುವುದು. ಎಲ್ಲ ಕಾಮಗಾರಿಗಳು ಮುಗಿದಿವೆ. ಈ ಯೋಜನೆ ಸಫಲವಾಗಬೇಕಾದರೆ ರೈತರು ಸಹಕಾರ ನೀಡಬೆಕು. ವಾಲ್ವ್‌ಗಳನ್ನು, ಪೈಪ್‌ಗಳನ್ನು ಒಡೆಯಬಾರದು. ಎಲ್ಲ ರೈತರು ಚೆನ್ನಾಗಿರಬೇಕು ಎಂದರೆ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು. ಎಲ್ಲ ಕೆರೆಗಳಿಗೆ ನೀರು ಹೋಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ತುಂಗಭದ್ರಾ ನದಿಗೆ ಅಡ್ಡಲಾಗಿ 33 ಅಡಿ ಬ್ಯಾರೇಜ್ ನಿರ್ಮಿಸಲಾಗಿದೆ. ನದಿಯಿಂದ ಜಾಕ್‌ವೆಲ್‌ ವರೆಗಿನ 240 ಮೀಟರ್‌ವರೆಗಿನ ಕಾಲುವೆಯಲ್ಲಿ 1 ಅಡಿ ಕಸಕಡ್ಡಿ ತುಂಬಿದ್ದು, ಅದನ್ನು ಸ್ವಚ್ಛ ಮಾಡಲಾಗುವುದು. ಬೆಸ್ಕಾಂ ಸಹ ಅನಿರ್ಬಂಧಿತ ವಿದ್ಯುತ್ ನೀಡುವ ಭರವಸೆ ನೀಡಿದೆ ಎಂದು ವಿವರ ನೀಡಿದರು.

ಜೂನ್‌ನಿಂದ ನವೆಂಬರ್‌ವರೆಗೆ ಒಟ್ಟು 180 ದಿನಗಳ ವರೆಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳಿಗೆ ಹರಿಸಲಾಗುವುದು. ಹರಿಹರ ತಾಲ್ಲೂಕಿನಲ್ಲಿ ಹಲಸಬಾಳು ಗ್ರಾಮದ ಬಳಿ ನದಿಯಿಂದ 100 ಮೀಟರ್ ಎತ್ತರಕ್ಕೆ ನೀರನ್ನೆತ್ತಿ 28 ಕಿ.ಮೀ. ದೂರದಲ್ಲಿರುವ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ ಕೆರೆಗೆ ನೀರು ಹರಿಸಲಾಗುವುದು. ಅಲ್ಲಿಂದ 70 ಮೀಟರ್ ಎತ್ತರಕ್ಕೆ ನೀರೆತ್ತಿ ಒಟ್ಟು 150 ಕಿ.ಮೀ ಪೈಪ್‌ಲೈನ್ ಮೂಲಕ ಯೋಜಿತ ಕೆರೆಗಳಿಗೆ ನೀರೊದೊಗಿಸಲಾಗುವುದು ಎಂದು ವಿವರಿಸಿದರು.

‘ರಾಜನಹಳ್ಳಿ ಜಾಕ್‌ವೆಲ್ ಯೋಜನೆಗೆ ಸಂಬಂಧಿಸಿದಂತೆ ಇನ್ನು 5.5 ಕಿ.ಮೀ ಪೈಪ್‌ಲೈನ್ ಕೆಲಸ ಬಾಕಿ ಇದೆ. ಮೂರು ಕಡೆ ಅಂತರವಿದೆ. ಒಂದು ವಾರದೊಳಗೆ ಆ ಕೆಲಸವನ್ನು ಪೂರ್ಣಗೊಳಿಸಲಾಗುವುದು’ ಎಂದು ನೀರಾವರಿ ಭದ್ರನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಪ್ಪ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ-4ರ ಸರಪಳಿ 260ರಿಂದ 274ರವರೆಗೆ ಆಯ್ದ ಭಾಗಗಳಲ್ಲಿ ಒಟ್ಟು ಉದ್ದ 12 ಕಿ.ಮೀ ಗಳಲ್ಲಿ 6.25 ಕಿ.ಮೀ ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ತಡವಾದ್ದರಿಂದ ಈ ಕಾಮಗಾರಿ ಬಾಕಿ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನಪ್ಪ ತಿಳಿಸಿದರು.

‘ಶಾಮನೂರು ಬಳಿ ಈ ಸಮಸ್ಯೆ ಇದ್ದು ನಾನು, ಎಸಿ ಮತ್ತು ತಹಶೀಲ್ದಾರ್ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅಲ್ಲಿಗೆ ಭೇಟಿ ನೀಡಿ ಕ್ರಮ ವಹಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಶಾಸಕ ಪ್ರೊ.ಲಿಂಗಣ್ಣ, 22 ಕೆರೆಗಳಿಗೆ ನೀರು ತುಂಬಿಸುವ ಯೋಜನಾ ಸಮಿತಿಯ ಅಧ್ಯಕ್ಷ ಡಾ.ಮಂಜುನಾಥ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಎಎಸ್‌ಪಿ ರಾಜೀವ್, ಎಸಿ ಮಮತಾ ಹೊಸಗೌಡರ್ ದಾವಣಗೆರೆ ತಹಶೀಲ್ದಾರ್ ಗಿರೀಶ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಅವರೂ ಇದ್ದರು.

‘ಕಳಪೆ ಕಾಮಗಾರಿ ತಡವಾಗಲು ಕಾರಣ’

ಎಲ್‌ ಆ್ಯಂಡ್‌ ಟಿ ಕಂಪನಿ ಮಲ್ಟಿನ್ಯಾಷನಲ್‌ ಕಂಪನಿ ಆಗಿರುವುದರಿಂದ ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬ ಭರವಸೆ ಇತ್ತು. ಆದರೆ ಅವರು ಭರವಸೆ ಉಳಿಸಿಕೊಳ್ಳಲಿಲ್ಲ. ಕಳಪೆ ಕಾಮಗಾರಿ ಮಾಡಿದರು. ಇದರಿಂದ ಕಾಮಗಾರಿ ಸಮಸ್ಯೆ ಉಂಟಾಗಿದೆ. ಸದ್ಯಕ್ಕೆ ಹೊಸ ಪೈಪ್‌ಲೈನ್‌ ಇಲ್ಲದ ಕಡೆ ಹಳೇ ಪೈಪ್‌ಲೈನ್‌ ಅನ್ನೇ ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತದೆ. ಮಳೆಗಾಲದ ನಂತರ ಉಳಿದ ಹೊಸ ಪೈಪ್‌ಲೈನ್‌ ಹಾಕಲಾಗುತ್ತದೆ ಎಂದು 22 ಕೆರೆ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಮಂಜುನಾಥ ಗೌಡ ಪ್ರತಿಕ್ರಿಯಿಸಿದರು.

‘ಕಾಮಗಾರಿ ಮುಗಿಸದೇ ಟೋಲ್‌ ಸಂಗ್ರಹ ಯಾಕೆ?’

‘ಹೊಸಪೇಟೆ ಚಿತ್ರದುರ್ಗ ರಸ್ತೆ ಕಾಮಗಾರಿ 2019ರಲ್ಲಿ ಮುಗಿಯಬೇಕಿತ್ತು. ಇನ್ನೂ ಮುಗಿದಿಲ್ಲ. ಆದರೂ ಟೋಲ್‌ ಸಂಗ್ರಹ ಮಾಡುತ್ತಿದ್ದೀರಿ. ಇಲ್ಲಿ ಹೆಬ್ಬಾಳ್‌ನಲ್ಲಿಯೂ ಅಧಿಕ ಟೋಲ್‌ ಸಂಗ್ರಹಿಸುತ್ತೀರುವಿರಿ. ರಸ್ತೆ ಸರಿ ಮಾಡದೇ ಹಣ ಸಂಗ್ರಹಿಸಿದರೆ ಜನ ನಮ್ಮನ್ನು ಕೇಳುತ್ತಾರೆ. ನೀವು ಸ್ವಲ್ಪ ಸಮಯ ಇರುತ್ತೀರಿ. ಆಮೇಲೆ ಇನ್ನೊಂದು ಕಡೆ ಹೋಗಿ ಬಿಡುತ್ತೀರಿ’ ಎಂದು ಅಧಿಕಾರಿಗಳ ವಿರುದ್ಧ ಸಂಸದರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT