ಗುರುವಾರ , ಸೆಪ್ಟೆಂಬರ್ 29, 2022
28 °C
1,156 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಕೆಐಎಡಿಬಿ

ಕೈಗಾರಿಕಾ ಕಾರಿಡಾರ್‌ನ ಬಲೆ: ರೈತರ ಕಣ್ಣೀರಿಗಿಲ್ಲ ಬೆಲೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೈಗಾರಿಕಾ ಕಾರಿಡಾರ್‌ ಎಂಬ ಶಬ್ದವನ್ನು ಕೇಳಿದರೇ ಈ ಊರಿನ ಜನರು ಬೆಚ್ಚಿ ಬೀಳುತ್ತಾರೆ. ಎಲ್ಲಿ ತಮ್ಮ ಕೃಷಿ ಭೂಮಿ ಕೈ ತಪ್ಪಿ ಹೋಗುತ್ತದೋ ಎಂದು ಆತಂಕಕ್ಕೆ ಈಡಾಗುತ್ತಾರೆ.

ಇದು ದಾವಣಗೆರೆ ತಾಲ್ಲೂಕಿನ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಗ್ರಾಮದ ರೈತರ ನಿದ್ದೆಗೆಡಿಸಿರುವ ವಿದ್ಯಮಾನ. ಕೈಗಾರಿಕಾ ಕಾರಿಡಾರ್‌ಗೆ ಯಾವಾಗ ಸಮೀಕ್ಷೆ ನಡೆದಿದೆ, ಯಾವಾಗ ಅನುಮೋದನೆ ಸಿಕ್ಕಿದೆ ಎಂಬುದೇ ರೈತರಿಗೆ ಗೊತ್ತಿಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ನೋಟಿಸ್‌ ಬಂದಾಗಲೇ ತಮ್ಮ ಜಮೀನು ಕೈಬಿಡಲಿದೆ ಎಂಬುದು ವರಿಗೆ ಗೊತ್ತಾಗಿದೆ.

ಅಣಜಿ ಕೆರೆ, ಗೊಲ್ಲರಹಳ್ಳಿ ರಾಜಕೆರೆ, ತುಂಬಿಗೆರೆ, ಅಗಸನಕಟ್ಟೆ ಕೆರೆ ಹೀಗೆ ಈ ಗ್ರಾಮಗಳ ಸುತ್ತಲೂ ಕೆರೆಗಳಿವೆ. ಈ ಬಾರಿ ಎಲ್ಲ ಕೆರೆಗಳು ತುಂಬಿ ಕೋಡಿಹರಿದಿವೆ. ನೀರಾವರಿ ಸೌಲಭ್ಯ ಇರುವುದರಿಂದ ಇಲ್ಲಿ ಅಡಿಕೆ, ತೆಂಗಿನ ತೋಟಗಳಿವೆ. ಮೆಕ್ಕೆಜೋಳ, ಬಿಳಿಜೋಳ, ಗೋಧಿ, ಸೂರ್ಯಕಾಂತಿ, ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ, ಕಡ್ಲೆಬೇಳೆ ಸಹಿತ ಮಳೆಗಾಲ, ಬೇಸಿಗೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಇಂಥ ನೀರಾವರಿ ಪ್ರದೇಶದ ಮೇಲೇ ಸರ್ಕಾರದ ಕಣ್ಣು ಬಿದ್ದಿದೆ.

‘ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ನಾವು ಆಕ್ಷೇಪ ಸಲ್ಲಿಸಲು ಹೋದರೆ, ‘ಸರ್ಕಾರ ನಿಮಗೆ ಪಡಿತರ ನೀಡುತ್ತದೆ, ಭೂಮಿಗೆ ಒಳ್ಳೆಯ ಬೆಲೆ ಸಿಗುತ್ತದೆ, ಕುಟುಂಬ ಸದಸ್ಯರಿಗೆ ಉದ್ಯೋಗ ಸಿಗುತ್ತದೆ’ ಎಂಬ ಸಬೂಬು ನೀಡಿ ಹಲವು ರೈತರ ಮನವೊಲಿಸಲಾಗಿದೆ. ಒಪ್ಪದವರನ್ನು, ‘ನೀವು ರೈತರೇ ಅಲ್ಲ, ಬೇರೆಯವರು ದುಡ್ಡು ಕೊಟ್ಟು ಕರೆದುಕೊಂಡು ಬಂದಿದ್ದಾರೆ’ ಎಂದು ಕೆಐಎಡಿಬಿ ಅಧಿಕಾರಿಗಳು ಹೇಳಿದ್ದಾರೆ. ಅನಕ್ಷರಸ್ಥ ರೈತರೂ ಜಮೀನು ನೀಡಲು ನಿರಾಕರಿಸಿದ್ದರು. ಅದಕ್ಕೆ, ‘ನೀವು ಭೂಮಿ ಕೊಡುವುದಿಲ್ಲವೆಂದು ಹೆಬ್ಬೆಟ್ಟು ಹಾಕಿ’ ಎಂದು ಸಹಿ ಪಡೆದಿದ್ದಾರೆ. ಆದರೆ ಆ ಪತ್ರದಲ್ಲಿ ಭೂಮಿ ಕೊಡಲು ಒಪ್ಪಿಗೆ ಇದೆ ಎಂದು ಬರೆಯಲಾಗಿತ್ತು. ಅದಕ್ಕೆ ಊರಿನ ಚೌಡಮ್ಮ ಅವರೇ ಉದಾಹರಣೆ ಎಂದು ಮೆಳ್ಳೆಕಟ್ಟೆಯ ರೈತ ಮಹಿಳೆಯರಾದ ಉಮಾ, ಅಂಬುಜಾ, ಸುಮಾ, ಪ್ರೇಮಾ ಮತ್ತಿತರರು ಹೇಳಿಕೊಂಡರು.

‘ನಾವು ಸತ್ತರೂ ಈ ಭೂಮಿಯನ್ನು ಬಿಡುವುದಿಲ್ಲ. ಕಾರಿಡಾರ್‌ ಎಲ್ಲಿ ಬೇಕಾದರೂ ಮಾಡಬಹುದು. ಆದರೆ ಕೃಷಿಯನ್ನು ಎಲ್ಲಿ ಬೇಕಾದರೂ ಮಾಡಲು ಸಾಧ್ಯವಿಲ್ಲ’ ಎಂದು ನವೀನಾ ಅಶೋಕ್‌, ಡಿ.ಜಿ. ಪರಮೇಶ್ವರಪ್ಪ, ಪತ್ರಪ್ಪ, ಕೆಂಚಮ್ಮ ಮುಂತಾದವರು ತಮ್ಮ ನಿಲುವನ್ನು ಪ್ರಕಟಿಸಿದರು.

‘ಕೈಗಾರಿಕಾ ಸಚಿವರು ಎಲ್ಲೋ ಕುಳಿತು ನಮ್ಮ ಜಮೀನು ವಶಪಡಿಸಿಕೊಳ್ಳಲು ಅನುಮೋದನೆ ನೀಡಿದ್ದಾರೆ. ರಾತ್ರೋರಾತ್ರಿ ಸರ್ವೆ ಮಾಡಿರಬೇಕು. ನಮಗೆ ಸರ್ವೆ ಮಾಡಿರುವುದೇ ಗೊತ್ತಿಲ್ಲ. ಕೃಷಿ ಇಲಾಖೆಗೆ ಗೊತ್ತಿದ್ದೂ ಯಾರದೋ ಪ್ರಭಾವಕ್ಕೆ ಒಳಗಾಗಿ ಇದನ್ನು ಬಂಜರು ಭೂಮಿ ಎಂದು ವರದಿ ನೀಡಿದ್ದಾರೆ. ಹಿಂದೆ ಜಿಲ್ಲೆಯಲ್ಲಿ ಬರಗಾಲ ಬಂದಾಗಲೂ ಇಲ್ಲಿ ಜೋಳ ಬೆಳೆಯಲಾಗಿತ್ತು’ ಎಂದು ರೈತರಾದ ಎಂ.ಎಸ್‌. ನಾಗರಾಜ್‌, ವೀರಬಸಪ್ಪ, ಪ್ರದೀಪ್‌ ನೆನಪಿಸಿಕೊಂಡರು.

357 ಕುಟುಂಬಗಳ 1,156 ಎಕರೆ ಭೂಮಿಯಲ್ಲಿ ಮೆಳ್ಳೆಕಟ್ಟೆ ಒಂದೇ ಗ್ರಾಮದ ಸುಮಾರು 900 ಎಕರೆ ಭೂಮಿ ಇದೆ. ಭೂಮಿ ಕಳೆದುಕೊಂಡರೆ ಈ ಗ್ರಾಮದ ಎಲ್ಲರೂ ಗುಳೇ ಹೋಗಬೇಕಾದ ಪರಿಸ್ಥಿತಿ ಬಂದೊದಗಲಿದೆ. 22 ಕೆರೆ ನೀರು ತುಂಬಿಸುವ ಯೋಜನೆಯನ್ನು ಸಿರಿಗೆರೆ ಸ್ವಾಮೀಜಿ ಯಶಸ್ವಿಗೊಳಿಸಿದ್ದಾರೆ. ಹಾಗಾಗಿ ನೀರು ಬಂದಿದೆ. ಈ ಖುಷಿಯನ್ನು ಅನುಭವಿಸದಂಥ ಸ್ಥಿತಿಗೆ ಕೆಐಎಡಿಬಿ ಅಧಿಕಾರಿಗಳು ಗ್ರಾಮಸ್ಥರನ್ನು ದೂಡುತ್ತಿದ್ದಾರೆ ಎಂದು ಅವರು ದೂರಿದರು.

‘ಕಾರಿಡಾರ್‌ಗೆ ವಿರೋಧವಲ್ಲ’

‘ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್‌ ಮಾಡುವುದಕ್ಕೆ ನಮ್ಮ ವಿರೋಧವಲ್ಲ. ಇಂಥ ಫಲವತ್ತಾದ ಭೂಮಿಯನ್ನು ಕಾರಿಡಾರ್‌ಗೆ ಆಯ್ಕೆ ಮಾಡಿಕೊಂಡಿದ್ದನ್ನು ವಿರೋಧಿಸುತ್ತಿದ್ದೇವೆ. ನೀರಾವರಿ ಅಲ್ಲದ, ಕೈಗಾರಿಕೆಗೆ ಸೂಕ್ತವಾದ ಭೂಮಿ ಇದೆ. ಅಲ್ಲಿ ಮಾಡಲಿ. ಇಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್‌. ಬಸವಂತಪ್ಪ.

‘ನಮ್ಮ ಮೇಲೆ ಪ್ರಕರಣ ದಾಖಲು’

‘ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳುವುದಕ್ಕಾಗಿ ಪ್ರತಿಭಟನೆ ಮಾಡಿದೆವು. ಶಾಂತಿಯುತ ಹೋರಾಟ ನಮ್ಮದಾಗಿತ್ತು. ಯಾವುದೇ ಹಿಂಸೆ, ಹಾನಿ ಉಂಟುಮಾಡಿಲ್ಲ. ಆದರೂ ಸಿ.ಟಿ. ಕುಮಾರ್‌, ಡಿ. ದೇವರಾಜ್‌, ಎಂ.ಎನ್‌. ಮಲ್ಲಿಕಾರ್ಜುನ ಮತ್ತು ನಮ್ಮಿಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇನ್ನು ಹೋರಾಟ ಮಾಡಿದರೆ ಎಲ್ಲರ ಮೇಲೂ ಕೇಸು ಹಾಕುವುದಾಗಿ ಬೆದರಿಸಿದ್ದಾರೆ. ಎಷ್ಟೇ ಪ್ರಕರಣ ದಾಖಲಿಸಿದರೂ ನಾವು ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ. ಈ ಪ್ರದೇಶದಲ್ಲಿ ಕಾರಿಡಾರ್‌ ರದ್ದು ಮಾಡುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಅಣಜಿಯ ಎಸ್.ಕೆ. ಚಂದ್ರಶೇಖರ್ ಮತ್ತು ಮೆಳ್ಳೆಕಟ್ಟೆಯ ಡಿ.ಬಿ. ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆಯೇ ಅನುಮೋದನೆಯಾಗಿದೆ’

ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್‌ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅದರಂತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರೇ ಖುದ್ದಾಗಿ ಜಿಲ್ಲೆಗೆ ಬಂದು ಭೂಮಿ ಅಂತಿಮಗೊಳಿಸಿದ್ದಾರೆ. ಈ ಪ್ರಸ್ತಾವವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗಿದೆ. ನಾನು ಇತ್ತೀಚೆಗಷ್ಟೇ ವರ್ಗಾವಣೆಗೊಂಡು ಜಿಲ್ಲೆಗೆ ಬಂದಿದ್ದೇನೆ ಎಂದು ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಶೇಖರ್‌ ಜಿ.ಡಿ. ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.